ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ನೆಹರು ಯುವ ಕೇಂದ್ರದ ಸಹಯೋಗದೊಂದಿಗೆ “ವಿಶ್ವ ಮಾನವ ಹಕ್ಕುಗಳ ದಿನಾಚರಣೆ”

ಕುಂದಾಪುರ: ಡಿಸೆಂಬರ್ 10ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ನೆಹರು ಯುವ ಕೇಂದ್ರದ ಸಹಯೋಗದೊಂದಿಗೆ “ವಿಶ್ವ ಮಾನವ ಹಕ್ಕುಗಳ ದಿನಾಚರಣೆ” ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬ್ರಹ್ಮಾವರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮುಕ್ತಾಬಾಯಿ “ಮಾನವ ಹಕ್ಕುಗಳು ಮತ್ತು ಯುವಜನತೆ” ಎಂಬ ವಿಷಯದ ಕುರಿತು ಮಾತನಾಡಿ ಯಾವುದೇ ಕಾರಣಕ್ಕೂ ಕೆಟ್ಟ ಅಭ್ಯಾಸಗಳಿಂದ ದೂರ ಇದ್ದು ವಿದ್ಯಾರ್ಥಿಜೀವನವನ್ನು ಸಾಕಾರಗೊಳಿಸುವದರ ಜೊತೆಗೆ ಒಳ್ಳೆಯ ಅಧಿಕಾರಿಗಳಾಗಿ ಸಮಾಜದ ಋಣವನ್ನು ತೀರಿಸಲು ನಿಮ್ಮ ಪ್ರಯತ್ನ ಇರಬೇಕು. ಮಾದಕವಸ್ತು ವ್ಯಸನ , ಮೊಬೈಲ್ ಗೀಳಿಗೆ ಒಳಗಾಗಬೇಡಿ. ಅದು ನಮ್ಮ ಒಳ್ಳೆಯ ಹವ್ಯಾಸಗಳನ್ನು ನಾಶಮಾಡಿ ಸುಸ್ಥಿರ ಜೀವನವನ್ನು ಕಸಿದುಕೊಳ್ಳುವ ಮೊದಲೇ ಜಾಗೃತರಾಗಬೇಕು ಎಂದು ಹೇಳಿದರು. ಕೆಲವು ಮೂಲ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ನೆಹರು ಯುವ ಕೇಂದ್ರ ಉಡುಪಿ ಜಿಲ್ಲಾ ಯುವಜನ ಅಧಿಕಾರಿ ವಿಲ್ಫ್ರೆಡ್ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಲೇಜಿನ ಮಾನವ ಹಕ್ಕುಗಳ ಕೋಶದ ಸಂಯೋಜಕರಾದ ಪ್ರೊ. ಗೋಪಾಲ್ ಕೆ ಸ್ವಾಗತಿಸಿದರು. ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ ವಂದಿಸಿದರು.
ವಿದ್ಯಾರ್ಥಿನಿಯರಾದ ಚಂದ್ರಿಕಾ ಕಾರ್ಯಕ್ರಮ ನಿರ್ವಹಿಸಿ, ರೋಹಿಣಿ ಅತಿಥಿಗಳನ್ನು ಪರಿಚಯಿಸಿದರು.