ಕೋಟ: ಜಾತಿ ಧರ್ಮವನ್ನು ಮೀರಿ ನಮ್ಮೆಲ್ಲರನ್ನು ಭಾವುಕರಾಗಿ ಬಂಧಿಸಲ್ಪಡುವ ಕುಂದಾಪ್ರ ಕನ್ನಡ ನಮ್ಮೆಲ್ಲರ ಹೆಮ್ಮೆಯ ಭಾಷೆಯಾಗಿದೆ. ಇದನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳ ಕೆಲಸ ಅದ್ವಿತೀಯ ಎಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ರೇಖಾ ವಿ.ಬನ್ನಾಡಿ ಹೇಳಿದರು
ಅವರು ಗುರುವಾರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಮಿತ್ರ ಸಂಗಮ ಬೀಜಾಡಿ-ಗೋಪಾಡಿ ಇವರ ಆಶ್ರಯದಲ್ಲಿ ರೋಟರಿ ಕ್ಲಬ್ ಕುಂದಾಪುರ ರಿವರ್ಸೈಡ್, ರೋಟರಿ ಸಮುದಾಯ ದಳ ಬೀಜಾಡಿ-ಗೋಪಾಡಿ ಇವರ ಸಹಯೋಗದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ 4ನೇ ವರ್ಷದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಹಾಗೂ ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ರೀಡೋಪಕರಣಗಳ ವಿತರಣೆ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದರು.
ಕುಂದಾಪುರದ ಕುಂದಗನ್ನಡ ಕಳೆಗುಂದದಿರಲಿ.ಜತೆಗೆ ಅದು ನಮ್ಮ ಹೆಮ್ಮೆಯ ಭಾಷೆಯಾಗಿ ಘಮಘಮಿಸಲಿ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ ನಾಗರಾಜ್ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಶ್ರಮ ಸಂಸ್ಕೃತಿಯ ಗುರಿಕಾರ ಕೃಷ್ಣ ಮೆಂಡನ್ ಗೋಳಿಬೆಟ್ಟು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಅಲ್ಲದೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ ಮೂಡು ಕ್ರೀಡೋಪಕರಣವನ್ನು ಹಸ್ತಾಂತರಿಸಲಾಯಿತು. ಕೋಟ ಜನಸೇವಾ ಟ್ರಸ್ಟ್ ಪ್ರವರ್ತಕ ವಸಂತ್ ಗಿಳಿಯಾರು,ಸಾಂಸ್ಕøತಿಕ ಚಿಂತಕ ಉದಯ ಶೆಟ್ಟಿ ಪಡುಕರೆ ಶುಭ ಹಾರೈಸಿದರು. ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ ಬಿ.ಎನ್.,ಮಿತ್ರ ಸಂಗಮದ ಕಾರ್ಯದರ್ಶಿ ರಾಜೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್ ಸ್ವಾಗತಿಸಿದರು.ಅನುಪ್ಕುಮಾರ್ ಬಿ.ಆರ್ ಸನ್ಮಾನ ಪತ್ರ ವಾಚಿಸಿದರು. ಮಿತ್ರ ಸಂಗಮದ ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕುಂದಾಪುರ ರಿವರ್ಸೈಡ್ನ ಅಧ್ಯಕ್ಷ ಮಂಜುನಾಥ ಕೆ.ಎಸ್ ವಂದಿಸಿದರು.
ಕಿಕ್ಕಿರಿದು ಜನಸ್ತೋಮ
ಕುಂದಾಪುರ ಕನ್ನಡ ದಿನಾಚರಣೆಯ ಸಂದರ್ಭದಲ್ಲಿ ಭಾಷಾಭಿಮಾನಕ್ಕೆ ಕಿಕ್ಕಿರಿದ ಜನ ಸೇರಿದ್ದು,ಎಲ್ಲರಿಗೂ ಖುಷಿಕೊಟ್ಟಿದೆ. ಸುಮಾರು 15ಕ್ಕೂ ಹೆಚ್ಚು ಬಗೆಯ ಖಾದ್ಯಗಳನ್ನು ಕಾರ್ಯಕ್ರಮದ ಕೊನೆಯಲ್ಲಿ ನೆರೆದ ಭಾಷಾಭಿಮಾನಿಗಳಿಗೆ ವಿತರಿಸಲಾಯಿತು.