ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಕರಾರಿನಂತೆ ನೀರನ್ನು ಪೂರ್ಣ ಪ್ರಮಾಣದಲ್ಲಿ ಕೆಸಿ ವ್ಯಾಲಿ,ಹೆಚ್‍ಎನ್ ವ್ಯಾಲಿ ಮೂಲಕ ಹರಿಸಲು ವಿಳಂಬವಾಗಿರುವುದರಿಂದ ಕೂಡಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಯೋಜನೆಯ ವೇಗ ಹೆಚ್ಚಿಸುವಂತೆ ವಿಧಾನಪರಿಷತ್ ಸದಸ್ಯ ಡಾ.ವೈಎ.ನಾರಾಯಣಸ್ವಾಮಿ ಮನವಿ ಮಾಡಿದ್ದಾರೆ.
ಈ ಸಂಬಂಧ ರಾಜ್ಯ ಕಾನೂನು,ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರಿಗೆ ಲಿಖಿತ ಮನವಿ ಸಲ್ಲಿಸಿರುವ ಅವರು, ಸೆಪ್ಟೆಂಬರ್ 2020ರೊಳಗೆ 400 ಎಂಎಲ್‍ಡಿ ಕೆಸಿ ವ್ಯಾಲಿಯ ಮೂಲಕ ನೀರನ್ನು ಹರಿಸಲು ಯೋಜನೆ ರೂಪಿಸಿದ್ದರೂ ಸಹ ಈವರೆಗೂ ಬೆಂಗಳೂರು ನೀರು ಸರಬರಾಜು ಮ್ತು ಒಳಚರಂಡಿ ಮಂಡಳಿ ನೀರನ್ನು ಪೂರೈಸಲು ಸಹಕರಿಸಿಲ್ಲ ಎಂದು ತಿಳಿಸಿದ್ದಾರೆ.
ಕೆಸಿ ವ್ಯಾಲಿ ಯೋಜನೆಯಡಿ ಹಂಚಿಕೆಯಾಗಿರುವ 400 ಎಂಎಲ್‍ಡಿ ಪೈಕಿ 300ರಿಂದ 310 ಎಂಎಲ್‍ಡಿ ನೀರು ಮಾತ್ರ ಪಂಪ್ ಮಾಡಲಾಗುತ್ತಿದೆ,ಈ ನೀರಿನಿಂದ ಈಗಾಗಲೇ ಕೋಲಾರ ಜಿಲ್ಲೆಯಲ್ಲಿ 79 ಕೆರೆಗಳು ಮತ್ತು 98 ಚೆಕ್‍ಡ್ಯಾಂಗಳು ಭರ್ತಿಯಾಗಿವೆ ಎಂದು ತಿಳಿಸಿದ್ದಾರೆ.
ಉಳಿದಂತೆ ಕರಾರಿನ ಪ್ರಕಾರ ಒಳಚರಂಡಿ ಮಂಡಳಿಯವರು ಇನ್ನೂ 90 ಎಂಎಲ್‍ಡಿ ನೀರನ್ನು ಸಣ್ಣನೀರಾವರಿ ಇಲಾಖೆಗೆ ಒದಗಿಸಬೇಕಾಗಿದೆ ಮತ್ತು 2ನೇ ಹಂತದಲ್ಲಿ ಹೆಚ್.ಎನ್. ವ್ಯಾಲಿ ಯೋಜನೆಗೆ 210 ಎಂಎಲ್‍ಡಿ ನೀರು ಹಂಚಿಕೆಯಾಗಿದ್ದರೂ, ಈಗ ದಿನಂಪ್ರತಿ 100 ಎಂಎಲ್‍ಡಿ ಮಾತ್ರ ಪಂಪ್ ಮಾಡುತ್ತಿದ್ದು, ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಗಲೂರು ಕೆರೆಯನ್ನು ತುಂಬಿಸಲಾಗಿದೆ ಎಂದರು.
ಆದರೆ ಹೆಚ್‍ಎನ್ ವ್ಯಾಲಿ ಯೋಜನೆಯಡಿ ಇನ್ನೂ 110 ಎಂಎಲ್‍ಡಿ ನೀರು ಸಣ್ಣ ನೀರಾವರಿ ಇಲಾಖೆಗೆ ಹಂಚಿಕೆಯಾಗಬೇಕಾಗಿದ್ದು, ಇದನ್ನೂ ಶೀಘ್ರ ಹರಿಸಲು ಕ್ರಮವಹಿಸಬೇಕಾಗಿದೆ ಎಂದು ತಿಳಿಸಿದರು.
ಕಳೆದ 29-12-2019 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, 20204ರ ಏಪ್ರಿಲ್ 23 ರಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2020ರ ಜುಲೈ ಅಂತ್ಯದೊಳಗೆ ಕೆಸಿ ವ್ಯಾಲಿಗೆ ಕೆಸಿ ವ್ಯಾಲಿಗೆ ಉಳಿಕೆ 100 ಎಂಎಲ್‍ಡಿ ನೀರು ಹರಿಸುವುದು ಮತ್ತು ಹೆಚ್‍ಎನ್‍ವ್ಯಾಲಿಗೆ 210 ಎಂಎಲ್‍ಡಿ ನೀರನ್ನು ಹರಿಸಲು ತಿಳಿಸಲಾಗಿತ್ತು ಎಂಬುದನ್ನು ಸಚಿವ ಮಾಧುಸ್ವಾಮಿ ಅವರ ಗಮನಕ್ಕೆ ತಂದಿದ್ದಾರೆ.
ಆದರೆ ಇಲ್ಲಿಯವರೆಗೂ ಸಿಎಂ ಅಧ್ಯಕ್ಷತೆಯಲ್ಲಿನ ಸಭೆ, ಸಣ್ಣನೀರಾವರಿ ಸಚಿವರಾದ ತಮ್ಮ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಗಳಲ್ಲಿ ನೀಡಿದ್ದ ಭರವಸೆ ಈಡೇರಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂದ ಸಿಎಂ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೊಂದಿಗೆ ಸಭೆ ಕರೆದು ಕರಾರಿನಂತೆ ಪೂರ್ಣ ಪ್ರಮಾಣದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆಸಿ ವ್ಯಾಲಿ ಮತ್ತು ಹೆಚ್‍ಎನ್.ವ್ಯಾಲಿಗಳಿಗೆ ಪೂರೈಸಿ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸಿ ಇಲ್ಲಿನ ರೈತರ ಬದುಕು ಹಸನಾಗಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.