ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ : ಕೋಲಾರ ಜಿಲ್ಲೆಯನ್ನು ಕೊರೊನಾ ಮುಕ್ತಗೊಳಿಸಲು ಸರಕಾರಿ ನೌಕರರು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ನೂತನ ಜಿಲ್ಲಾಧಿಕಾರಿ ವೆಂಕಟರಾಜ ಹೇಳಿದರು . ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ನೀಡಿದ ಸ್ವಾಗತವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು . ಕೋವಿಡ್ ಸಂದರ್ಭದಲ್ಲಿ ಸರಕಾರಿ ನೌಕರರು ಜೀವದ ಹಂಗು ತೊರೆದು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದೀರಿ , ಮೂರನೇ ಆಲೆಯನ್ನು ಸಮರ್ಪಕವಾಗಿ ನಿಯಂತ್ರಿಸೋಣ , ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು . ಸರಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಹೊಣೆ ಹೊತ್ತಿರುವ ನೌಕರರ ವರ್ಗ ಕರ್ತವ್ಯದಲ್ಲಿ ವಿಮುಖರಾಗದೆ ಕೆಲಸವನ್ನು ನಿರ್ವಹಿಸೋಣ , ಜನರ ಸಮಸ್ಯೆಗಳಿಗೆ ಸಂದಿಸೋಣ ಎಂದು ತಿಳಿಸಿದರು . ಸರಕಾರಿ ನೌಕರರ ಸಮಸ್ಯೆಗಳು ಇದ್ದಲ್ಲಿ ತಮ್ಮ ಗಮನಕ್ಕೆ ತಂದರೆ ಬಗೆಹರಿಸುವುದಾಗಿ ಡಿಸಿ ಭರವಸೆ ನೀಡಿದರು . ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮಾತನಾಡಿ , ನೌಕರರ ಸಂಘದ ಭವನಕ್ಕೆ ಐದು ಎಕರೆ ಜಮೀನು ಮಂಜುರಾತಿ ಸಂಬಂಧ ಪಸ್ತಾವನೆ ಬಾಕಿ ಇದ್ದು , ಶೀಘ್ರ ಮಂಜೂರಾತಿ ನೀಡುವಂತೆ ಮನವಿ ಮಾಡಿದರು . ಸರ್ಕಾರಿ ನೌಕರರ ಸಂಘ ತಮ್ಮ ಕಾರ್ಯನಿರ್ವಹಣೆಗೆ ಪೂರ್ಣ ಸಹಕಾರ ನೀಡಲಿದ್ದು , ಸರ್ಕಾರ ಹಾಗೂ ತಮ್ಮ ಅದೇಶ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪರ್ವಾಳವಾಗಿ ಶ್ರಮಿಸಲಿದೆ ಎಂದು ತಿಳಿಸಿದರು .