ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಸಕಲ ಜೀವರಾಶಿಗಳಿಗೂ ಇರುವ ಒಂದೇ ಭೂಮಿಯನ್ನು ತಮ್ಮ ಸ್ವಾರ್ಥಕ್ಕಾಗಿ ಕಲುಷಿತಗೊಳಿಸದೇ ಪರಿಸರ ಸಂರಕ್ಷಿಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಹೆಚ್.ಗಂಗಾಧರ್ ಕರೆ ನೀಡಿದರು.
ಕರ್ನಾಟಕ ರಾಜ್ಯಪರಿಸರ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹೀಂದ್ರ ಏರೋ ಸ್ಟ್ರೆಕ್ಚರ್ ಪ್ರೈ.ಲಿ. ಇವರ ಸಹಯೋಗದಲ್ಲಿ ಮಹೀಂದ್ರ ಕಾರ್ಖಾನೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಭೂಮಿಯನ್ನು ಮಾತೃಸ್ವರೂಪಿಯಾಗಿ ನಮ್ಮ ಸಂಸ್ಕøತಿಯಲ್ಲಿ ಕಾಣುತ್ತೇವೆ, ಆ ತಾಯಿಯನ್ನು ತೊಂದರೆಗೀಡು ಮಾಡಿದರೆ ಮನುಷ್ಯ ಮಾತ್ರವಲ್ಲ, ಪ್ರಾಣಿ ಸಂಕುಲಕ್ಕೂ ಉಳಿಗಾಲವಿಲ್ಲ, ಭೂಮಿ ನಮಗೆ ಅಪಾರ ಕೊಡುಗೆ ನೀಡಿದೆ ಆದರೆ ನಾವು ಭೂಮಿಗೆ ಏನು ನೀಡಿದ್ದೇವೆ ಎಂಬುದನ್ನು ಅರಿತು ಪರಿಸರ ಸಂರಕ್ಷಿಸುವ ಕಾರ್ಯದಲ್ಲಿ ಯೋಚಿಸಬೇಕು ಎಂದರು.
ನಮ್ಮ ಸ್ವಾರ್ಥಕ್ಕಾಗಿ ಇಂದು ಬೆಟ್ಟಗಳನ್ನೂ ಕರಗಿಸುತ್ತಿದ್ದೇವೆ, ನೆಲದ ಮೇಲ್ಮಣ್ಣನ್ನು ಹಾಳು ಮಾಡಿ ಗಿಡಮರಗಳು ಬೆಳೆಯದಂತೆ ಮಾಡುತ್ತಿದ್ದೇವೆ, ಮರಗಳ ಬದಲಿಗೆ ಕಾಂಕ್ರಿಟ್ ಕಾಡುಗಳು ತಲೆಯೆತ್ತುತ್ತಿರುವುದರಿಂದ ಮಳೆ ಬಂದರೆ ನೀರು ಇಂಗದೇ ಹಾಗುತ್ತಿರುವ ಹಾನಿಗೆ ಗಿಡಮರ ನಾಶಪಡಿಸಿದ ಮನುಷ್ಯರೇ ನೇರವಾಗಿ ಕಾರಣರಾಗಿದ್ದೇವೆ ಎಂದು ತಿಳಿಸಿದರು.
ಹಿರಿಯ ವಕೀಲ ಕೆ.ಆರ್.ಧನರಾಜ್, ಕಾರ್ಮಿಕರಿಗೆ ಸಂಬಂಧಿಸಿದ ಕಾಯಿದೆಗಳು ಮತ್ತು ಸಿಗುವ ಪರಿಹಾರಗಳು ಮತ್ತು ಅವುಗಳನ್ನು ಪಡೆಯುವ ವಿಧಾನ, ಕಾರ್ಖಾನೆಗಳ ಕಾಯಿದೆ, ಕಾರ್ಮಿಕರಿಗೆ ಇರುವ ಸೌಲಭ್ಯಗಳ ಕುರಿತು ಅರಿವು ಮೂಡಿಸಿದರು.
ಪರಿಸರ ನಿಯಂತ್ರಣ ಮಂಡಳಿಯ ಉಪಪರಿಸರ ಅಧಿಕಾರಿ ಬಿ.ಸಿ.ಶಿವಮೂರ್ತಿ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ, ಇದರಲ್ಲಿ ಕಾರ್ಮಿಕರ ಜವಾಬ್ದಾರಿಯೂ ಅಧಿಕವಾಗಿದೆ, ನಮ್ಮ ಸುತ್ತಲ ಪರಿಸರ ಚೆನ್ನಾಗಿದ್ದರೆ ಮಾತ್ರ ನಾವು ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂಬ ಸತ್ಯ ಅರಿಯಬೇಕು ಎಂದರು.
ಜಿಲ್ಲಾ ಪರಿಸರ ಅಧಿಕಾರಿ ರಾಜಶೇಖರ್ ಮಾತನಾಡಿ, ಕಾರ್ಖಾನೆಗಳ ಸ್ಥಾಪನೆಗಾಗಿ ಪರಿಸರ ನಿಯಂತ್ರಣ ಮಂಡಳಿಯಿಂದ ಪರವಾನಗಿ ಪಡೆಯುವ ಕುರಿತಾದ ನಿಯಮಗಳ ಕುರಿತು ವಿವರಿಸಿ, ಯಾವುದೇ ಕೈಗಾರಿಕೆ ಪರಿಸರಕ್ಕೆ ಹಾನಿಯುಂಟು ಮಾಡಬಾರದು ಎಂಬುದು ನಿಯಮವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹೀಂದ್ರ ಕಂಪನಿಯ ಮುಖ್ಯಸ್ಥ ರೇಣುಕಾಸ್ವಾಮಿ ಮಾತನಾಡಿ, ಕಂಪನಿಯಲ್ಲಿ ಪರಿಸರ ಸಂರಕ್ಷಣೆಗೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಿ, ಪರಿಸರ ಸಂರಕ್ಷಣೆ ಕುರಿತಂತೆ ತಮ್ಮ ಸಂಸ್ಥೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಂದಿರುವ ಪ್ರಶಸ್ತಿಗಳ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ವಕೀಲ ವೆಂಕಟೇಶ್, ರಾಜಶೇಖರನ್ ಮೊದಲಾದವರು ಉಪಸ್ಥಿತರಿದ್ದರು.