ಕುಂದಾಪುರ: ಡಿಸೆಂಬರ್ 15ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಆಶ್ರಯದಲ್ಲಿ “ಸಂಶೋಧನಾ ವಿಧಾನಗಳು” ಕುರಿತು ಕಾರ್ಯಗಾರ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಉಡುಪಿಯ ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ವಿಭಾಗ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ಉಮೇಶ್ ಮಯ್ಯ ಮಾತನಾಡಿ ಜೀವನದಲ್ಲಿ ಅಸಾಧ್ಯ ಎನ್ನುವುದು ಯಾವುದು ಇಲ್ಲ. ನಮ್ಮಲ್ಲಿರುವ ಕೀಳರಿಮೆಯನ್ನು ತೊಡೆದು ಹಾಕಿ ಮುನ್ನುಗ್ಗಬೇಕು. ಇದರೊಂದಿಗೆ ಮಹತ್ವಾಕಾಂಕ್ಷೆ, ಸಕಾರಾತ್ಮಕ ವರ್ತನೆ ಮತ್ತು ಉತ್ತಮ ಸಂಘಟನಾತ್ಮಕತೆಯನ್ನು ಅಳವಡಿಸಿಕೊಳ್ಳಿ. ಜೊತೆಗೆ ಯಾವುದೇ ಸಾಧನೆಯ ಹಾದಿಯಲ್ಲಿ ಮತ್ತು ಮಾಡುವ ಕೆಲಸದಲ್ಲಿ ಬದ್ಧತೆ, ಸ್ಥಿರತೆ ಮತ್ತು ಉತ್ತಮ ಸಂವಹನ ಕಲೆಯನ್ನು ರೂಢಿಸಿಕೊಳ್ಳಬೇಕು. ಸಂಶೋಧನೆ ಎಂದರೆ ಇರುವ ವಿಷಯದ ಕುರಿತು ಆಳವಾದ ಮತ್ತು ಗಾಢ ಅಧ್ಯಯನ. ಸಂಶೋಧನೆ ಮಾಡುವಾಗ ಹಲವಾರು ವಿಷಯಗಳ ಬಗ್ಗೆ ಅರಿವು ಇರಬೇಕು. ಅದಕ್ಕೆ ಬೇಕಾದ ತಯಾರಿ, ಜ್ಞಾನ ಸಂಪಾದನೆ ಅದಕ್ಕೆ ಪೂರಕವಾಗಿ ಸಂವೇದನಾ ಶೀಲ ಆಲೋಚನೆಗಳು ಬೇಕಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ನಿಶಾ.ಎಂ ವಹಿಸಿದ್ದರು.ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಸಂಯೋಜಕರಾದ ಡಾ.ಯಶವಂತಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ವಾಣಿಜ್ಯ ವಿಭಾಗದ ಉಪನ್ಯಾಸಕಿ ದಿವ್ಯಾ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ವಿದ್ಯಾರ್ಥಿನಿ ಸಂಹಿತಾ ಅತಿಥಿಗಳನ್ನು ಪರಿಚಯಿಸಿದರು.