ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ ಏ.17.: ಜೀವನ ಹಾಗೂ ಸಮಯ ಈ ವಿಶ್ವದ ಬಹುದೊಡ್ಡ ಶಿಕ್ಷಕರು. ಶಿಕ್ಷಣ ಮಾನವನಿಗೆ ಉತ್ತಮ ಮೌಲ್ಯಗಳನ್ನು, ಕೌಶಲ್ಯಗಳನ್ನು ಮತ್ತು ಅನುಭವಗಳೊಂದಿಗೆ ಕಲಿಸುತ್ತಾ ಹೋಗುತ್ತದೆ. ನಮ್ಮ ವ್ಯಕ್ತಿತ್ವ ಹೊಳೆಯಲು ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸಿ ಆರ್ ಅಶೋಕ್ ತಿಳಿಸಿದರು.
ನಗರದ ಪಿ.ಸಿ ಬಡಾವಣೆಯಲ್ಲಿಂದು ಜಿಲ್ಲಾ ಯುವ ಬರಹಗಾರರ ವೇದಿಕೆ ಏರ್ಪಡಿಸಿದ್ದ ಡಾ.ರಾಧಾಕೃಷ್ಣನ್ ರವರ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು .
ದೇಶ ಅಭಿವೃದ್ಧಿ ಹೊಂದಬೇಕಾದರೆ ಅದರಲ್ಲಿ ಶಿಕ್ಷಕರ ಜೀವಾಳವಾಗಿರುತ್ತಾರೆ. ಯಾವುದೇ ಕ್ಷೇತ್ರದಲ್ಲಾದರೂ ಶಿಕ್ಷಕ ಇಲ್ಲದೆ ಅಭಿವೃದ್ಧಿ ಅಸಾಧ್ಯ ಓರ್ವ ಶಿಕ್ಷಕ ದೇಶದ ರಾಷ್ಟ್ರಪತಿಯಾಗಿ ಮಾದರಿ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ ಎಂಬುದನ್ನು ಸರ್ವಪಲ್ಲಿ ರಾಧಾಕೃಷ್ಣನ್ ಅವರು ಉತ್ತಮ ಉದಾಹರಣೆಯಾಗಿದ್ದಾರೆ ಎಂದರು .
ನಗರಸಭೆ ಸದಸ್ಯ ರಾಕೇಶ್ ಮಾತನಾಡಿ ಬೋಧನಾ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಗಳಲ್ಲಿ ಒಂದು ಎಂಬುದನ್ನು ಪರಿಗಣಿಸಿರುವ ದೇಶ ನಮ್ಮದು .ಇದರಿಂದ ಮಕ್ಕಳಿಗೆ ಇದರ ಜತೆಗೆ ಸರಿ ತಪ್ಪುಗಳನ್ನು ತಿದ್ದುವ ಅವರಲ್ಲಿನ ಆಸಕ್ತಿಗಳನ್ನು ವೃದ್ಧಿಸುವ ಮತ್ತು ಅವರ ಬದುಕಿಗೆ ಗುರಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು .
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಯುವ ಬರಹಗಾರರ ವೇದಿಕೆ ಅಧ್ಯಕ್ಷ ಡಾ.ಶರಣಪ್ಪ ಗಬ್ಬೂರ್ ಮಾತನಾಡಿ ಸಮಾಜ ರೂಪಿಸುವ ಶಿಕ್ಷಕರನ್ನು ಹೆಣೆಯುವ ಕಾರ್ಯದಲ್ಲಿ ವೇದಿಕೆ ತನ್ನದೇ ಆದ ಕಾರ್ಯ ನಿರ್ವಹಿಸುತ್ತಿದ್ದು ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು
ಸಮಾರಂಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ ಶ್ರೀನಿವಾಸ್, ಶಿಕ್ಷಣ ಸಂಯೋಜಕ ಆರ್ ಶ್ರೀನಿವಾಸನ್ ,ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಪ್ರಧಾನ ಕಾರ್ಯದರ್ಶಿ ನಂದೀಶ್ ಕುಮಾರ್. ಮುಖ್ಯೋಪಾಧ್ಯಯ ಬಿ. ರವಿಚಂದ್ರ , ಶಾಲಾ ಸಹ ಶಿಕ್ಷಕರು ಮತ್ತಿತರರು ಉಪಸ್ಥಿತರಿದ್ದರು