ನುಡಿದಂತೆ ನಡೆಯುತ್ತೇವೆ , 200 ಯೂನಿಟ್ ವಿದ್ಯುತ್ ಉಚಿತ , 2 ಸಾವಿರ ಪ್ರತಿ ಮಹಿಳೆಗೆ ನೀಡುತ್ತೇವೆ , ಸಿದ್ದರಾಮಯ್ಯ ಘೋಷಿಸಿದಂತೆ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ನೀಡುತ್ತೇವೆ:ಡಿ.ಕೆ.ಶಿವಕುಮಾರ್

ಕೋಲಾರ: ನುಡಿದಂತೆ ನಡೆಯುತ್ತೇವೆ , 200 ಯೂನಿಟ್ ವಿದ್ಯುತ್ ಉಚಿತ , 2 ಸಾವಿರ ಪ್ರತಿ ಮಹಿಳೆಗೆ ನೀಡುತ್ತೇವೆ , ಸಿದ್ದರಾಮಯ್ಯ ಘೋಷಿಸಿದಂತೆ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ನೀಡುತ್ತೇವೆ , ಜನರಿಗೆ ಸಹಾಯ ಮಾಡಲು ನಿಂತಿದ್ದೇವೆ ನಮ್ಮ ಈ ಘೋಷಣೆಗಳು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಕೋಲಾರದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ , ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ , ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಪ್ರಚಾರ ಮಾಡುತ್ತಿದ್ದೇವೆ , ಕೋಲಾರ ಚಿಕ್ಕಬಳ್ಳಾಪುರ 11 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದ್ದಲ್ಲದೇ ಕಳೆದವಾರ ನಡೆದ ಪ್ರಿಯಾಂಕ ಗಾಂಧಿಯವರ ನಾ ನಾಯಕಿ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಅತಿ ಹೆಚ್ಚು ಜನರನ್ನು ಸಂಘಟಿಸಿ ಕಳುಹಿಸಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರಿಗೆ ಅಭಿನಂದನೆ ಸಲ್ಲಿಸಿದರು.

ಕೋಲಾರ ಇತಿಹಾಸ ಇಡೀ ದೇಶಕ್ಕೆ ಒಂದು ಮಾದರಿ , ನೀವೆಲ್ಲಾ ಶ್ರಮ ಜೀವಿಗಳು , ಬೆಂಗಳೂರು ಕರ್ನಾಟಕಕ್ಕೆ ಹಾಲು , ತರಕಾರಿ , ರೇಷ್ಮೆ ಕೊಡುತ್ತಿದ್ದೀರಿ. ಇಡೀ ರಾಜ್ಯಕ್ಕೆ ದೇಶಕ್ಕೆ ಚಿನ್ನ ಕೊಟ್ಟ ಜಿಲ್ಲೆ , ಹಿರಿಯರ ತ್ಯಾಗ , ಹೋರಾಟ ಮರೆಯಲು ಸಾಧ್ಯವಿಲ್ಲ ಎಂದರು. ಲಕ್ಷಾಂತರ ಮಂದಿ ಬೆಂಗಳೂರಿಗೆ ಬಂದು ಉದ್ಯೋಗ ಮಾಡುತ್ತಿದ್ದೀರಿ , ಕೋಲಾರ ಜಿಲ್ಲೆ ಹಸಿರು ಕಂಗೊಳಿಸುತ್ತಿದೆ. ಕಾರಣ ನೀವೆ ಅರ್ಥ ಮಾಡಿಕೊಳ್ಳಿ , ಸಮಸ್ಯೆ ಅರಿತು ಅಭಿಪ್ರಾಯ ತಿಳಿದು ನೋವು ನಲಿವು ಆಚಾರವಿಚಾರ ಅರಿಯಲು ಈ ಯಾತ್ರೆ ಮಾಡುತ್ತಿದ್ದೇವೆ ಎಂದರು.

ಡಬಲ್ ಇಂಜಿನ್ ಸರಕಾರ ಇದೆ . ಕೇಂದ್ರದಲ್ಲಿ ಬಲಿಷ್ಠ ಸರಕಾರ , ಇಲ್ಲಿ ಆಪರೇಷನ್ ಲೋಟಸ್ ಸರಕಾರದಿಂದ ಅಭಿವೃದ್ಧಿಯಾಗಿದೆಯೇ , ವಿಮರ್ಶೆ ಮಾಡಲು ರಾಜ್ಯ ಪ್ರವಾಸ ಮಾಡುತ್ತಿದ್ದೇವೆ ಎಂದರು. ಜನ ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ , ನೋವು ತಿಳಿಸಿದ್ದಾರೆ. ಆಡಳಿತದ ವೈಫಲ್ಯಗಳನ್ನು ಗಮನಕ್ಕೆ ತಂದಿದ್ದಾರೆ. ಬಲಿಷ್ಠ ಸರಕಾರ , ಅಚ್ಛೇ ದಿನ ಸರಕಾರ ಬಂದಿದೆಯೇ ಕೇಳುತ್ತಿದ್ದೇವೆ , 15 ಜಿಲ್ಲೆ ಪ್ರವಾಸ ಮಾಡಿದ್ದೇವೆ . ಎಲ್ಲಿ ಹೋದರೂ ಜನ ಭಾರೀ ಪ್ರಮಾಣದಲ್ಲಿ ಸೇರುತ್ತಿದ್ದಾರೆ , ಹಾಸನದಲ್ಲಿ ಶಾಸಕರಿಲ್ಲದಿದ್ದರೂ 1 ಲಕ್ಷ ಮಂದಿ ಬಲ ಪ್ರದರ್ಶನ ಮಾಡಿ ಬದಲಾವಣೆ ಬಯಸುತ್ತಿದ್ದಾರೆ.

ಜನ ಸಂತೋಷವಾಗಿಲ್ಲ , ಬಿ ಜೆ ಪಿ 600 ಭರವಸೆ ನೀಡಿತ್ತು . 50 ಈಡೇರಿಸಿದ್ದಾರೆ. 550 ಈಡೇರಿಸಿಲ್ಲ . ಹಿಂದೆ ನಾವು 169 ರಲ್ಲಿ 165 ಭರವಸೆಯನ್ನು ಸಿದ್ದರಾಮಯ್ಯ ಈಡೇರಿಸಿದ್ದಾರೆ .

ಮುಖ್ಯಮಂತ್ರಿಗೆ ದಿನಕ್ಕೊಂದು ಪ್ರಶ್ನೆ , ಒಂದಕ್ಕೂ ಉತ್ತರ ನೀಡಿಲ್ಲ . ಜೆಡಿಎಸ್ ಬಗ್ಗೆ ಮಾತನಾಡಲ್ಲ , ಜೆಡಿಎಸ್‌ನವರನ್ನು ಕೇಳಿ , ಕೆರೆತುಂಬಿಸುವ ಯೋಜನೆ ಎತ್ತಿನ ಹೊಳೆ ವಿರೋಧಿಸಿ ರೈತರ ಪರ ಎಷ್ಟು ಪ್ರೀತಿ ಎಂದು ತೋರಿಸಿದ್ದಾರೆ. ಜನರಿಗೆ ಶಕ್ತಿತುಂಬಿ , ಉತ್ತರ ನೀಡಿ ಬಲ ತುಂಬುವುದೇ ಪ್ರಜಾಧ್ವನಿ ಎಂದರು.

ಕೊರೋನಾ ಪರಿಹಾರವಾಗಿ 20 ಲಕ್ಷ ಕೋಟಿ ನಿರ್ಮಲ ಸೀತಾರಾಮ್ 19 ಸಾವಿರ ಕೋಟಿ ಯಡಿಯೂರಪ್ಪ ಘೋಷಣೆ ಯಾರಿಗೂ ಅನುಕೂಲವಾಗಿಲ್ಲ , 2 ಕೋಟಿ ಉದ್ಯೋಗ ಕೊಡುತ್ತೀವಿ ಎಂದರು ಇಲ್ಲ , ಜೆಡಿಎಸ್ ಬದುಕು ಹಸನುಮಾಡುತ್ತೀವಿ ಎಂದು ಭರವಸೆ ನೀಡಿತ್ತು. 19 ತಿಂಗಳು ಅಧಿಕಾರ ಕೊಟ್ಟರೂ ನಡೆಸಲು ಆಗಲಿಲ್ಲ .

ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನಿ ಮಾಡಿತು , ಎರಡು ಬಾರಿ ಮುಖ್ಯಮಂತ್ರಿ ಮಾಡಿತ್ತು. ನಾವು ಅಂತರ್ಜಲ ಹೆಚ್ಚಿಸಿದ್ದೇವೆ , ಬದುಕು ಬದಲಾವಣೆ ತಂದಿದ್ದೇವೆ.

ನಾ ನಾಯಕಿಗೆ ಹೆಚ್ಚು ಜನ ಬ್ಯಾಲಹಳ್ಳಿಗೆ ಅಭಿನಂದನೆ

ಇಂದಿನ ಪ್ರಜಾಧ್ವನಿ ಕಾರ್ಯಕ್ರಮಕ್ಕೆ 60 ಸಾವಿರ ಜನರನ್ನು ಸೇರಿಸುವುದಾಗಿ ಕೊಚ್ಚಿಕೊಂಡಿದ್ದ ಕಾಂಗ್ರೆಸ್‌ನ ಘಟಬಂಧನ್ ನಾಯಕರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಜನ ಸೇರದೇ ಮುಜುಗರವಾಯಿತು. ವೇದಿಕೆಯಡಿ ಹಾಕಿದ್ದ 8 ಸಾವಿರ ಚೇರ್ ತುಂಬಲು ಸಾಕು ಸಾಕಾಯಿತು.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ , ನಾ ನಾಯಕಿ ಕಾರ್ಯ ಕ್ರಮಕ್ಕೆ ಅತಿ ಹೆಚ್ಚು ಜನರನ್ನು ಸಂಘಟಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡರನ್ನು ಅಭಿನಂದಿಸಿದ್ದು , ಕೋಲಾರದಲ್ಲಿ ಬ್ಯಾಲಹಳ್ಳಿ ಸಾಮರ್ಥ್ಯಕ್ಕೆ ಸಾಕ್ಷಿಯಾಯಿತು. ಜಿ.ಎಸ್‌ಟಿ ಹಣ ತನ್ನಿ ಸಿಎಂಗೆ ಸವಾಲು ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ , ಮುಖ್ಯಮಂತ್ರಿ ಬೊಮ್ಮಾಯಿ ಅವರೇ ತಾಕತ್ತಿದ್ದರೆ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲನ್ನು ತನ್ನಿ ಎಂದು ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತು ಕೊಂಡಿರುವ ನಾರಾಯಣಸ್ವಾಮಿ ಸವಾಲು ಹಾಕಿದರು.

ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮಾತನಾಡಿ , ಶೇ .40 ಲಂಚವಿಲ್ಲದೆ ಬಿಜೆಪಿ ಸರಕಾರದಲ್ಲಿ ಯಾವುದೇ ಕೆಲಸ ನಡೆಯಲ್ಲ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಟೀಕಿಸಿದರು .

ಶಾಸಕ ಕೆ.ವೈ.ನಂಜೇಗೌಡ , ಜಡ್ಡುಗಟ್ಟಿ ಹೋಗಿರುವ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರಜಾಧ್ವನಿ ನಡೆಸುತ್ತಿದ್ದು , ಬಿಜೆಪಿಯ ಕೆಟ್ಟ ಆಡಳಿತವನ್ನು ಧಿಕ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಕಟ್ಟಬೇಕು ಎಂದು ಕೋರಿದರು . ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ , ನಾಗಪುರದ ಸಂವಿಧಾನ ಬೇಕೋ ಭಾರತದ ಅಂಬೇಡ್ಕರ್‌ ಸಂವಿಧಾನ ಬೇಕೋ ಎಂಬುದನ್ನು ಜನತೆ ನಿರ್ಧರಿಸಬೇಕಿದೆ ಎಂದರು . ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ , ಎಐಸಿಸಿಯ ಸುರ್ಜೇವಾಲಾ , ಮಾಜಿ ಸಚಿವರಾದ ರಮೇಶ್ ಕುಮಾರ್ , ಎಂ.ಬಿ.ಪಾಟೀಲ್ , ಕೃಷ್ಣಬೈರೇಗೌಡ , ರಾಮಲಿಂಗಾರೆಡ್ಡಿ , ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ , ಕೆ.ಶ್ರೀನಿವಾಸ ಗೌಡ , ನಸೀರ್ ಅಹಮದ್ , ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್‌ , ಮಾಜಿ ಶಾಸಕ ಕೊತ್ತೂರು ಮಂಜುನಾಥ್ , ಅಧ್ಯಕ್ಷ ಲಕ್ಷ್ಮೀನಾರಾಯಣ ಮತ್ತಿತರರಿದ್ದರು .