ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಇಂದು ಎಲ್ಲ ರಂಗಗಳಲ್ಲೂ ಮಹಿಳೆಯರು ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ ಎಂದು ಪುರಸಭಾಧ್ಯಕ್ಷೆ ಲಲಿತಾ ಶ್ರೀನಿವಾಸ್ ಹೇಳಿದರು.
ಪಟ್ಟಣದ ಪುರಸಭಾ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಹಿಳೆಯರನ್ನು ಗೌರವಿಸುವ ಭಾರತೀಯ ಸಂಪ್ರದಾಯ ಮುಂದುರಿಯಬೇಕು. ಸರ್ಕಾರ ಮಹಿಳೆಯರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಜಾರಿಗೆ ತರಬೇಕು ಎಂದು ಹೇಳಿದರು.
ಪುರಸಭೆಯ ಮುಖ್ಯಾಧಿಕಾರಿ ಸತ್ಯನಾರಾಯಣ ಮಾತನಾಡಿ, ಮಹಿಳೆಯರ ಸಬಲೀಕರಣ ಇಂದಿನ ಅಗತ್ಯವಾಗಿದೆ. ಶಿಕ್ಷಣ ಮಹಿಳೆಯರಿಗೆ ಮಹತ್ವವಾದ ಸ್ಥಾನ ಕಲ್ಪಿಸಿದೆ. ಪ್ರಥಮಗಳ ಶಿಖರ ಬೆಳೆಯುತ್ತಲೇ ಇದೆ. ಇದು ಸ್ತ್ರೀ ಶಕ್ತಿಯ ಸಂಕೇತವಾಗಿದೆ. ಲಿಂಗ ಸಮಾನತೆಯಿಂದಾಗಿ ಮೇಲು ಬೀಳು ಭಾವನೆ ಇಲ್ಲವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆಯ ಮಹಿಳಾ ಸಿಬ್ಬಂದಿ ವತಿಯಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಪುರಸಭೆಯ ಉಪಾಧ್ಯಕ್ಷೆ ಆಯಿಷಾ ನಯಾಜ್, ಕಂದಾಯ ನಿರೀಕ್ಷಕ ನಾಗರಾಜ್, ಪರಿಸರ ಅಭಿಯಂತರ ಡಿ.ಶೇಖರರೆಡ್ಡಿ, ಶಂಕರ್, ನಾಗೇಶ್, ವಿಜಯಲಕ್ಷ್ಮಿ, ಶಿವು, ಶಾರದ, ಮಮತ ಇದ್ದರು.