ವಿಶ್ವ ಹ್ಯಾಪಿನೆಸ್ಸ್‌ ವರದಿ: ಭಾರತಕ್ಕೆ 146 ರಲ್ಲಿ 136ನೇ ರ್‍ಯಾಂಕ್‌‌, ಪಾಕಿಸ್ತಾನ ಕೂಡ ಭಾರತಕ್ಕಿಂತ ಉತ್ತಮ

JANANUDI.COM NETWORK

ಮಾರ್ಚ್ 20ರಂದು ‘ಅಂತಾರಾಷ್ಟ್ರೀಯ ಹ್ಯಾಪಿನೆಸ್‌ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಇದರ ಕೆಲವೇ ದಿನಗಳ ಮೊದಲು ವಿಶ್ವ ಸಂಸ್ಥೆಯು ತನ್ನ 10ನೇ ವರ್ಷದ ‘ವಿಶ್ವ ಹ್ಯಾಪಿನೆಸ್ಸ್‌ ವರದಿ’ಯನ್ನು ಬಿಡುಗಡೆ ಮಾಡಿದ್ದು 146 ದೇಶಗಳ ಈ ಪಟ್ಟಿಯಲ್ಲಿ ಭಾರತವು 136ನೇ ಸ್ಥಾನವನ್ನು ಪಡೆದಿದೆ. ಪಟ್ಟಿಯಲ್ಲಿ ಕೊನೆಯ ದೇಶವಾಗಿ ಅಪಘಾನಿಸ್ತಾನ 146 ಸ್ಥಾನ ಪಡೆದು ವಿಶ್ವದ ಅತೃಪ್ತ ದೇಶವಾಗಿ ಹೊಮ್ಮಿದೆ.
ಉಳಿದಂತೆ ಭಾರತದ ನೆರೆಯ ದೇಶಗಳಾದ ಚೀನಾ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಮಯನ್ಮಾರ್‌‌ ಮತ್ತು ಶ್ರೀಲಂಕಾ ದೇಶಗಳು ಪಟ್ಟಿಯಲ್ಲಿ ಭಾರತಕ್ಕಿಂತ ಮೇಲೆ ಇವೆ.
ಫಿನ್‌ಲ್ಯಾಂಡ್‌ ದೇಶವು ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿ ಸತತ ಐದನೇ ವರ್ಷವೂ ಹೆಸರಿಸಲ್ಪಟ್ಟಿದೆ.. ಈ ಪಟ್ಟಿಯಲ್ಲಿ ಡೆನ್ಮಾರ್ಕ್ ಎರಡನೇ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಐಸ್‌ಲ್ಯಾಂಡ್‌, ಸ್ವಿಟ್ಜರ್ಲ್ಯಾಂಡ್ ಮತ್ತು ನೆದರ್ಲ್ಯಾಂಡ್ ಇವೆ.ಪ್ರಪಂಚದಾದ್ಯಂತ 150ಕ್ಕೂ ಹೆಚ್ಚು ದೇಶಗಳ ಜಾಗತಿಕ ಸಂತೋಷದ ಶ್ರೇಯಾಂಕವನ್ನು ಹೊಂದಿರುವ ‘ವರ್ಲ್ಡ್ ಹ್ಯಾಪಿನೆಸ್ ವರದಿ’ಯು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರಗಳ ನೆಟ್‌ವರ್ಕ್‌ನಿಂದ ಪ್ರತಿ ವರ್ಷ ಬಿಡುಗಡೆಯಾಗುತ್ತದೆ.
“ದೇಶವೊಂದರ ಸರ್ಕಾರಗಳು ತಮ್ಮ ಜನರ ಮೇಲೆ ಹೇಗೆ ಕಾಳಜಿ ವಹಿಸುತ್ತವೆ ಎಂಬುದರ ಮೇಲೆ ದೇಶಗಳು ರ್‍ಯಾಂಕಿಂಗ್ ಪಡೆಯುತ್ತದೆ. ನಿರ್ದಿಷ್ಟ ದೇಶದ ಜನರ ಸಂತೃಪ್ತಿಯ ಜೀವನ ಆ ದೇಶದ ಉನ್ನತ ರೇಟಿಂಗ್‌ಗಳಿಗೆ ಕಾರಣವಾಗುತ್ತದೆ” ಎಂದು ಆಲ್ಟೊ ವಿಶ್ವವಿದ್ಯಾಲಯದ ತಜ್ಞ ಫ್ರಾಂಕ್ ಮಾರ್ಟೆಲಾ ವಿವರಿಸುತ್ತಾರೆ.
ಸಂಖ್ಯಾಶಾಸ್ತ್ರಜ್ಞರು ಗ್ಯಾಲಪ್‌ ವಲ್ಡ್‌ ಪೋಲ್‌ ಮತ್ತು ತಲವಾರು GDP, ಜೀವಿತಾವಧಿ, ಆರೋಗ್ಯಕರ ಜೀವಿತಾವಧಿ, ಭ್ರಷ್ಟಾಚಾರದ ಗ್ರಹಿಕೆಗಳು, ಉದಾರತೆ, ಜೀವನವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ, ಆರೋಗ್ಯಕರ ಜೀವಿತಾವಧಿ, ಸಾಮಾಜಿಕ ಬೆಂಬಲ ಅಂಶಗಳ ಡೇಟಾದ ಮೇಲೆ ಶ್ರೇಯಾಂಕವನ್ನು ಆಧರಿಸಿ ಈ ವರದಿಯನ್ನು ತಯಾರಿಸುತ್ತಾರೆ ಎಂದು ತಿಳಿದು ಬಂದಿದೆ.