

ಕೋಲಾರ,ಡಿ.13 ನಗರದ ಹೊರವಲಯದಲ್ಲಿರುವ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಸೂಕ್ಷ್ಮ ಧ್ಯಾನದ ಬಗ್ಗೆ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಕೆನಡಾದ ಪೀಸ್ ಟ್ರೀ ಸಂಸ್ಥೆಯ ಡಾ. ಸುಮನ್ ಕೊಲ್ಲಿಪಾರ ಅವರು ಕ್ಷೇಮ ಹಾಗೂ ಏಕತಾ ಭಾವ ಸ್ವ-ಸಹಾನುಭೂತಿ ಸಾಧಿಸುವಲ್ಲಿ ಹೇಗೆ ಸಹಕಾರಿ ಎಂಬುದನ್ನು ತಿಳಿಸಿದರು. ಸೂಕ್ಷ್ಮ ಧ್ಯಾನ ಇದೊಂದು ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದ್ದು, ಇದನ್ನು ಮಾಸ್ಟರ್
ಸುನೀತಾ ಅಮ್ಮ ಅವರು ಪುನರ್ವಿನ್ಯಾಸಗೊಳಿಸಿದ್ದಾರೆ. ಈ ಚಿಕಿತ್ಸಾ ಪದ್ಧತಿಯು ಆಧುನಿಕ ಜೀವಶೈಲಿಯ ಅತಿ ಒತ್ತಡವನ್ನು ನಿಭಾಯಿಸಿಕೊಂಡು, ಯೋಗದ ಉನ್ನತ ಸ್ಥಿತಿಯಾದ ಸಮಾಧಿಯನ್ನು (ಏಕತಾ ಭಾವ) ಸುಲಭವಾಗಿ ತಲುಪಲು ಹೇಗೆ ಸಹಕಾರಿಯಾಗಿದೆ ಎಂಬುದನ್ನು ತಿಳಿಸಿದರು.
ದೇಹದಲ್ಲಿರುವ ಕೋಟ್ಯಂತರ ಜೀವಕೋಶಗಳನ್ನು ದುರಸ್ತಿಗೊಳಿಸಿ, ನವ ಚೈತನ್ಯವನ್ನುತುಂಬಿ, ಪುನಶ್ಚೇತನಗೊಳಿಸಲು ಸೂಕ್ಷ್ಮ ಧ್ಯಾನ ಅವಕಾಶ ಮಾಡಿಕೊಡುವುದಲ್ಲದೇ, ಮನಸ್ಸು ಪೂರ್ಣ ನಿಶ್ಚಲ ಸ್ಥಿತಿಯನ್ನು ಅನುಭವಿಸಿ, ಆತ್ಮದ ನಿಜಸ್ಥಿತಿಯಾದ ಪೂರ್ಣಾನಂದವನ್ನು ಆಸ್ವಾದಿಸಲು ಹೇಗೆಲ್ಲ ದಾರಿ ಮಾಡಿಕೊಡುತ್ತದೆ ಎಂಬುದನ್ನು ವಿವರಿಸಿದರು. ಒಟ್ಟಾರೆಯಾಗಿ ಹೇಳುವುದಾದರೆ ಸೂಕ್ಷ್ಮ ಇದು ಕ್ಷೇಮ, ಪೂರ್ಣತೆ ಹಾಗೂ ಏಕತಾ ಭಾವವನ್ನು ಹೊಂದಲು ಇರುವ ಮಾರ್ಗ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

