ಕೋಲಾರ,ಸೆ.10: ನಗರದ ಹೊರವಲಯದಲ್ಲಿರುವ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಆವರಣದಲ್ಲಿ ಮನೋರೋಗ ವಿಭಾಗದಿಂದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಅಧೀಕ್ಷಕ ಡಾ.ಕೃಷ್ಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆತ್ಮಹತ್ಯೆ ತಡೆಗಟ್ಟುವಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಪಾತ್ರ ಮುಖ್ಯವಾಗಿರುತ್ತದೆ. ನಾವು ಆತ್ಮಸ್ಥೈರ್ಯ ಮತ್ತು ದೈರ್ಯವನ್ನು ಕೊಡುವುದರಿಂದ ಆತ್ಮಹತ್ಯೆಯನ್ನು ತಕ್ಕಮಟ್ಟಿಗೆ ತಗ್ಗಿಸಬಹುದು ಎಂದರು.
ಮನೋರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮೋಹನರೆಡ್ಡಿ ಮಾತನಾಡಿ, ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಪದೇಪದೇ ಸಾಯುವ ಕುರಿತು ಮಾತನಾಡುತ್ತಾ ಇರುತ್ತಾನೆ. ಅಂತಹ ವ್ಯಕ್ತಿಗಳನ್ನು ಶೀಘ್ರವಾಗಿ ಮನೋವೈದ್ಯರಲ್ಲಿ ಕರೆತರುವಂತೆ ಕಿವಿಮಾತು ಹೇಳಿದರು.
ಮನೋತಜ್ಞ ಡಾ.ಜಗದೀಶ್ ಸಮಾಲೋಚನೆಗೆ ಕರೆತರುವಂತೆ ಸೂಚನೆ ನೀಡಿದರು. ವಿದ್ಯಾರ್ಥಿಗಳು ಕಿರುನಾಟಕ ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಉಪಧೀಕ್ಷಕ ಡಾ.ದಿನೇಶ್, ಡಾ.ರಾಜಕುಮಾರ, ಮನೋವೈದ್ಯರುಗಳಾದ ಡಾ.ರುತಸ್ನೇಹ, ಡಾ.ಪುರುಷೋತ್ತಮ್, ಡಾ.ಕಮರಾಸ್, ಡಾ.ಸಹನ, ಡಾ.ಶರತ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.