ಶ್ರೀನಿವಾಸಪುರ: ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಗೌರವವಿದೆ. ಆ ಸ್ಥಾನ ಉಳಿಸಿಕೊಂಡಿರುವುದು ಹೆಣ್ಣಿನ ಹೆಗ್ಗಳಿಕೆ ಎಂದು ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು , ಮಹಿಳೆ ಶಕ್ತಿ ಸ್ವರೂಪಿಣಿ , ಪುರುಷರ ಸಾಧನೆ ಹಿಂದೆ ಮಹಿಳೆಯ ಬೆಂಬಲ ಇದ್ದೇ ಇರುತ್ತದೆ. ಅದು ತಾಯಿಯಾಗಿರಬಹುದು ,ಹೆಂಡತಿಯಾಗಿರಬಹುದು ಅಥವಾ ಬೇರೆ ಯಾರಾದರೂ ಆಗಿರಬಹುದು ಎಂದು ಅಭಿಪ್ರಾಯಪಟ್ಟರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ ಮಾತನಾಡಿ , ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಮಹಿಳಾ ಪೌರ ಕಾರ್ಮಿಕರ ಪಾತ್ರ ಹಿರಿದು. ಅವರು ತಮ್ಮ ಆರೋಗ್ಯ ಮರೆತು ಜನರ ಆರೋಗ್ಯ ರಕ್ಷಣೆ ಮಾಡುತ್ತಾರೆ. ಹಾಗಾಗಿ ನಾಗರಿಕರ ಗೌರವಕ್ಕೆ ಪಾತ್ರರಾಗಿದ್ದಾರೆ, ಪೌರ ಕಾರ್ಮಿಕರು ವೈಯಕ್ತಿಕ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಕಾರ್ಯ ನಿರ್ವಹಿಸುವಾಗ ಸುರಕ್ಷತಾ ಕ್ರಮ ಅನುಸರಿಸಬೇಕು. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಗಂಡು, ಹೆಣ್ಣಿನ ನಡುವೆ ಭೇದ ಭಾವ ಮಾಡಬಾರದು ಎಂದು ಹೇಳಿದರು.
ಸಮಾರಂಭದಲ್ಲಿ ಆಯ್ದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಪುರಸಭೆ ಕಂದಾಯ ನಿರೀಕ್ಷಕ ವಿ.ನಾಗರಾಜ್ , ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ , ಸುರೇಶ್ , ಸಂತೋಷ್ , ಜಯಶ್ರೀ , ಪ್ರಸಾದ್ , ಪಾರ್ವತಮ್ಮ , ಸದಸ್ಯರಾದ ಸರ್ದಾರ್ , ನಾಗರಾಜ್ , ಜಯಣ್ಣ , ಷಫಿ , ಫಿರೋಜ್ ಉನ್ನೀಸಾ , ವಹೀದಾ ಬೇಗಂ , ಸುನಿತಾ , ವೇದಾಂತ್ ಶಾಸ್ತ್ರಿ ಇದ್ದರು .