

ಶ್ರೀನಿವಾಸಪುರ: ಪಟ್ಟಣದ ವಾರ್ಡ್ ಸಂಖ್ಯೆ 16 ಮತ್ತು 17ರಲ್ಲಿ ನೀರಿನ ತೀವ್ರ ಸಮಸ್ಯೆ ಉಂಟಾಗಿದ್ದು, ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡದೆ ಇದ್ದ ಕಾರಣವಾಗಿ ವಾರ್ಡ್ನ ಮಹಿಳೆಯರು ಮತ್ತು ಪುರುಷರು ಸೇರಿ 50ಕ್ಕೂ ಹೆಚ್ಚು ಮಂದಿ ಪುರಸಭೆಗೆ ತೆರಳಿ ನೀರು ಸಮಸ್ಯೆ ಪರಿಹರಿಸಲು ಒತ್ತಾಯಿಸಿದರು.
ಇತ್ತೀಚೆಗೆ ಪುರಸಭೆ ವತಿಯಿಂದ ಹೊಸದಾಗಿ ಕೊಲ್ವೇ ಬಾವಿಯನ್ನು ಕೊರೆಸಿದರೂ ಸಹ, ಸಮರ್ಪಕ ನೀರು ಸರಬರಾಜಿನಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿದರು. ಪುರಸಭೆ ಸದಸ್ಯ ಶಬ್ಬೀರ್ ಖಾನ್ ನೇತೃತ್ವದಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ತಕ್ಷಣವೇ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯ ವೇಳೆ ಪುರಸಭೆ ಅಧಿಕಾರಿಗಳು ನಿವಾಸಿಗಳಿಗೆ ನೀರು ಸರಬರಾಜು ಮಾಡಲು ಭರವಸೆ ನೀಡಿದರು.
ಮರಿಯಂ ಮಸೀದಿ ಹಾಗೂ ಅಬ್ದುಲ್ ರಹಮಾನ್ ಮಸೀದಿ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ಕೂಡ ನೀರು ಒದಗಿಸುವ ವ್ಯವಸ್ಥೆ ಮಾಡುವುದಾಗಿ ಅವರು ಆಶ್ವಾಸನೆ ನೀಡಿದರು.
ಇದೇ ಸಂದರ್ಭದಲ್ಲಿ, ಕೆಲವರು ಪ್ರತಿದಿನವೂ ಪುರಸಭೆಯಿಂದ ಟ್ಯಾಂಕರ್ನ ಮೂಲಕ ವಾರ್ಡ್ 16 ಮತ್ತು 17ಕ್ಕೆ ನೀರು ಹಂಚಲಾಗುತ್ತಿದೆ ಎಂದು ತಿಳಿಸಿದರು. ಆದರೆ, ನಿವಾಸಿಗಳು ಕೇವಲ ಕೆಲವು ಸೀಮಿತ ವ್ಯಕ್ತಿಗಳಿಗೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಗ್ರ ಹಾಗೂ ಸಮಾನ ನೀರು ವಿತರಣೆಯ ಅಗತ್ಯತೆಯನ್ನು ಅವರು ಒತ್ತಿಹೇಳಿದರು.
ಸ್ಥಳದಲ್ಲಿ ಸರಿಯಾದ ನಿರ್ವಹಣೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹಠಾತ್ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಕೂಡ ನಿವಾಸಿಗಳು ನೀಡಿದ್ದಾರೆ.
