ಮಹಿಳೆಯರು ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು : ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಮಹಿಳೆಯರು ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು. ಯೋಜನೆ ಲಾಭ ಪಡೆಯಲು ತಪ್ಪದೆ ಅರ್ಜಿ ಸಲ್ಲಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಬುಧವಾರ ಏರ್ಪಡಿಸಿದ್ದ ಗೃಹ ಲಕ್ಷ್ಮಿ ಯೋಜನೆ ಜಾರಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಈ ಯೋಜನೆಯಿಂದ ಬಡ ಕುಟುಂಗಳಿಗೆ ಸ್ವಲ್ಪ ಮಟ್ಟಿನ ಆರ್ಥಿಕ ನೆರವು ದೊರೆತಂತಾಗಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಸೂರಿಲ್ಲದೆ ಪರಿತಪಿಸುತ್ತಿರುವ ಎಲ್ಲ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡಲಾಗುವುದು. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಿ ಜಾರಿಗೆ ತರಲಾಗುವುದು. ಅಗತ್ಯ ಇರುವ ಕಡೆ ಒಳಚರಂಡಿ ನಿರ್ಮಿಸಲಾಗುವುದು. ಒಳ ಚರಂಡಿ ನಿರ್ವಹಣೆ ಸರಿಯಿಲ್ಲದೆ ಕೆಲವು ಕಡೆ ದುರ್ನಾತ ಬೀರುತ್ತಿದೆ. ಅದನ್ನು ಸರಿಪಡಿಸಲಾಗುವುದು. ತಾಲ್ಲೂಕಿನಿಂದ ನೆರೆಯ ಆಂಧ್ರಪ್ರದೇಶಕ್ಕೆ ಹರಿದು ಹೋಗುವ ಮಳೆ ನೀರನ್ನು ದಕ್ಷಿಣಾಭಿಮುಖವಾಗಿ ಹರಿಸಿ, ರೋಣೂರು ಕೆರೆ ಸೇರಿದಂತೆ, ಅಮಾನಿಕೆರೆಗೆ ಹರಿಸಲಾಗುವುದು. ಕೆರೆ ಅಭಿವೃದ್ಧಿಪಡಿಸಿ ಬೋಟಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಮಾತನಾಡಿ, ಗೃಹ ಲಕ್ಷ್ಮಿ ಯೋಜನೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಬಡ ಕುಟುಂಬಗಳ ಪಾಲಿಗೆ ವರದಾನವಾಗಿದೆ. ಯೋಜನೆ ಹಣದಿಂದ ಮಹಿಳೆಯರಿಗೆ ಮಾತ್ರವಲ್ಲದೆ, ಕುಟುಂಬದ ಎಲ್ಲ ಸದಸ್ಯರಿಗೆ ಅನುಕೂಲವಾಗುತ್ತದೆ. ಇನ್ನೂ ಅರ್ಜಿ ಸಲ್ಲಿಸದಿದಿರುವ ಅರ್ಹ ಮಹಿಳೆಯರು ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ವಿ.ನಾಗರಾಜು, ಎನ್.ಶಂಕರ್, ನಾಗರಾಜ್, ಸಬ್ಬೀರ್, ಆನಂದ್, ಎಂ.ಶ್ರೀನಿವಾಸನ್, ಕೆ.ಜಿ.ರಮೇಶ್, ಮನು ಇದ್ದರು.