ಶ್ರೀನಿವಾಸಪುರದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ಭಾನುವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಹಾಗೂ ಸಚಿವ ಡಾ. ಸುಧಾಕರ್ ಉದ್ಘಾಟಿಸಿದರು.
ಕೋಮುವಾದಿಗಳು ಹಾಗೂ ಸಂವಿಧಾನ ವಿರೋಧಿಗಳು ಎಲ್ಲಿಯವರೆಗೆ ಇರುತ್ತಾರೊ, ಅಲ್ಲಿಯವರೆಗೆ ನಾನು ಸಾರ್ವಜನಿಕ ಜೀವನದಿಂದ ದೂರ ಹೋಗುವುದಿಲ್ಲ ಎಂದು ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಘೋಷಿಸಿದರು. ಪಟ್ಟಣದ ಮಾವಿನ ಕಾಯಿ ಮಂಡಿಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ಭಾನುವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಂದು ರವೀಂದ್ರನಾಥ ಟಾಗೋರ್, ಭಾರತದ ಸಾಕ್ಷಿ ಪ್ರಜ್ಞೆಯಾಗಿದ್ದರು. ಇಂದು ದೇವನೂರು ಮಹಾದೇವ ಅವರಂಥ ವ್ಯಕ್ತಿಗಳು ಭಾರತದ ಸಾಕ್ಷಿಪ್ರಜ್ಞೆಯಾಗಿದ್ದಾರೆ ಎಂದು ಹೇಳಿದರು. ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಕೆಲವರು ಹಾಡು ಹಗಲು ನನ್ನ ಬೆನ್ನಿಗೆ ಚೂರು ಹಾಕಿದರು. ಮೋಸದಿಂದ ಸೋಲುಣಿಸಿದರು. ಆದರೆ ನಾನು ದೇವರಾಜ ಅರಸು ಅವರ ಆದರ್ಶಗಳಿಗೆ ಬೆನ್ನುತೋರಿಸುವುದಿಲ್ಲ. ಮತದಾರರು ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರ ಪರ ನಿಲ್ಲಬೇಕು. ಗೌತಮ್ ಗೆಲುವಿನಲ್ಲಿ ನನ್ನ ಸೋಲಿನ ಕಹಿ ಮರೆಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣೆ ವ್ಯವಸ್ಥೆ ಬೇಕಾಗಿಲ್ಲ. ಅವರು ಸರ್ವಾಧಿಕಾರಿ ಆಗುವ ತೀರ್ಮಾನಕ್ಕೆ ಬಂದಿದ್ದಾರೆ. ಮೋದಿ ಹಾಗೂ ಅಮಿತ್ ಷಾ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಅವರು ಯಾವುದೇ ಸುದ್ದಿಗೋಷ್ಠಿ ನಡೆಸುವುದಿಲ್ಲ. ಲೋಕಸಭೆಯಲ್ಲಿ ಮಾತನಾಡುವುದಿಲ್ಲ. ಸಾರ್ವಜನಿಕ ಸಭೆಗಳಲ್ಲಿ ಮಾತ್ರ ಮಾತನಾಡುತ್ತಾರೆ. ಇದು ಪ್ರಜಾಪ್ರಭುತ್ವವಾದಿಯ ಲಕ್ಷಣವಲ್ಲ ಎಂದು ಹೇಳಿದರು.
ನೋಟು ಅಮಾನ್ಯೀಕರಣದಿಂದ ಯಾವುದೇ ಪ್ರಯೋಜನವಾಗಲಿಲ್ಲ. ಬದಲಿಗೆ ರೂ.1000 ಮುಖ ಬೆಲೆಯ ನೋಟುಗಳನ್ನು ಹಿಂದಕ್ಕೆ ಪಡೆದು, ಬಚ್ಚಿಟ್ಟುಕೊಳ್ಳಲು ಸಾಧ್ಯವಾಗುವಂತೆ ರೂ.2000 ಮಾಲ್ಯದ ನೋಟು ತರಲಾಯಿತು. ಈ ಕಾರ್ಯಾಚರಣೆಯಲ್ಲಿ ಎಷ್ಟು ಕಪ್ಪುಹಣ ಸಿಕ್ಕಿತು ಎಂಬ ಲೆಕ್ಕಮಾತ್ರ ತಿಳಿಯಲಿಲ್ಲ. ಕಾಂಗ್ರೆಸ್ ಕೇವಲ ರಾಜಕೀಯ ಮಾಡಲಿಲ್ಲ. ದೇಶದ ಅಭಿವೃದ್ಧಿ ಸಾಧಿಸಿದೆ. ಕೈಗಾರಿಕೆ, ಕೃಷಿ, ತಂತ್ರಜ್ಞಾನ, ಶಿಕ್ಷಣ ಇತ್ಯಾದಿ ರಂಗಗಳಲ್ಲಿ ಪ್ರಗತಿ ಸಾಧಿಸಿದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ದೇವಾಲಯ ನಿರ್ಮಿಸುವುದು ಪ್ರಧಾನಿಯ ಕೆಲಸವಲ್ಲ. ಸೀತೆ, ಲಕ್ಷ್ಮಣ, ಆಂಜನೇಯನನ್ನು ಹೊರತುಪಡಿಸಿದ ರಾಮ ದೇಗುಲ ಕಲ್ಪನೆಗೆ ನಿಲುಕದ್ದು. ಒಬ್ಬಂಟಿ ರಾಮ ಬಿಜೆಪಿ ರಾಮ ಮಾತ್ರ. ಪಿತೃವಾಕ್ಯ ಪಾಲನೆಗಾಗಿ ಕಾಡಿಗೆ ನಡೆದ ರಾಮ ನಮ್ಮ ರಾಮ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ ಅರಮನೆಯಲ್ಲಿ ಹುಟ್ಟುವುದಿಲ್ಲ. ಮತಪೆಟ್ಟಿಗೆಯಲ್ಲಿ ಹುಟ್ಟುತ್ತಾನೆ. ಅದು ಡಾ. ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಫಲವಾಗಿದೆ ಎಂದು ಹೇಳಿದರು.
ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮತದಾರರ ತೀರ್ಪು ಅನಿರೀಕ್ಷಿತವಾಗುತ್ತಿದೆ. ಮತದಾರರಿಗೆ ಒಳ್ಳೆಯದು ಮಾಡಿದರೂ, ದೀರ್ಘ ಕಾಲದ ಪ್ರತಿಫಲ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ ಅನಿರೀಕ್ಷಿತ ಫಲಿತಾಂಶ ನೀಡಿದ್ದಾರೆ. ಅದಕ್ಕೆ ಕೆಲವರ ಕುತಂತ್ರ ಹಾಗೂ ಹಿತಶತೃಗಳು ಕಾರಣ. ಆದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪಿಗೆ ತಲೆಬಾಗಬೇಕಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಬಡತನದಲ್ಲಿ ಬೆಳೆದವರು. ಬಡವರ ಕಷ್ಟ ಗೊತ್ತಿರುವ ವ್ಯಕ್ತಿಯಾಗಿದ್ದಾರೆ. ಸರಳ ಸಜ್ಜನಿಕೆ ಅವರ ವಿಶೇಷ ಗುಣ. ಅಂಥ ವ್ಯಕ್ತಿಗೆ ಮತ ನೀಡಿ ಲೋಕಸಭೆಗೆ ಕಳುಹಿಸಿದರೆ, ಕ್ಷೇತ್ರಕ್ಕೆ ಹೆಚ್ಚಿನ ಉಪಯೋಗವಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಹಲವು ರಿಯಾಯಿತಿಳನ್ನು ರದ್ದು ಮಾಡಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ಸುಳ್ಳಾಗಿದೆ. ಬೆಲೆ ಏರಿಕೆ ಗಗನ ಮುಖಿಯಾಗಿದೆ. ವಿವಿಧ ವೇತನಗಳು ರದ್ದಾಗಿವೆ. ದೇಶದ ಸಾಲ ಹೆಚ್ಚಾಗಿದೆ. ಆದರೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ನುಡಿದಂತೆ ನಡೆದಿದೆ ಎಂದು ಹೇಳಿದರು. ಬಿಜೆಪಿ ಹಾಗೂ ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡುತ್ತಿವೆ. ಹೊಂದಾಣಿಕೆ ಹೆಚ್ಚು ಕಾಲ ಉಳಿಯುವುದಿಲ್ಲ. ಶಕ್ತಿ ಯೋಜನೆ ಬಳಸಿಕೊಳ್ಳುವ ಮಹಿಳೆಯರ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ಸಲ್ಲದ ಮಾತಾಡಿದ್ದಾರೆ. ಅದು ಯಾರೇ ಆದರೂ ಒಪ್ಪುವ ಮಾತಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್, ನಜೀರ್ ಅಹ್ಮದ್, ಕೋಲಾರದ ಶಾಸಕ ಕೊತ್ತೂರು ಮಂಜುನಾಥ್, ಅಭ್ಯರ್ಥಿ ಕೆ.ವಿ.ಗೌತಮ್ ಮಾತನಾಡಿದರು.
ಕೋಲಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ್, ಮುಖಂಡರಾದ ಸಿ.ಎಂ.ಮುನಿಯಪ್ಪ, ಅಮೀರ್ ಜಾನ್, ದಿಂಬಾಲ ಅಶೋಕ್, ಕೆ.ಕೆ.ಮಂಜು, ಸಂಜಯ್ ರೆಡ್ಡಿ, ಸುಬ್ಬಾರೆಡ್ಡಿ, ಎನ್.ಜಿ.ಬೇಟಪ್ಪ, ನಾಗನಾಳ ಸೋಮಣ್ಣ, ಬಿ.ಎಲ್.ಪ್ರಕಾಶ್, ಯೋಗೇಂದ್ರಗೌಡ, ಕೃಷ್ಣಮೂರ್ತಿ, ಕೃಷ್ಣೇಗೌಡ, ಮ್ಯಾಕಲ ನಾರಾಯಣಸ್ವಾಮಿ, ಎನ್.ಮುನಿಸ್ವಾಮಿ, ಸೋಮಣ್ಣ, ಅಕ್ಬರ್ ಷರೀಫ್, ಈರಪ್ಪ, ರಾಮಾಂಜಮ್ಮ, ತಿಮ್ಮಯ್ಯ ಮತ್ತಿತರರು ಇದ್ದರು.