ಸಾಲ ಪಡೆದವರು ಸಂಕಷ್ಟಕ್ಕೆ ಒಳಗಾದಾಗ, ಸಾಲ ನೀಡಿದವರು ಮಾನವೀಯತೆಯಿಂದ ನಡೆದುಕೊಳ್ಳಬೇಕು:ಶಾಸಕ ಕೆ.ಆರ್.ರಮೇಶ್ ಕುಮಾರ್

ಶ್ರೀನಿವಾಸಪುರ: ಸಾಲ ಪಡೆದವರು ಸಂಕಷ್ಟಕ್ಕೆ ಒಳಗಾದಾಗ, ಸಾಲ ನೀಡಿದವರು ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಪುರ ಕ್ರಾಸ್‍ನಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಾಲ ವಿತರಣಾ ಸಮಾರಂಭದಲ್ಲಿ ಅಡ್ಡಗಲ್ ಹಾಗೂ ಲಕ್ಷ್ಮೀಪುರ ವ್ಯವಸಾಯ ಸೇವಾ ಸಹಕಾರ ಸಂಘದ ವ್ಯಾಪ್ತಿಯ 140 ಸ್ತ್ರೀ ಶಕ್ತಿ ಸಂಘಗಳಿಗೆ ರೂ.10.04 ಕೋಟಿ ಸಾಲದ ಚೆಕ್ ವಿತರಿಸಿ ಮಾತನಾಡಿದ ಅವರು, ಸಾಲ ಪಡೆದ ಸ್ತ್ರೀ ಶಕ್ತಿ ಸಂಘದ ಸದಸ್ಯೆ ಯಾವುದಾದರೂ ಕಾರಣದಿಂದ ಮರಣಹೊಂದಿದರೆ, ಮನೆಯವರನ್ನು ಸಾಲ ಮರುವಪಾವತಿ ಮಾಡುವಂತೆ ಒತ್ತಾಯಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ. ಸಿದ್ದರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗ ನೀಡಲಾಗುತ್ತಿದ್ದ ಅಕ್ಕಿ ಪ್ರಮಾಣ ಕಡಿಮೆ ಮಾಡಿದ ಕೀರ್ತಿ ಬಿಜೆಪಿ ಸರ್ಕಾರಕೆ ಸಲ್ಲುತ್ತದೆ. ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ಕೊಡಿಸಲು ಆಗದ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಡಿಸಿಸಿ ಬ್ಯಾಂಕ್ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ಸುಳ್ಳು ಆಶ್ವಾಸನೆಗೆ ಕಿವಿಗೊಡಬಾರದು ಎಂದು ಹೇಳಿದರು.
ಕೆಸಿ ವ್ಯಾಲಿ ನೀರು ತಂದು ಕೆರೆ ತುಂಬಿದ್ದೇನೆ. ಸರ್ಕಾರದ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಂಡಿದ್ದೇನೆ. ಪಕ್ಷಾತೀತವಾಗಿ ಮನೆ ವಿತರಿಸಿದ್ದೇನೆ. ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುತ್ತಿದ್ದೇನೆ. ಆದರೂ ಕೆಲವರು ಅನಗತ್ಯವಾಗಿ ಕೊಂಕು ನುಡಿಯುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌತಮಿ ಮುನಿರಾಜು, ಪಿಡಿಒ ಮಂಗಳಾಂಬ, ಮುಖಂಡರಾದ ಕೃಷ್ಣಾರೆಡ್ಡಿ, ಕೊಂಡಸಂದ್ರ ಶಿವಾರೆಡ್ಡಿ, ಕೆ.ಕೆ.ಮಂಜು, ಟಿ.ವಿ.ನಾರಾಯಣಸ್ವಾಮಿ, ಅಯ್ಯಪ್ಪ, ಬಾಬುರೆಡ್ಡಿ, ವೆಂಕಟರಾಮರೆಡ್ಡಿ, ಶಂಕರಪ್ಪ ಇದ್ದರು.