ನಾನ್ಯಾರಿಗೆ ಸೇರಲಿ ? ಉರುಳಿ ಬಿದ್ದ ಗೆಲ್ಲಿನ ಅಳಲು! ಕಾಣಿಕೆ ಡಬ್ಬಿಯಾ ? ಕಸದ ಡಬ್ಬಿಯಾ ..!? 

ಬರಹ : ಮಝರ್, ಕುಂದಾಪುರ

ಕುಂದಾಪುರ : ಸ್ಥಳೀಯ ಪುರಸಭೆಯಿಂದ ಆಳವಡಿಸಲ್ಪಟ್ಟಿರುವ ಕಾಣಿಕೆ ಡಬ್ಬಿಗಳಂತಿರುವ ಜೋಡಿ ಕಸದ ಡಬ್ಬಿಗಳು ನಗರದ ಮುಖ್ಯ ರಸ್ತೆಗಳಲ್ಲಿ ಸಾರ್ವಜನಿಕರು ಕನ ಫ್ಯೂಸ್ ಗೆ ಒಳಪಡುವಂತೆ ಹಲವೆಡೆ ರಾರಾಜಿಸುತ್ತಲಿವೆ. ದೂರದಿಂದ ಪ್ರಥಮ ಬಾರಿಗೆ ಇದನ್ನು ಕಂಡವರು ಓಹ್..ಯಾವುದೋ ದೈವ ದೇವಸ್ಥಾನದ ಕಾಣಿಕೆ ಹುಂಡಿ ಗಳಿರಬಹುದೆಂದು ಭಾವಿಸಿ ಕಿಸೆಗೆ ಕೈ ಹಾಕುತ್ರಾ ಹತ್ತಿರಕ್ಕೆ ಹೋಗಿ ನೋಡಿದರೆ ಒಂದರಲ್ಲಿ ಹಸಿ ಕಸ ಮಾತ್ರ ಇನ್ನೊಂದರಲ್ಲಿ ಒಣ ಕಸ ಮಾತ್ರ, ಅಲ್ಲದೆ ಮೇಲ್ಗಡೆ ಪುರಸಭೆ ಕುಂದಾಪುರ ಎಂದು ಬರೆದಿರುವುದನ್ನು ಕಂಡು ಕಿಸೆಯೊಳಕ್ಕೆ ನೋಟಿಗಾಗಿ ತಡಕಾಡುತ್ತಿದ್ದ ಬೆರಳುಗಳು ತನ್ನಿಂತಾನೇ ತಟಸ್ಥಗೊಳ್ಳುತ್ತವೆ .
ಅಸಲಿಗೆ ಇದರಲ್ಲಿ ಯಾವ ಗಾತ್ರದ ಕಸ ಹಾಕಬಹುದೆಂಬ ತೊಳಲಾಟ ಸಾರ್ವಜನಿಕರಿಗೆ ಬಿಡಿ , ಖುದ್ದು ಆಳವಡಿಸಿದವರೂ ತಕರಾರಿಗೆ ಬೀಳುವಂತಿವೆ ಈ ಡಬ್ಬಿಗಳು.ಸರ್ಕಾರದ ಆದೇಶದಂತೆ ಇವುಗಳನ್ನು ಆಳವಡಿಸಲಾಗಿದೆ ಎಂದು ಪುರಸಭೆಯವ್ರು ಷರಾ ಬರೆಯುತ್ತರಾದರೂ ಅಂಚೆ ಡಬ್ಬಿಗಳಿಗೆ ಹಾಕುವ ಕವರುಗಳ ಗಾತ್ರದಂತಹ ಕಸವನ್ನು ಹುಡುಕುವ ಗೋಜಿಗೆ ಹೋಗದ ಸಾರ್ವಜನಿಕರು ಈ ಡಬ್ಬಿಗಳಿಂದ ದೂರವೇ ಉಳಿದು ಬಿಟ್ಟಿದ್ದಾರೆ.

ಹಾಗಾಗಿ ಪುರಸಭೆಯಿಂದ ಆಳಡಿಸಿಲಾಗಿರುವ ಈ ಖಾಲಿ ಕಾಣಿಕೆ ಡಬ್ಬಿಗಳು ಕುಂದಾಪುರವನ್ನು ಅಣಕಿಸುವಂತಿವೆ. ಈ ನಡುವೇ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧೋ..ಮಳೆಗೆ ಕುಂದಾಪುರ ನ್ಯಾಯಾಲಯದ ಸಮೀಪ ಮರದ ಗೆಲ್ಲೊಂದು ಕಳಚಿ ನೇರವಾಗಿ ಈ ಡಬ್ಬಿಗಳ ಮುಂದೆಯೇ ಬಿದ್ದಿದೆ. ಎರಡು ದಿನಗಳಿಂದಲೂ ಅಲ್ಲಿಯೇ ಇರುವ ಗೆಲ್ಲು ಹಸಿ ಕಸ, ಒಣ ಕಸದ ಪೈಕಿ ಯಾವ ಡಬ್ಬಿಯಲ್ಲಿ ಹೇಗೆ ತೂರಲಿ ಎಂದು ಪ್ರಶ್ನಿಸುವಂತಿದೆ.