ಪ್ರೌಢಶಾಲಾ ಶಿಕ್ಷಕರಿಗೆ ಮಾನಸಿಕ ಆರೋಗ್ಯ ಕುರಿತ ಕಾರ್ಯಾಗಾರ:ಮಾನಸಿಕ ಆರೋಗ್ಯದ ಬಗ್ಗೆ ತಪ್ಪು ಕಲ್ಪನೆ ಬೇಡ-ಡಾ.ನಾರಾಯಣಸ್ವಾಮಿ

ಕೋಲಾರ:- ಮಾನಸಿಕ ಆರೋಗ್ಯದ ಕುರಿತು ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ, ಚಿಕಿತ್ಸೆ ನೀಡಿದರೆ ಗುಣಮುಖರಾಗಲು ಸಾಧ್ಯ ಎಂಬ ಸತ್ಯವನ್ನು ಸಮಾಜಕ್ಕೆ ಮುಟ್ಟಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲ್ಲೂಕಿನ ಪ್ರೌಢಶಾಲೆಗಳ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯದ ಕುರಿತ ಅರಿವು ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ದೆವ್ವ,ಭೂತ, ಗಾಳಿ ಎಂಬ ಮೂಢನಂಬಿಕೆಯಿಂದ ಹೊರಬರಬೇಕು, ಮಾನಸಿಕ ಆರೋಗ್ಯ ರಕ್ಷಣೆಗೆ ವೈದ್ಯರ ಸಲಹೆ,ಚಿಕಿತ್ಸೆ ಪಡೆಯಬೇಕು ಎಂದ ಅವರು, ಸಮಾಜಕ್ಕೆ ಮಾನವ ಸಂಪನ್ಮೂಲವನ್ನು ಸಿದ್ದಪಡಿಸುವ ಶಿಕ್ಷಕರ ಜವಾಬ್ದಾರಿ ಅಧಿಕವಾಗಿದ್ದು ಮೊದಲು ನೀವು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಸರ್ಕಾರ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‍ಗೆ ಆಧಾರ್ ಲಿಂಕ್ ಮಾಡಿಸುವ ಕುರಿತು ಮಾಹಿತಿ ನೀಡಿ, ಆರೋಗ್ಯ ಇಲಾಖೆ ಜನರ ಆರೋಗ್ಯ ರಕ್ಷಣೆಗೆ ಸದಾ ಸಿದ್ದವಿದ್ದು, ಜನರು ಇದರ ಸದುಪಯೋಗ ಪಡೆಯಲು ಅವರು ಮನವಿ ಮಾಡಿದರು.

ಸಾಮಾನ್ಯಜನರಲ್ಲೇ ಕ್ರೂರತ್ವ ಹೆಚ್ಚು


ಹಿರಿಯ ಮನೋವೈದ್ಯೆ ಡಾ.ವಿಜೇತಾದಾಸ್ ಮಾನಸಿಕ ಆರೋಗ್ಯದ ಕುರಿತು ಉಪನ್ಯಾಸ ನೀಡಿ, ಮಾನಸಿಕ ರೋಗಿಗಳನ್ನು ಕೀಳಾಗಿ ನೋಡುವ ಅಗತ್ಯವಿಲ್ಲ. ಸಂಶೋಧನೆಗಳ ಪ್ರಕಾರ ಮಾನಸಿಕ ಅಸ್ವಸ್ಥರಲ್ಲಿನ ಕ್ರೂರತ್ವಕ್ಕಿಂತ 20 ಪಟ್ಟು ಹೆಚ್ಚು ಕ್ರೂರತ್ವ ಸಾಮಾನ್ಯ ಜನರಲ್ಲಿ ಇರುತ್ತದೆ ಎಂದು ತಿಳಿಸಿದರು.
ಮಾನಸಿಕ ಸಮತೋಲನವೇ ಮಾನಸಿಕ ಆರೋಗ್ಯ ಎಂದ ಅವರು, ಕಷ್ಟವಿಲ್ಲದ ಜೀವನ ಅಸಾಧ್ಯ, ನಿತ್ಯ ಜೀವನದ ಜಂಜಾಟ,ಸವಾಲುಗಳನ್ನು ಎದುರಿಸಿ ಬದುಕಬೇಕು. ಸಮಾಜಕ್ಕೆ ಹಾನಿಯಾಗದ ರೀತಿ ಸಮುದಾಯಕ್ಕೆ ಕೊಡುಗೆ ನೀಡುವುದೇ ಮಾನಸಿಕ ಆರೋಗ್ಯ ಎಂದರು.
ಒಂದೇ ಪರಿಸ್ಥಿತಿಯಲ್ಲಿ ಹಲವಾರು ಸ್ವಭಾವದವರನ್ನು ಕಾಣುತ್ತೇವೆ, ಹಲವಾರು ರೀತಿಯ ಸ್ಪಂದನೆಯೂ ನೋಡಬಹುದು. ಮನೆ ವಾತಾವರಣ, ಸಾಮಾಜಿಕ ಅಂತಸ್ತು, ಬೆಳೆದರೀತಿ, ಆರ್ಥಿಕತೆ ಮುಂತಾದವು ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗಬಹುದು ಆದರೆ ಇದಕ್ಕೆ ಚಿಕಿತ್ಸೆ ಇದೆ, ಯಾರನ್ನೂ ಕೀಳಾಗಿ ನೋಡುವ ಅಗತ್ಯವಿಲ್ಲ ಎಂದರು.
ಸಾಮಾಜಿಕ ಆರೋಗ್ಯ, ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಮೂರೂ ಅಗತ್ಯವಿದೆ, ಸಮಾಜದ ಸಾಮರಸ್ಯಕ್ಕೆ ಹಾನಿಯುಂಟು ಮಾಡದೇ ಮುನ್ನಡೆಯಬೇಕು, ಕಾಯಿಲೆಗಳ ಅನುಪಸ್ಥಿತಿಯೇ ಆರೋಗ್ಯ ಎಂದ ಅವರು, ಮಾನಸಿಕ ಆರೋಗ್ಯ, ಒತ್ತಡ ನಿವಾರಣೆ, ಅದರ ಸ್ವಭಾವ, ಮಾನಸಿಕ ಆರೋಗ್ಯದ ಕುರಿತು ಇರುವ ತಪ್ಪು ಕಲ್ಪನೆ, ಶಿಕ್ಷಕರಾಗಿ ಮಾನಸಿಕ ಆರೋಗ್ಯ ನಿರ್ವಹಣೆಯಲ್ಲಿನ ಕರ್ತವ್ಯಗಳು ಮತ್ತಿತರ ಅಂಶಗಳ ಕುರಿತು ಉಪನ್ಯಾಸದಲ್ಲಿ ಅರಿವು ಮೂಡಿಸಿದರು.
15 ರಿಂದ 25 ವರ್ಷ ವಯಸ್ಸಿನವರಲ್ಲಿ ಅತಿ ಹೆಚ್ಚಾಗಿ ಸ್ಕಿಜ್ಹೋಫ್ರೀನಿಯಾ ಹೆಚ್ಚು ಕಾಣಿಸಿಕೊಳ್ಳುತ್ತದೆ, ಪದೆ ಪದೇ ವ್ಯಕ್ತಿ ತೀವ್ರತರನಾದ ಸಂಕಷ್ಟಗಳಿಗೆ ಸಿಲುಕಿದಾಗ ಈ ಕಾಯಿಲೆ ಬರಬಹುದು ಎಂದ ಅವರು, ಇದಕ್ಕೆ ಬಡವರು,ಶ್ರೀಮಂತರು ಎಂಬ ಬೇಧವಿಲ್ಲ ಎಂದರು.
ಕ್ಲೀನಿಕಲ್ ಸೈಕಾಲಿಜಿಸ್ಟ್ ಶ್ರೀನಾಥ್ ಮಾನಸಿಕ ಆರೋಗ್ಯ ಮತ್ತು ಜೀವನ ಕೌಶಲ್ಯಗಳ ಕುರಿತು ಉಪನ್ಯಾಸ ನೀಡಿ, ಸ್ವ ಅರಿವು, ಅನುಭೂತಿ, ವಿಮರ್ಶಾತ್ಮಕ ಚಿಂತನೆ, ಕ್ರಿಯಾಶೀಲ ಚಿಂತನೆ,ನಿರ್ಧಾರ ಕೈಗೊಳ್ಳುವಿಕೆ,ಒತ್ತಡದೊಂದಿಗೆ ಹೊಂದಾಣಿಕೆ, ಪರಿಣಾಮಕಾರಿ ಸಂವಹನ ಇವೆಲ್ಲವೂ ಮಾನಸಿಕ ಆರೋಗ್ಯ ರಕ್ಷಣೆಗೆ ಅಗತ್ಯವಿದೆ ಎಂದರು.
ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ಮಾತನಾಡಿ, ಕ್ರಿಯಾಶೀಲತೆ, ವ್ಯಾಯಾಮ, ಧ್ಯಾನ, ಕೆಲಸದಲ್ಲಿ ಚಟುವಟಿಕೆಯಿದ್ದರೆ ಖಂಡಿತಾ ಮಾನಸಿಕ ಆರೋಗ್ಯ ರಕ್ಷಣೆ ಸಾಧ್ಯ ಎಂದು ತಿಳಿಸಿ, ಮಾನಸಿಕ ರೋಗಿಗಳಿಗೂ ಹಕ್ಕುಗಳಿವೆ, ಅದರ ರಕ್ಷಣೆಗೆ ಕಾನೂನುಗಳಿವೆ, ಅವರನ್ನು ಕೀಳಾಗಿ ಕಾಣಬಾರದು ಎಂದು ತಿಳಿಸಿ, ಶಿಕ್ಷಕರು ಮಾನಸಿಕ ಸಮಸ್ಯೆಗಳ ಅರಿವು ಪಡೆಯುವುದರಿಂದ ಒತ್ತಡದಿಂದ ಮುಕ್ತರಾಗಿ ತರಗತಿಗಳಲ್ಲಿ ಉತ್ತಮ ಬೋಧನೆಗೆ ಸಹಕಾರಿಯಾಗಲೆಂದು ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾರಾಜು ಉಪಸ್ಥಿತರಿದ್ದು ಶುಭ ಕೋರಿದರು. ತಾಲ್ಲೂಕಿನ ಪ್ರತಿ ಪ್ರೌಢಶಾಲೆಯಿಂದ ತಲಾ ನಾಲ್ವರು ಶಿಕ್ಷಕರು ಈ ಕಾರ್ಯಾಗಾರರದಲ್ಲಿ ಪಾಲ್ಗೊಂಡಿದ್ದರು.