ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಕಾಂಗ್ರೆಸ್ ಪಕ್ಷದ ಸಿದ್ಧಾಂತದಲ್ಲಿ ನಂಬಿಕೆಯಿಟ್ಟು ಬರುವವರನ್ನು ಸ್ವೀಕರಿಸಲಾಗುವುದು. ಸಮಾನವಾಗಿ ನೋಡಲಾಗುವುದು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಯರ್ರಂವಾರಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡಿವಾರಿಪಲ್ಲಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ 10 ಕುಂಟುಂಬಗಲ ಸದಸ್ಯರನ್ನು ಬರಮಾಡಿಕೊಂಡು ಮಾತನಾಡಿದರು.
ತ್ಯಾಗ ಬಲಿದಾನಕ್ಕೆ ಹೆಸರಾದ ಕಾಂಗ್ರೆಸ್ ಪಕ್ಷಕ್ಕೆ ಸೇರುವುದು ಹೆಮ್ಮೆಯ ವಿಷಯವಾಗಿದೆ. ಸಂವಿಧಾನದ ಆಶಯಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುವ ಹಾಗೂ ಜಾತ್ಯಾತೀತ ಮನೋಭಾವ ಹೊಂದಿರುವ ಈ ಪಕ್ಷ ಸಮಾಜದ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಯಾವುದೇ ಪಕ್ಷಪಾತ ಮಾಡದೆ ಸರ್ಕಾರದ ಸೌಲಭ್ಯ ವಿತರಿಸಲಾಗಿದೆ. ಕುಡಿಯುವ ನೀರು ಪೂರೈಕೆ, ರಸ್ತೆ ನಿರ್ಮಾಣ, ವಸತಿ ರಹಿತರಿಗೆ ಮನೆ ನಿರ್ಮಾಣ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ. ಕೆಸಿ ವ್ಯಾಲಿ ನೀರು ಜಿಲ್ಲೆಯ ಕೆರೆಗಳಿಗೆ ಹರಿಯುತ್ತಿದೆ. ಇದರಿಂದ ಅಂತರ್ಜಲ ವೃದ್ಧಿಯಾಗಿದೆ. ರೈತರ ನೀರು ದಾಹ ತೀರುವ ಕಾಲ ಸಮೀಪಿಸುತ್ತಿದೆ. ಕೆಲವೇ ತಿಂಗಳುಗಳಲ್ಲಿ ತಾಲ್ಲೂಕಿನ ಎಲ್ಲ ಕೆರೆಗಳಿಗೆ ಕೆಸಿ ವ್ಯಾಲಿ ನೀರು ಹರಿಸಲಾಗುವುದು ಎಂದು ಹೇಳಿದರು.
ಗ್ರಾಮದ ಜೆಡಿಎಸ್ ಬೆಂಬಲಿಗರಾದ ರೆಡ್ಡಪ್ಪ, ಶಿವ, ಆಂಜಿ, ಶ್ರೀಕಾಂತ್, ನಾರಾಯಣಸ್ವಾಮಿ, ವೆಂಕಟರವಣ, ಸುರೇಶ್, ಮಂಜುನಾಥ, ರವಿ, ರಾಮಚಂದ್ರಪ್ಪ, ನಾಗರಾಜ, ಆದಿನಾರಾಯಣ, ನರಸಿಂಹಪ್ಪ, ಭದ್ರಿ, ಗಂಗಪ್ಪ, ಅನಿತಮ್ಮ, ಶ್ಯಾಮಲಮ್ಮ ಮತ್ತಿತತರು ಕಾಂಗ್ರೆಸ್ ಸೇರಿರುವುದಾಗಿ ಪ್ರಕಟಿಸಲಾಯಿತು.
ರಾಯಲ್ಪಾಡ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ರೆಡ್ಡಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ ಮತ್ತಿತರ ಮುಖಂಡರು ಇದ್ದರು.