JANANUDI.COM NETWORK
ಬೀಜಾಡಿ: ಯಕ್ಷಗಾನ ಕರಾವಳಿಯ ಗಂಡು ಕಲೆ. ಈ ಕಲೆಯನ್ನು ಕಲಿಯುವ ನೀವೆಲ್ಲ ನಿಜಕ್ಕೂ ಅಭಿನಂದನೆಗೆ ಅರ್ಹರು.ಯಕ್ಷಗಾನ ತರಬೇತಿಯನ್ನು ಪಡೆಯುವ ಎಲ್ಲರೂ ಒಳ್ಳೆಯ ಕಲಾವಿದರಾಗಲು ಸಾಧ್ಯವಿಲ್ಲ. ಆದರೆ ಖಂಡಿತ ಒಳ್ಳೆಯ ಪ್ರೇಕ್ಷಕರಾಗಲು ಸಾಧ್ಯ ಎಂದು ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್ ಹೇಳಿದರು.
ಅವರು ಭಾನುವಾರ ಬೀಜಾಡಿ ಮಿತ್ರಸೌಧದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಬೀಜಾಡಿ-ಗೋಪಾಡಿ ಮಿತ್ರ ಸಂಗಮ, ರೋಟರಿ ಸಮುದಾಯ ದಳ ಬೀಜಾಡಿ-ಗೋಪಾಡಿ ಆಶ್ರಯದಲ್ಲಿ ನಡೆಯುವ ಯಕ್ಷಗಾನ ತರಬೇತಿ ಉಚಿತ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಬಿರವನ್ನು ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ ಬಿ.ಎನ್ ಉದ್ಘಾಟಿಸಿ ಮಾತನಾಡಿ, ಯಕ್ಷಗಾನವನ್ನು ಕಲಿಯುವುದರ ಮೂಲಕ ಯಕ್ಷಗಾನವನ್ನು ಉಳಿಸಿ ಬೆಳಸಲು ಸಾಧ್ಯವಿದೆ. ಜತೆಗೆ ಜ್ಞಾನಶಕ್ತಿಯು ಹೆಚ್ಚಲಿದೆ ಎಂದರು.
ಇದೇ ಸಂದರ್ಭದಲ್ಲಿ ಯಕ್ಷಗುರು ಶ್ರೀಧರ ಕಾಂಚನ್ ಅವರನ್ನು ಗೌರವಿಸಲಾಯಿತು. ಹವ್ಯಾಸಿ ಯಕ್ಷಗಾನ ಕಲಾವಿದ ಸತ್ಯನಾರಾಯಣ ಆಚಾರ್,ರೋಟರಿ ಸಮುದಾಯ ದಳದ ಅಧ್ಯಕ್ಷ ಗಿರೀಶ್ ಕೆ.ಎಸ್ ಉಪಸ್ಥಿತರಿದ್ದರು.ತರಬೇತಿಗೆ 30ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದರು.