ಶ್ರೀನಿವಾಸಪುರ: ಮಹಿಳೆಯರು ಸಾಲ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಸ್ಥಳೀಯ ದೊಡ್ಡಪ್ರಮಾಣದ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ಸ್ತ್ರೀ ಶಕ್ತಿ ಸಂಘಗಳ ಸದಸ್ಯರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರನ್ನು ಖಾಸಗಿ ಲೇವಾದೇವಿಗಾರರ ಶೋಷಣೆಯಿಂದ ಮುಕ್ತಗೊಳಿಸಿ, ಸ್ವಾವಲಂಬಿ ಜೀವನ ನಡೆಸುವಂತೆ ಮಾಡುವ ಉದ್ದೇಶದಿಂದ ಸಾಲ ಸೌಲಭ್ಯ ಒದಗಿಸಲಾಯಿತು ಎಂದು ಹೇಳಿದೆ.
ಈಗ ರೂ.50 ಬಡ್ಡಿರಹಿತ ಹಾಗೂ ಶೇ.4 ರಷ್ಟು ಬಡ್ಡಿ ದರದಲ್ಲಿ ರೂ.50 ಸಾವಿರ ಸಾಲ ನೀಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೂ.1 ಲಕ್ಷ ಬಡ್ಡಿರಹಿತ ಸಾಲ ನೀಡಲಾಗುವುದು. ಮಹಿಳೆಯರ ಅಭಿವೃದ್ಧಿಗೆ ಹೊಸ ಯೋಜನೆ ರೂಪಿಸಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಪ್ರಧಾನಿ ಮೋದಿ ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಶ್ರೀಮಂತರ ಪರ ಒಲವುಳ್ಳ ಅವರು, ಶ್ರೀಮಂತ ಉದ್ಯಮಿಗಳಿಗೆ ದೊಡ್ಡ ಮೊತ್ತದ ಸಾಲ ನೀಡುತ್ತಿದ್ದಾರೆ. ಅವರು ದೇಶ ತೊರೆದು ಹೋಗುತ್ತಿದ್ದಾರೆ. ಬಡವರಿಗೆ ಸಾಲ ನೀಡುತಿಲ್ಲ. ನೀಡಿದರೂ ಇರುವ ಅಲ್ಪಸ್ವಲ್ಪ ಜಮೀನು ಆಧಾರ ಪಡೆಯುತ್ತಾರೆ. ಸಾಲ ನೀಡುವುದು ತಡವಾದರೆ ಡಂಗುರ ಬಾರಿಸಿ ಮರ್ಯಾದೆ ಕಳೆಯುತ್ತಾರೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಮಾತನಾಡಿ, ಬಡವರು ಮೋಸಗಾರರಲ್ಲ. ಅವರು ಪಡೆದುಕೊಂಡ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಅವರಳಿ ಜಿಲ್ಲೆಗಳಲ್ಲಿ ಸ್ತ್ರಿ ಶಕ್ತಿ ಸಂಘಗಳಿಗೆ ನೀಡಲಾಗಿರುವ ಕೋಟ್ಯಂತರ ರೂಪಾಯಿ ಸಾಲ ಸದುಪಯೋಗವಾಗುತ್ತಿದೆ. ಮಹಿಳೆಯರು ಉದ್ದೇಶಿತ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿ, ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಗತಿಪರ ಚಿಂತಕರಾದ ಮಾವಳ್ಳಿ ಶಂಕರ್, ಗೊಲ್ಲಹಳ್ಳಿ ಶಿವಪ್ರಸಾದ್, ಪಿಚ್ಚಳ್ಳಿ ಶ್ರೀನಿವಾಸ್, ವೀರಸಂಗಯ್ಯ, ವೆಂಕಟೇಶ್, ಸಿ.ಎಂ.ಮುನಿಯಪ್ಪ ಮಹಿಳಾ ಜಾಗೃತಿ ಅಗತ್ಯ ಕುರಿತು ಮಾತನಾಡಿದರು.
ಮುಖಂಡರಾದ ದಿಂಬಾಲ ಅಶೋಕ್, ಸಂಜಯರೆಡ್ಡಿ, ಸುಬ್ಬಿರೆಡ್ಡಿ, ಶಂಕರ್ ಪ್ರಸಾದ್, ಸುಧಾಕರ್, ವೆಂಕಟರೆಡ್ಡಿ, ಮುನಿಶಾಮಿ, ಎಂ.ಶ್ರೀನಿವಾಸನ್, ವಿಶ್ವನಾಥ್, ಶ್ರೀಕೃಷ್ಣ, ಆಜಾಮ್ ಇದ್ದರು.