ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ಸಂರಕ್ಷಣೆ ಮಾಡಲು ಹಾಗೂ ಅಭಿವೃದ್ಧಿಗೆ ಹಲವು ಕಾಯ್ದೆಗಳನ್ನು ಜಾರಿಗೆ ತಂದಿದೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ಸಂರಕ್ಷಣೆ ಮಾಡಲು ಹಾಗೂ ಅಭಿವೃದ್ಧಿಗೆ ಹಲವು ಕಾಯ್ದೆಗಳನ್ನು ಜಾರಿಗೆ ತಂದಿದ್ದು , ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಬೇಕು ಎಂದು ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ತಿಳಿಸಿದರು . ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಜಿಲ್ಲಾ ಕೇಂದ್ರದಲ್ಲಿಯೂ ಸ್ವಾಧಾರ ಕೇಂದ್ರವನ್ನು ಪ್ರಾರಂಭಿಸಬೇಕು . ಇದರಿಂದ ಇನ್ನೂ ಹೆಚ್ಚು ಜನರಿಗೆ ಅನುಕೂಲವಾಗುತ್ತದೆ . ಜಿಲ್ಲೆಯಲ್ಲಿ ಭಿಕ್ಷುಕರ ಪುನರ್‌ವಸತಿ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ . ಮಹಿಳೆಯರಿಗೆ ಯಾವುದೇ ಹಂತದಲ್ಲೂ ತೊಂದರೆಯಾಗಬಾರದು ಎಂದು ಹಲವು ಯೋಜನೆಗಳನ್ನು ರೂಪಿಸಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು . ನೊಂದ ಮಹಿಳೆಯರಿಗೆ ವೈದ್ಯಕೀಯ , ಪೊಲೀಸ್ , ಕಾನೂನು ಸೇವೆಯನ್ನು ನೀಡಬೇಕು , ಜಿಲ್ಲೆಯಲ್ಲಿ ದತ್ತು ಕೇಂದ್ರ ಇರಲಿಲ್ಲ . ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು ,
ಈಗ ಅನುಮೋದನೆಯಾಗಿದೆ ಎಂದು ಮಾಹಿತಿ ನೀಡಿದರು .
ಜಿಲ್ಲೆಯಲ್ಲಿ ಎಸ್.ಎನ್.ಆರ್ ಆಸ್ಪತ್ರೆಯಲ್ಲಿ ಬರ್ನಿಂಗ್ ವಾರ್ಡ್ ತೆರೆಯಲಾಗುತ್ತಿದೆ . ಇತ್ತೀಚಿಗೆ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿವೆ . ಈ ತಿಂಗಳು ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದರೆ ಸಿ.ಡಿ.ಪಿ.ಓ ಗಳು ಕಛೇರಿಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿಲ್ಲ , ಆದ್ದರಿಂದ ಎಲ್ಲಾ ಸಿ.ಡಿ.ಪಿ.ಓ ಗಳು ಈ ತಿಂಗಳ 2 ದಿನಗಳ ಸಂಬಳ ಖಡಿತಗೊಳಿಸಲಾಗುವುದು . ಬಾಲ್ಯ ವಿವಾಹಗಳು ಆಗುತ್ತಿರುವ ಕುರಿತು ಸಂಬಂಧಪಟ್ಟ ಇಲಾಖೆಗಳು ಮುಂದಿನ ಸಭೆ ವೇಳೆಗೆ ಕನಿಷ್ಠ 5 ಪ್ರಕರಣಗಳನ್ನು ಗುರುತಿಸಬೇಕು . ಬಾಲ್ಯ ವಿವಾಹ ತಡೆಯಲು ಎಲ್ಲಾ ಅಧಿಕಾರಿಗಳು ತಂಡವಾಗಿ ಕೆಲಸ ಮಾಡಬೇಕು . ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು . ದಮನಿತ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಪಡೆದು ಲೈಂಗಿಕ ವೃತ್ತಿಯಿಂದ ಹೊರಬಂದು ಸ್ವಾವಲಂಬಿ ಜೀವನ ನಡೆಸಬೇಕು ಎಂದು ತಿಳಿಸಿದರು . ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗಂಗಾಧರ ಅವರು ಮಾತನಾಡಿ , ಪ್ಯಾನಲ್ ಅಡ್ವಕೇಟ್‌ಗಳು ಪ್ರತಿ ವಾರ ಸ್ವಾಧಾರ ಕೇಂದ್ರಗಳಲ್ಲಿ ಚೀಟಿ ನೀಡಿ ಅಗತ್ಯತೆಗಳ ಬಗ್ಗೆ ಪರಿಶೀಲಿಸಬೇಕು ಎಂದು ತಿಳಿಸಿದರು . ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪಾಲಿ ಅವರು ಮಾತನಾಡಿ , ಸ್ವಾಧಾರ ಕೇಂದ್ರ ಮಾಲೂರಿನಲ್ಲಿ 30 ಮಕ್ಕಳು ಇದ್ದಾರೆ . ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತಿದೆ . 2016 , ರಲ್ಲಿ ಸ್ವಾಧಾರ ಕೇಂದ್ರ ಪ್ರಾರಂಭವಾಯಿತು . ಸಖಿ ಒನ್‌ಸ್ಟಾಪ್ ಸೆಂಟರ್ ಇದರಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ , ಪೊಲೀಸ್ ಸೇವೆ , ಕಾನೂನು ಸೇವೆ , ಸಮಾಲೋಚನೆ ಮತ್ತು ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸುವುದಾಗಿದೆ . ಜಿಲ್ಲೆಯಲ್ಲಿ 11 ದೌರ್ಜನ್ಯ ಪ್ರಕರಣಗಳು 25 ರೇಪ್ ಪ್ರಕರಣಗಳು , 3 ಕಿಡ್ನಾಪ್ ಪ್ರಕರಣಗಳು ಈ ವರ್ಷ ಕಂಡುಬಂದಿವೆ . ಸಾತ್ವನ ಕೇಂದ್ರಗಳಲ್ಲಿ ಈ ವರ್ಷ 3369 ಮಹಿಳೆಯರು ವಿವಿಧ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು . 2019-20ನೇ ಸಾಲಿನಲ್ಲಿ ಬಾಲ್ಯ ವಿವಾಹ ಕುರಿತು 79 ಪ್ರಕರಣಗಳ ದೂರುಗಳು ಸ್ವೀಕಾರವಾಗಿದ್ದವು . 76 , ವಿವಾಹಗಳನ್ನು ತಡೆಯಲಾಗಿದೆ . 3 ಬಾಲ್ಯ ವಿವಾಹಗಳು ನಡೆದಿವೆ . ಕೋಲಾರ ಜಿಲ್ಲೆಯಲ್ಲಿ ಒಟ್ಟು 46,688 ವಿದವೆಯರು ಮಾಶಾಸನ ಪಡೆಯುತ್ತಿದ್ದಾರೆ . ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಯಲ್ಲಿ ಇದುವರೆಗೆ 27,724 ಫಲಾನುಭವಿಗಳು ತಲಾ 5000 ಪ್ರೋತ್ಸಾಹಧನ ಪಡೆದಿರುತ್ತಾರೆ . ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ 45 ಪೈಕೋ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು . ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ || ನಾರಾಯಣಸ್ವಾಮಿ ಅವರು ಮಾತನಾಡಿ , ನೆನ್ನೆ ಬೆಳಿಗ್ಗೆ 11.45 ಗಂಟೆಗೆ ಜಿಲ್ಲಾ ಆಸ್ಪತ್ರೆ ಮುಂಭಾಗ ಒಂದು ಹೆಣ್ಣು ಮಗುವನ್ನು ಆಟೋ ಒಂದರಲ್ಲಿ ಬ್ಯಾಗಿನಲ್ಲಿಟ್ಟು ಬಿಟ್ಟು ಹೋಗಿದ್ದು , ಉರ್ದು ಭಾಷೆಯಲ್ಲಿ ನಾನು ಬಡವ , ನನಗೆ ಸಾಕಲು ಆಗುವುದಿಲ್ಲ , ಆಸ್ಪತ್ರೆಯವರು ಮಗುವನ್ನು ನೋಡಿಕೊಳ್ಳಿ ಎಂದು ಪತ್ರ ಬರೆದಿಟ್ಟು ಹೋಗಿದ್ದರು . ಮಧ್ಯಾಹ್ನ 3.30 ಗಂಟೆಗೆ ಬೇರೆ ಪೋಷಕರು ಬಂದು ನಮಗೆ ಮಕ್ಕಳಿಲ್ಲ ಮಗುವನ್ನು ನೀಡಿ ನಾವು ಸಾಕಿಕೊಳ್ಳುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು . ಕಾರ್ಯಕ್ರಮದಲ್ಲಿ ಪಂಚಾಯತಿಯ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಾದ ಎನ್.ಎಂ.ನಾಗರಾಜ್ , ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಾಹ್ನವಿ , ವಿವಿಧ ಇಲಾಖೆಗಳ ಅಧಿಕಾರಿಗಳು , ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು .

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ