ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ : ನೌಕರರು ಕ್ರಿಯಾಶೀಲರಾಗಿ ಜನರ ಕೆಲಸ ಮಾಡಲು ದೇಹ , ಮನಸ್ಸು ಸದೃಢವಾಗಿಸಿಕೊಂಡಿರಬೇಕು . ರಾಜ್ಯ ಸರ್ಕಾರಿ ನೌಕರರಿಗೆ 2023 ರೊಳಗೆ ಕೇಂದ್ರ ಸರ್ಕಾರಿ ನೌಕರರ ಸಮಾನ ವೇತನ ಕೊಡಿಸುವ ಸಂಕಲ್ಪದೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರು ತಿಳಿಸಿದರು . ಇಂದು ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಜಿಲ್ಲಾ ಸರ್ಕಾರಿ ನೌಕರರ ಸಂಘ , ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರ ಜಿಲ್ಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು . ಕ್ರೀಯಾಶೀಲವಾಗಿ ಕೆಲಸ ಮಾಡಲು ದೇಹ ಮತ್ತು ಮನಸ್ಸು ಸ್ಪಂದಿಸಬೇಕು , ಅದಕ್ಕಾಗಿ ನೀವು ನಿರಂತರವಾಗಿ ಯೋಗ , ವ್ಯಾಯಾಮ ಮಾಡಿ , ಉತ್ತಮ ಆರೋಗ್ಯವಿದ್ದರೆ ಉತ್ತಮ ಮನಸ್ಸು ಇರುತ್ತದೆ ಎಂದು ಕಿವಿಮಾತು ಹೇಳಿದರು . ದಿನನಿತ್ಯದ ಒತ್ತಡದಿಂದ ಹೊರ ಬನ್ನಿ , ಎರಡು ದಿನಗಳ ಈ ಕ್ರೀಡಾಕೂಟ ನಿಮಗೆ ಇಡೀ ವರ್ಷದ ಕರ್ತವ್ಯ ನಿರ್ವಹಣೆಗೆ ಚೈತನ್ಯವಾಗಲಿ ಎಂದು ಹಾರೈಸಿದ ಅವರು , ಇಡೀ ಜಿಲ್ಲೆಯ ನೌಕರರು ಎರಡು ದಿನ ಒಂದೆಡೆ ಸೇರುವುದರಿಂದ ಮನಸ್ಸು ಚೇತೋಹಾರಿಯಾಗುತ್ತದೆ ಎಂದು ತಿಳಿಸಿದರು .ಕೋಲಾರ ಜಿಲ್ಲೆಯಲ್ಲಿ ಇಂದು ಆರಂಭಗೊಂಡಿರುವ ನೌಕರರ ಜಿಲ್ಲಾ ಕ್ರೀಡಾಕೂಟ ಇಡೀ ರಾಜ್ಯಕ್ಕೆ ಮಾದರಿಯಾಗಿದೆ . 2500 ಕ್ಕೂ ಹೆಚ್ಚು ನೌಕರರನ್ನು ಒಂದೆಡೆ ಸೇರಿರುವುದು ಸಂಘಟನೆಯ ಶಕ್ತಿಗೆ ಸಾಕ್ಷಿಯಾಗಿದೆ . ಜಿಲ್ಲಾಧ್ಯಕ್ಷ ಸುರೇಶ್ಬಾಬು , ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಅದ್ಭುತವಾಗಿ ಆಯೋಜಿಸಲಾಗಿದೆ ಎಂದು ಶ್ಲಾಘಿಸಿ , ಅದ್ಭುತವಾಗಿ ಕ್ರೀಡಾಕೂಟ ನಡೆಯುತ್ತಿದೆ ಎಂದರು . ಸಂಘಟನೆಯಲ್ಲಿ ಒಡಕು ಇದ್ದಾಗ ಇಷ್ಟೊಂದು ನೌಕರರು ಒಂದೆಡೆ ಸೇರಲು ಸಾಧ್ಯವಿಲ್ಲ , ಜಿಲ್ಲಾ ನೌಕರರ ಕ್ರೀಡಾಕೂಟಕ್ಕೆ ಹಿಂದೆ 50 ಸಾವಿರ ನೀಡುತ್ತಿದ್ದರು , ಅದನ್ನು 1.5 ಲಕ್ಷಕ್ಕೆ ಏರಿಸುವಂತೆ ಮಾಡಿದ್ದೇವೆ . ಕಳೆದ ವರ್ಷ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ 1.20 ಕೋಟಿ ಸರ್ಕಾರ ನೀಡಿತ್ತು . ಈ ಬಾರಿ 2 ಕೋಟಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದು ತಿಳಿಸಿದರು . ಸರ್ಕಾರಿ ನೌಕರರು ಕಾರ್ಯಾಂಗದ ಒಂದು ಭಾಗ ಎಂಬುದನ್ನು ಅರಿತು ದೇಶದಲ್ಲೇ ಮೊದಲಬಾರಿಗೆ ರಾಜ್ಯದಲ್ಲಿ ಸರ್ಕಾರಿ ನೌಕರರ ದಿನಾಚರಣೆಯನ್ನು ಎಪ್ರಿಲ್ 21 ರಂದು ಆಚರಿಸುವಂತೆ ಮಾಡಿದ್ದೇವೆ ಎಂದು ತಿಳಿಸಿ , ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸಿದರು . ಡಿ ದರ್ಜೆ ನೌಕರರಿಂದ ಐಎಎಸ್ ಹುದ್ದೆಯ ನೌಕರರವರೆಗೂ ಈ ದಿನಾಚರಣೆಯಂದು ಸಾಧಕರನ್ನು ಕರೆದು ಗೌರವಿಸುತ್ತೇವೆ . ಇಡೀ ದೇಶದ ಹಲವಾರು ರಾಜ್ಯಗಳಲ್ಲಿ ಕೋವಿಡ್ ಸಂದರ್ಭದಲ್ಲಿ ವೇತನ ಕಡಿತ ಮಾಡಿದ್ದರು . ರಾಜ್ಯದಲ್ಲಿ ಹಾಗೆ ಮಾಡಲು ಬಿಡಲಿಲ್ಲ . ಗಳಿಕೆ ನಗದೀಕರಣಕ್ಕಾಗಿ 700 ಕೋಟಿ ಬಿಡುಗಡೆ ಮಾಡಿಸಿದ್ದೇವೆ . ಯುವಶಕ್ತಿ ಮೂಲಕ ಸಂಘಟನೆ ಉತ್ತುಂಗಕ್ಕೇರುವಂತೆ ಮಾಡಿದ್ದೇವೆ . ಕ್ರೀಡಾಕೂಟದಲ್ಲಿ ಆವೇಶ.ಉದ್ವೇಗ ಬೇಡ , ಸಂಯಮದಿಂದ ವರ್ತಿಸಿ ಎಂದು ಕಿವಿಮಾತು ಹೇಳಿದರು . ವಿಧಾನಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು ಅವರು ಮಾತನಾಡಿ ದೋಷರು ತಮ್ಮ ಮಕ್ಕಳು ಡಾಕ್ಟರ್ , ಇಂಜಿನಿಯರ್ , ಐಎಎಸ್ ಆಗಬೇಕೆನ್ನುತ್ತಾರೆ , ಆದರೆ ಉತ್ತಮ ಕ್ರೀಡಾಪಟುವಾಗಲಿ ಎಂದು ಬಯಸುವುದಿಲ್ಲ ಎಂದು ವಿಷಾದಿಸಿ , ಜಿಲ್ಲಾ ಕ್ರೀಡಾಂಗಣ ಸಿಂಥೆಟಿಕ್ ಟ್ರ್ಯಾಕ್ ಆಗಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು . ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್.ವೆಂಕಟೇಶ್ ಅವರು ಮಾತನಾಡಿ ನಾನೂ ಒಬ್ಬ ಕಬಡ್ಡಿ ಪಟುವಾಗಿದ್ದೇನೆ , ಕಬ್ಬಡ್ಡಿಯಲ್ಲಿ ಗೆಲ್ಲುವ ತಂಡಕ್ಕೆ ಟಗರು ಬಹುಮಾನ ನೀಡುತ್ತೇನೆ ಎಂದು ಘೋಷಿಸಿ , ಕ್ರೀಡಾಕೂಟ ಅದ್ದೂರಿಯಾಗಿ ಆಯೋಜಿಸಿದ್ದೀರಿ ಎಂದು ಅಭಿನಂದಿಸಿದರು .ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಮಾತನಾಡಿ , ಸರ್ಕಾರಿ ನೌಕರರಿಗೆ ದೈಹಿಕ ಆರೋಗ್ಯ ಅತಿ ಮುಖ್ಯ , ಅದಕ್ಕಾಗಿ ದಿನಕ್ಕೆ ಕನಿಷ್ಟ ಒಂದು ಗಂಟೆ ಯೋಗ , ವ್ಯಾಯಾಮ ಮಾಡಿ , ರಸ್ತೆ ಉಬ್ಬುಗಳಿದ್ದರೆ ಹೇಗೆ ವಾಹನ ಸಂಚರಿಸಲು ಕಷ್ಟವೋ ಹಾಗೆಯೇ ನಿಮ್ಮ ಹೊಟ್ಟೆ ಉಬ್ಬಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕೆಡುತ್ತದೆ ಎಂದು ಕಿವಿಮಾತು ಹೇಳಿದರು . ಕ್ರೀಡೆ ಜೀವನದ ಭಾಗವಾಗಲಿ , ಮಹಿಳೆಯರಿಗೆ ಮನೆ ಕೆಲಸದ ಜತೆ ಕಚೇರಿ ಕೆಲಸದ ಒತ್ತಡ ಇರುತ್ತದೆ . ಎಲ್ಲಾ ಮರೆತು ಕ್ರೀಡೆಗಳಲ್ಲಿ ಪಾಲ್ಗೊಳ್ಳಿ , ಸ್ವಾಸ್ಥ್ಯ ಸಮಾಜ ನಿರ್ಮಿಸುವಲ್ಲಿ ಶ್ರಮಿಸಿ , ಕ್ರೀಡಾಕೂಟದ 2 ದಿನದ ಖುಷಿ ಇಡಿ ವರ್ಷ ನೆನಪಿನಲ್ಲಿರುವಂತೆ ತಮ್ಮನ್ನು ತೊಡಗಿಸಿಕೊಳ್ಳಿ ಎಂದು ತಿಳಿಸಿದರು . ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ. ನಾಗರಾಜ್ ಅವರು ಮಾತನಾಡಿ ನೌಕರರ ಕ್ರೀಡಾಕೂಟ ಅತ್ಯಂತ ಅದ್ದೂರಿಯಾಗಿ ಆಯೋಜಿಸಿದ್ದೀರಿ , ನಿಷ್ಪಕ್ಷಪಾತ ತೀರ್ಪು ಹೊರಬರಲಿ , ರಾಜ್ಯಕ್ಕೆ ಉತ್ತಮ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಎಂದರು . ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಸುರೇಶ್ ಬಾಬು ಅವರು ಅಭಿನಂದನಾ ನುಡಿಗಳನ್ನಾಡಿ , ಕ್ರೀಡಾಕೂಟ ಯಶಸ್ವಿಯಾಗಲು ಸಹಕಾರ ನೀಡಿದ ಜಿಪಂ ಅಧ್ಯಕ್ಷರು , ಜಿಲ್ಲಾಧಿಕಾರಿಗಳು , ಜಿಪಂ ಸಿಇಒ , ಎಂಎಲ್ಸಿ ಗೋವಿಂದರಾಜು ಸೇರಿದಂತೆ ಎಲ್ಲಾ ಪದಾಧಿಕಾರಿಗಳು , ಅಧಿಕಾರಿಗಳು , ನೌಕರರರಿಗೆ ಧನ್ಯವಾದ ಸಲ್ಲಿಸಿದರು . ಮಾಲೂರು ಬಾಲಕಿಯರ ಪಿಯು ಕಾಲೇಜು ಬ್ಯಾಂಡ್ ಸೆಟ್ ಮನಸೂರೆಗೊಂಡಿತು . ರಾಷ್ಟ್ರೀಯ ಕಬ್ಬಡ್ಡಿ ಪಟು ಗೋವಿಂದರಾಜು ತಂಡ ಕ್ರೀಡಾಜ್ಯೋತಿಯನ್ನು ಎನ್ಫೀಲ್ಡ್ ದ್ವಿಚಕ್ರವಾಹನಗಳ ಮೆರವಣಿಗೆಯಲ್ಲಿ ಅದ್ಭುತವಾಗಿ ತಂದು ಅತಿಥಿಗಳಿಗೆ ಹಸ್ತಾಂತರಿಸಿತು , ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದ ನೌಕರರನ್ನು ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಹಾಗೂ ಮತ್ತಿತರ ಗಣ್ಯರು ಸನ್ಮಾನಿಸಿದರು . ಕಬ್ಬಡ್ಡಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಜಿಲ್ಲೆಯ ಕ್ರೀಡಾಪಟುಗಳಾದ ಪಿ.ಗೋವಿಂದರಾಜು , ಎಂ.ನಾಗರಾಜು , ನಾರಾಯಣಸ್ವಾಮಿ , ವಾಲಿಬಾಲ್ ತಂಡವನ್ನು ಪ್ರತಿನಿಧಿಸಿದ್ದ ಎಂ.ಶಿವಣ್ಣ , ಮುನಾವರ್ಪಾಷ , ಸುಬ್ರಮಣಿರೆಡ್ಡಿ , ನಾರಾಯಣಸ್ವಾಮಿ , ಶ್ರೀಧರ್ , ದೀಕ್ಷಿತ್ ದೇವರಾಜ್ , ಕೃಷ್ಣಪ್ಪ , ಕೆ.ಚಂದ್ರ , ಸಿದ್ದಲಿಂಗಯ್ಯ ಮತ್ತಿತರರನ್ನು ಸನ್ಮಾನಿಸಲಾಯಿತು . ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಶ್ವೇತಾ ಶಬರೀಷ್ , ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಎನ್.ಮಂಜುನಾಥ್ , ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಚೌಡಪ್ಪ , ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶಗೌಡಪ್ಪ ಪಾಟೀಲ , ಖಜಾಂಚಿ ಶ್ರೀನಿವಾಸ್ , ಗೌರವಾಧ್ಯಕ್ಷರಾದ ಶಿವರುದ್ರಯ್ಯ , ಜಂಟಿ ಕಾರ್ಯದರ್ಶಿ ಲೋಕೇಶ್ , ಚಿತ್ರದುರ್ಗ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥ್ , ಬೆಳಗಾಂ ಉಪಾಧ್ಯಕ್ಷ ಮೋಹನ್ , ಕ್ರೀಡಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ನಾಗರಾಜ್ ಅವರು ಸೇರಿದಂತೆ ಕ್ರೀಡಾಪಟುಗಳು ಉಪಸ್ಥಿತರಶ್ರೀನಿವಾಸಪುರಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ