ವಿಶ್ವದಾದ್ಯಂತ ಸೆ. 5ರಂದು “ಬೆನ್ನುಹುರಿ ಅಪಘಾತ ದಿನ”ವನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಪ್ರಸ್ತುತ ಬೆನ್ನುಹುರಿ ಅಪಘಾತಕ್ಕೊಳಗಾದವರ ಸಂಖ್ಯೆ ಸುಮಾರು 25ಸಾವಿರ ದಾಟಿದೆ. ಬೆನ್ನುಹುರಿ ಅಪಘಾತ ಕ್ಯಾನ್ಸರ್, ವೈರಸ್ ಜ್ವರ ಬಾಧೆ, ಎತ್ತರದ ಸ್ಥಳಗಳಿಂದ ಬಿದ್ದ ಪರಿಣಾಮದಿಂದಾಗಿ ಹಾಗೂ ಅಪಘಾತಗಳಿಂದಾಗಿಯೂ ಬೆನ್ನುಹುರಿ ಅಪಘಾತ ಸಂಭವಿಸಬಹುದು. ಈ ಸಂದರ್ಭದಲ್ಲಿ ಪೂರ್ಣಪ್ರಮಾಣದ ಬೆನ್ನು ಹುರಿ ಅಪಘಾತಕ್ಕೊಳಗಾದ ಕರ್ನಾಟಕ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ನ ಅಧ್ಯಕ್ಷರಾದ ಮುನಿರಾಜುರವರೊಂದಿಗೆ ಈ ಸಂದರ್ಶನವನ್ನು ನಡೆಸಲಾಗಿದೆ.
ಮುನಿರಾಜುರವರ ಪರಿಚಯ:
ಮುನಿರಾಜುರವರು 33 ವರ್ಷಗಳ ಕಾಲ ಸಾಮಾನ್ಯ ಜನರಂತೆ ಬದುಕಿ ಬಾಳಿದವರು. ಹುಟ್ಟು, ಬಾಲ್ಯ, ಶೈಕ್ಷಣಿಕ ಜೀವನ, ಕಾಲೇಜು, ಔದ್ಯೋಗಿಕ ಹಾಗೂ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಬಳಿಕ ಒಂದು ಪುಟ್ಟ ಹೆಣ್ಣು ಮಗುವಿನ ತಂದೆಯಾದರು. 1998ರಲ್ಲಿ ಐದಾರು ಜನರೊಂದಿಗೆ ಹುಣಸೆ ಮರವನ್ನೇರಿ ಹುಣಸೆ ಉದುರಿಸುವ ವೇಳೆ 6-7 ಅಡಿ ಅಂತರದಲ್ಲಿ ಆಯ ತಪ್ಪಿ ಬಿದ್ದ ಬಳಿಕ ಅವರ ಜೀವನದ ಹಾದಿ ಬದಲಾಯ್ತು. ಪ್ರಾಥಮಿಕ ಚಿಕಿತ್ಸಾ ಕೇಂದ್ರದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಲು ಶಿಫಾರಸು ಮಾಡಿದ ಬಳಿಕ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಅವರು ಬೆನ್ನುಹುರಿ ಶಸ್ತಚಿಕಿತ್ಸೆಯನ್ನು ಪಡೆದುಕೊಂಡರು. ಸರ್ಜರಿಯ 15 ದಿನಗಳ ಬಳಿಕ ಭೇಟಿಯಾಗಲು ತಿಳಿಸಿದಾಗ ಬಹುಶಃ ಒಂದೆರಡು ತಿಂಗಳುಗಳಲ್ಲಿ ಗುಣಮುಖರಾಗಬಹುದೆಂದು ಮುನಿರಾಜು ಭಾವಿಸಿದ್ದರು. ಆದರೆ, ಬೆನ್ನುಹುರಿ ಗಾಯದ ಪ್ರಮಾಣದ ಕುರಿತು ತಿಳಿದ ಬಳಿಕ ತನ್ನ ದೈಹಿಕ ಸ್ಥಿತಿಯ ಬಗ್ಗೆ ಅವರಿಗೆ ಅರಿವಿಗೆ ಬಂತು. ಜೀವನ ಪೂರ್ತಿ ಇನ್ನು ತನ್ನ ದೇಹದ ಅರ್ಧಭಾಗ ತನ್ನ ನಿರ್ವಹಣಾ ಶಕ್ತಿಯನ್ನು ಕಳೆದುಕೊಂಡಿದೆ ಎಂಬುದು ಅವರಿಗೆ ತಿಳಿಯಿತು.
ಪ್ರಶ್ನೆ: ಬೆನ್ನುಹುರಿ ಅಪಘಾತದ ಬಳಿಕ ತಮ್ಮ ಜೀವನದಲ್ಲಾದ ಬದಲಾವಣೆಗಳೇನು?
ಮುನಿರಾಜು: ಪದವಿಧರನಾದ ನಾನು ಕೃಷಿಯಲ್ಲಿಯೇ ಜೀವನವನ್ನು ಕಟ್ಟಿಕೊಂಡಿದ್ದೆ. ಎಲ್ಲರಂತೆ ಲವಲವಿಕೆಯ ಜೀವನ, ಓಡಾಟ, ಶ್ರಮಗಳೆಲ್ಲ 1998ರಲ್ಲಿ ಹುಣಸೆಮರದಿಂದ ಬಿದ್ದು ಬೆನ್ನುಹುರಿ ಅಪಘಾತಕ್ಕೊಳಗಾದ ಬಳಿಕ ಬದಲಾಯ್ತು. T12ನಲ್ಲಿ ನನಗೆ ಏಟು ಬಿದ್ದುದರಿಂದ ದೇಹದ ಅರ್ಧಭಾಗ ಇನ್ನು ಚಲನಹೀನವಾಗಿದೆ ಎಂಬುದು ನನಗೆ ತಿಳಿಯಿತು. ಸತತ 8-10 ತಿಂಗಳುಗಳ ರಿಹಾಬ್ ಚಿಕಿತ್ಸೆಯನ್ನು ಪಡೆದುಕೊಂಡ ಬಳಿಕ ನನಗೆ ಆದ ಅಪಘಾತದ ಪ್ರಮಾಣ ಹಾಗೂ ಮುಂದಿನ ದಿನಗಳ ನಿರ್ವಹಣೆಯ ಬಗ್ಗೆ ಒಂದು ರೂಪುರೇಷ ಲಭಿಸಿತು. ಆದರೆ, ನನ್ನ ಪಾಡಿಗೆ ನನ್ನ ದೈನಂದಿನ ಕೆಲಸಗಳನ್ನು ಮಾಡುವುದು, ತಿನ್ನುವುದು ಮಲಗುವುದು ಬಿಟ್ಟರೆ ಎರಡು ವರ್ಷಗಳ ಕಾಲ ನಾನು ಮನೆಯಿಂದ ಹೊರಗಡೆಯ ಪ್ರಪಂಚವನ್ನು ಕಾಣಲು ಬಯಸಲೇ ಇಲ್ಲ. ಜೀವನ ಇಷ್ಟೇ ಇನ್ನು ಮುಗಿಯಿತು ಎಂಬ ಒಂದು ರೀತಿ ಖಿನ್ನತೆಯ ಜೀವನದಲ್ಲಿ ನಾನು ಲೀನನಾಗಿದ್ದೆ.
ಪ್ರಶ್ನೆ: ಬೆನ್ನುಹುರಿ ಅಪಘಾತವಾದವರು ಯಾವೆಲ್ಲ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ?
ಮುನಿರಾಜು: “ಇನ್ನು ನಾನು ನಡೆಯಲಾರೆ, ಮೊದಲಿನ ಹಾಗೆ ಬಾಳಲ್ಲ ಎಂಬ ವಾಸ್ತವಿಕತೆಯೊಂದಾದರೆ, ನನ್ನ ಜೀವನ ಇಷ್ಟೇ, ನನಗೆ ಜೀವನಾನೇ ಸಾಕು” ಎಂಬ ಭಾವನೆ ನನ್ನನ್ನು ಮಾನಸಿಕ ಖಿನ್ನತೆಗೆ ತಳ್ಳಿತ್ತು. ಈ ಖಿನ್ನತೆ ಬೆನ್ನುಹುರಿ ಅಪಘಾತಕ್ಕೊಳಗಾದವರನ್ನು ಕಾಡುವ ಮುಖ್ಯ ಸಮಸ್ಯೆ. ಇನ್ನು ದೇಹದ ಅರ್ಧ ಭಾಗಕ್ಕೆ ಸ್ಪರ್ಶಜ್ಞಾನವೇ ಇಲ್ಲದಿರುವುದು, ಕೆಲವರಿಗೆ ಕುತ್ತಿಗೆಯ ಕೆಳಭಾಗದಿಂದಲೇ ಸ್ಪರ್ಶಜ್ಞಾನವಿರುವುದಿಲ್ಲ, ಮಲಮೂತ್ರ ವಿಸರ್ಜನೆಯ ಕುರಿತು ಅರಿವಿಗೆ ಬಾರದಿರುವುದು. ಕರುಳಿನ ಚಲನೆ ಬಗ್ಗೆ ಗೊತ್ತಾಗದೇ ಇರುವುದೂ ಇದೆ. ಆದರೆ, ರಿಹಾಬ್‌ನ ಬಳಿಕ ಈಗಲೂ ನನ್ನ ಮಲಮೂತ್ರ ವಿಸರ್ಜನೆಯ ನಿರ್ವಹಣೆಯನ್ನು ನಾನೇ ನಿರ್ವಹಿಸುತ್ತಿರುವುದು ನನಗೊಂದಿಷ್ಟು ನೆಮ್ಮದಿಯನ್ನು ನೀಡಿದೆ. ಇನ್ನು ಕೆಲವರು ಹಾಸಿಗೆಯಲ್ಲಿ ಮಲಗಿಯೇ ಇರಬೇಕಾದ ಕಾರಣದಿಂದಾಗಿ ಬೆಡ್ ಸೋರ್‌ಗಳಾಗುವುದು, ಗಾಯಗಳಾಗುವುದು, ಮೂತ್ರ ಸೋಂಕು, ಕಿಡ್ನಿ ಹಾಗೂ ಗ್ಲಾಡರ್‌ಗಳಲ್ಲಿ ಕಲ್ಲಾಗುವುದು, ಮೂಲವ್ಯಾಧಿ, ಬೇದಿ, ರಕ್ತಸ್ರಾವ, ಚರ್ಮ ರೋಗದ ಸಮಸ್ಯೆಗಳು, ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದು ಸೇರಿದಂತೆ ದ್ವಿತೀಯಾಂತರ ಸಮಸ್ಯೆಗಳಿಂದ ಬೆನ್ನುಹುರಿ ಅಪಘಾತಕ್ಕೊಳಗಾದವರು ನರಳುತ್ತಿದ್ದಾರೆ.
ಪ್ರಶ್ನೆ: ಬೆನ್ನುಹುರಿ ಅಪಘಾತಕ್ಕೆ ಒಳಗಾದವರಿಗೆ ಯಾವ ರೀತಿಯ ಪ್ರಾಥಮಿಕ ಸೌಕರ್ಯ ಸೌಲಭ್ಯಗಳು ಬೇಕಿದೆ?
ಮುನಿರಾಜು: ಬೆನ್ನುಹುರಿ ಅಪಘಾತದಿಂದ ವಿಕಲಚೇತನರಾದವರಿಗೆ ಮೊದಲು ಕುಟುಂಬದ ಸಾಂತ್ವನಕ್ಕಿಂತಲೂ ಸಹಕಾರದ ಅಗತ್ಯತೆ ಇದೆ. ಜೀವನಕ್ಕೆ ಉತ್ಸಾಹ, ಉತ್ತೇಜನ ತುಂಬುವ ಗೆಳೆಯರ ಬಳಗ, ಸಂಬಂಧಿಕರು ಇವರ ನೋವಿನ ಪಾಲುದಾರರಾಗಬೇಕು. ನನ್ನ ಪತ್ನಿಗೆ ನಾನು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ. ಎರಡನೆಯದಾಗಿ ಖಿನ್ನತೆಯಿಂದ ಹೊರಬರಬೇಕಾದರೆ ಮೊದಲು ಮನೆಯಿಂದ ಹೊರ ಬರಲು ಪ್ರೇರಣೆ ನೀಡುವವರು ಬೇಕು. ನನಗೆ ನನ್ನ ಸ್ನೇಹಿತನೊಬ್ಬ ಮಡಚಿ ಇಡಬಹುದಾದ ವ್ಹೀಲ್ ಚೇರ್ ಕೊಡಿಸಿದರು. ತದನಂತರ ದಿ ಅಸೋಸಿಯೇಷನ್ ಆಫ್ ದಿ ಪೀಪಲ್ ವಿತ್ ಡಿಸೆಬಿಲಿಟಿಯ ಸಿಬ್ಬಂದಿ ಲಿಂಗಪ್ಪರವರು ಮನೆಗೆ ಭೇಟಿ ನೀಡಿ ಮೋಡಿವೇಶನಲ್ ವ್ಹೀಲ್‌ಚೇರ್ ಪಡೆಯಲು ಸೂಚಿಸಿದರಲ್ಲದೇ, ಜೀವನದಲ್ಲಿ ಸ್ವಾವಲಂಬಿಯಾಗಿ ಬಾಳಬೇಕೆಂದು ಉತ್ತೇಜಿಸಿದರು. ಅವರ ಉತ್ತೇಜನದ ಫಲವಾಗಿ ನಾನು ಮೋಟಿವೇಷನಲ್ ವ್ಹೀಲ್‌ಚೇರ್ ಖರೀದಿಸಿದೆ. ಇದಾದ ಬಳಿಕ ಕೆಲವೊಂದು ಕಾರ್ಯಾಗಾರಗಳಲ್ಲಿ ಭಾಗವಹಿಸಿದೆ. ಆಕ್ಸೆಸಿಬಿಲಿಟಿಯ ಕೊರತೆಯಿಂದಾಗಿ ವ್ಹೀಲ್‌ಚೇರ್ ಪಡೆದರೂ ಕೆಲವೊಮ್ಮೆ ಅದು ಉಪಯೋಗ ಶೂನ್ಯವಾಗಬಹುದು. ಮನೆಯಲ್ಲಿ ಶೌಚಾಲಯದ ಮರು ವಿನ್ಯಾಸ, ವ್ಹೀಲ್‌ಚೇರ್‌ನಲ್ಲಿ ಮನೆಯಿಂದ ಒಳಹೊರಗೆ ಹೋಗಲು ಬೇಕಾದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ.
ಪ್ರಶ್ನೆ: ಆಕ್ಸೆಸಿಬಿಲಿಟಿಯಿಂದ ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಪ್ರಯೋಜನಗಳಿವೆ ಎಂದಾದರೆ, ಹಳ್ಳಿಗಳಲ್ಲಿರುವವರಿಗೆ ಯಾವ ರೀತಿಯ ಆಕ್ಸೆಸಿಬಿಲಿಟಿಯ ಅಗತ್ಯತೆ ಇದೆ?
ಮುನಿರಾಜು: ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಮುಖ್ಯವಾಗಿ ಅವರ ದೈಹಿಕ ಸಂರಚನೆಗೆ ತಕ್ಕುದಾದ ವ್ಹೀಲ್‌ಚೇರ್ ಬೇಕು. ಶೌಚಾಲಯಗಳ ವಿನ್ಯಾಸವಾಗಬೇಕು, ಸೂಕ್ತವಾದ ಸಾಧನಾ ಸಲಕರಣೆಗಳು, ಸಾಮಾಜಿಕ ಪುನರ್ವಸತಿ ಹಾಗೂ ತರಬೇತಿ, ಸ್ಥಳೀಯ ಸರ್ಕಾರಗಳಿಂದ 5% ಅನುದಾನದಲ್ಲಿ ಅವರಿಗೆ ಬೇಕಾಗುವ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಬೇಕು. ಒಂದು ವೇಳೆ ಹೆಣ್ಣುಮಕ್ಕಳು ಬೆನ್ನು ಹುರಿ ಅಪಘಾತಕ್ಕೊಳಗಾಗಿದ್ದರೆ ಅವರು ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಳ್ಳಲು ಹಾಗೂ ಅಡುಗೆ ಮಾಡಿಕೊಳ್ಳಲು ತಕ್ಕುದಾದ ವಿನ್ಯಾಸವನ್ನು ಅಡುಗೆ ಮನೆಯಲ್ಲಿ ಮಾಡಿಕೊಳ್ಳಲು ನೆರವು ಲಭಿಸಬೇಕು. ಮುಖ್ಯವಾಗಿ ಬೆನ್ನುಹುರಿ ಅಪಘಾತಕ್ಕೊಳಗಾದವರು ಮನೆಯಿಂದ ಹೊರಬರಲು ಸೂಕ್ತವಾದ ರಸ್ತೆಗಳು ನಿರ್ಮಾಣವಾಗಬೇಕು. ಗಂಟೆಗಟ್ಟಲೇ ಮಲಮೂತ್ರ ವಿಸರ್ಜನೆಯ ನಿರ್ವಹಣೆಗೆ ಕಳೆಯಬೇಕಾಗಿದ್ದು, ಇದಕ್ಕೆ ತಕ್ಕುದಾದ ಶೌಚಾಲಯದ ವ್ಯವಸ್ಥೆಗಳು ಲಭಿಸಬೇಕು.
ಪ್ರಶ್ನೆ: ಬೆನ್ನುಹುರಿ ಅಪಘಾತಕ್ಕೊಳಗಾದವರ ಬೇಡಿಕೆಗಳೇನು? ಸರ್ಕಾರದಿಂದ ನೀವು ಏನನ್ನು ನಿರೀಕ್ಷಿಸುತ್ತೀರಾ?
ಮುನಿರಾಜು:
1. ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಸರ್ಕಾರ ಪ್ರತಿ ತಿಂಗಳು ಕನಿಷ್ಠ 5000.ರೂ ಪಿಂಚಣಿ ನೀಡಬೇಕು ಎಂಬುದು ನಮ್ಮ ಮುಖ್ಯ ಬೇಡಿಕೆಯಾಗಿದೆ. ಇದು ಪ್ರತಿ ತಿಂಗಳ ಚಿಕಿತ್ಸಾ ನಿರ್ವಹಣೆಗೆ ಸಹಾಯಕವಾಗಲಿದೆ.
2. ಬೆನ್ನು ಹುರಿ ಅಪಘಾತಕ್ಕೊಳಗಾದವರಿಗೆ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಸೇರಿದಂತೆ ಸಮುದಾಯ ಕೇಂದ್ರಗಳಲ್ಲಿಯೂ ಉಚಿತವಾಗಿ ಮೆಡಿಕಲ್ ಕಿಟ್‌ಗಳು ಲಭಿಸುವಂತಾಗಬೇಕು.
3. ಶಾಸಕರ ಅನುದಾನಗಳು ಹಾಗೂ ವಿಕಲಚೇತನರಿಗಾಗಿ ಮೀಸಲಿರಿಸಿದ ಅನುದಾನಗಳಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಆಕ್ಸೆಸಿಬಿಲಿಟಿ ಸೌಲಭ್ಯಗಳನ್ನು ಕಲ್ಪಿಸಬೇಕು.
4. ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಸ್ವಯಂ ಉದ್ಯೋಗ ಸ್ಥಾಪಿಸಲು ವಾಣಿಜ್ಯ ಬ್ಯಾಂಕುಗಳಿಂದ ಸಬ್ಸಿಡಿ ರಹಿತ ಸಾಲ ಸೌಲಭ್ಯಗಳು ಲಭಿಸಬೇಕು.
5. ಪ್ರತಿ ಜಿಲ್ಲೆಗಳಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರ ಪುನರ್ವಸತಿಗಾಗಿ ಜಿಲ್ಲಾಮಟ್ಟದ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಬೇಕು.
6. 2016ರ ಕಾಯ್ದೆ ಅನ್ವಯ ಗುರುತಿಸಲಾದ 21 ಅಂಗವಿಕಲತೆಗಳ ಪಟ್ಟಿಯಲ್ಲಿ 22ನೇ ಅಂಗವಿಕಲತೆಯಾಗಿ ಬೆನ್ನುಹುರಿ ಅಪಘಾತವನ್ನು ಸೇರ್ಪಡೆಗೊಳಿಸಬೇಕು.
7. ಬೆನ್ನು ಹುರಿ ಅಪಘಾತಕ್ಕೊಳಗಾದವರಿಗೆ ಹೆಲ್ತ್ ಇನ್ಶುರೆನ್ಸ್ ನೀಡಬೇಕು. ದ್ವಿತೀಯಾಂತರ ಆರೋಗ್ಯ ಸಮಸ್ಯೆಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾದಾಗ, ಕುಟುಂಬದ ಆರ್ಥಿಕ ಪರಿಸ್ಥಿತಿ ಹಾಗೂ ಹಣಕಾಸು ಸಮಸ್ಯೆಗಳು, ಪಾಲಕರ ಕೊರತೆಯು ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಖಿನ್ನತೆ ಹಾಗೂ ಆತ್ಮಹತ್ಯೆಗೆ ಪ್ರೇರಣೆಯಾಗುತ್ತಿದೆ ಇದನ್ನು ಮಟ್ಟ ಹಾಕಲು ವಿಮೆ ಯೋಜನೆಯು ಸಹಾಯಕವಾಗಬಲ್ಲದು.
ಪ್ರಶ್ನೆ: ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ನೀವು ನೀಡಲು ಬಯಸುವ ಸಂದೇಶ ಹಾಗೂ ಸಲಹೆ?
ಮುನಿರಾಜು: “ನಂದಿಷ್ಟೇ ಜೀವನ… ಇಲ್ಲಿಗೆ ಮುಗಿತು ಎಂದು ಮನೆಯಲ್ಲಿ ಕೂರುವ ಬದಲು ಮೊದಲು ಈ ಗುಂಗಿನಿಂದ ಹೊರಬರಬೇಕಿದೆ. ಬದುಕಿದಷ್ಟು ದಿನ ಸಮಾಜದಲ್ಲಿ ಬೆರೆತು ಸ್ವಾವಲಂಬಿಗಳಾಗಿ ಬಾಳಬೇಕಿದೆ” ಇದು ನಾನು ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ನೀಡಲು ಬಯಸುವ ಸಂದೇಶ. ಜನರು ನೋಡುವ ನೋಟ, ಆಡುವ ಮಾತುಗಳು ಬದಲಾಗಬೇಕಿದ್ದರೆ ನಾವು ಮೊದಲು ಸ್ವಾವಲಂಬಿಗಳಾಗಬೇಕು. ನಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಶಕ್ತರಾಗಬೇಕು. ಇಂದು ವ್ಹೀಲ್‌ಚೇರ್‌ನ ಸಹಾಯದಿಂದಲೇ ಹೊರಬಂದ ನಾನು ಇಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಮ್ಮದೇ ಆದ ನವಜೀವನ ಸೇವಾ ಸಹಕಾರ ಸಂಘ(ರಿ)ವನ್ನು ಕಟ್ಟಿಕೊಂಡು ಎಪಿಡಿ ಸೇರಿದಂತೆ ಹತ್ತು ಹಲವು ಸಂಘಟನೆಗಳ ಜೊತೆ ಕೈಜೋಡಿಸಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ತಿಂಗಳ ವೈದ್ಯಕೀಯ ಕಿಟ್‌ಗಳ ವಿತರಣೆ, ಔಷಧಿ ವಿತರಣೆಯನ್ನು ಮಾಡುತ್ತಿದ್ದೇವೆ. ಇದಲ್ಲದೇ ಕೊರೋನ ಅವಧಿಯಲ್ಲಿ ರೇಶನ್ ಕಿಟ್ ವಿತರಣೆ, ಪ್ರಸ್ತುತ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್ಸ್ ವಿತರಣೆ, ಸ್ವಯಂ ಉದ್ಯೋಗ ಹಾಗೂ ಪುನರ್ವಸತಿಗೆ ಲಭ್ಯವಿರುವ ಸರ್ಕಾರಿ ಸೇವೆಗಳನ್ನು ಅರ್ಹರಿಗೆ ಒದಗಿಸಿಕೊಡುವುದು, ಚುನಾವಣಾ ಸಂದರ್ಭದಲ್ಲಿ ಮತದಾನ ಕೇಂದ್ರಗಳಲ್ಲಿ ವಿಕಲಚೇತನರಿಗೆ ಬೇಕಾಗುವ ಸೌಲಭ್ಯಗಳ ಪರಿಶೀಲನೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಹಾಗಾಗಿಯೇ ಹತ್ತು ಹಲವು ಪ್ರಶಸ್ತಿಗಳು ಇಂದು ನನ್ನ ಪಾಲಿಗೆ ಒಲಿದು ಬಂದಿವೆ. “ನಮ್ಮ ಸಮಸ್ಯೆ ಸಮಸ್ಯೆನೇ ಅಲ್ಲ ಎಂದು ಭಾವಿಸಿ ನಾವು ಯಾವಾಗ ಹೊರ ಬರುತ್ತೇವೆಯೋ ಆಗಲೇ ನಮ್ಮಿಂದ ಜೀವನದಲ್ಲಿ ಒಂದಿಷ್ಟು ಸಾಧಿಸಲು ಉತ್ಸಾಹ ಮೂಡುತ್ತದೆ”. ಸ್ವಾವಲಂಬಿಗಳಾಗಿ ಬದುಕುವ ಮೂಲಕ ಪ್ರತಿಯೊಬ್ಬರಿಗೂ ಬೆನ್ನುಹುರಿ ಅಪಘಾತದ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯತೆ ಇದೆ. ಯಾಕೆಂದರೆ ಬೆನ್ನುಹುರಿ ಅಪಘಾತ ಜೀವನದ ಯಾವುದೇ ಘಟ್ಟದಲ್ಲಿ ಸಂಭವಿಸಬಹುದು ಈ ಬಗ್ಗೆ ಸಾಮಾಜಿಕ ಜಾಗೃತಿ ಅತ್ಯಗತ್ಯ.