ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಕುಡಿಯುವ ನೀರಿನ ಸೌಲಭ್ಯ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದ ಅಭಿವೃದ್ಧಿಗೆ ಪೂಕವಾದ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವಲ್ಲಿ ಎಲ್ಲ ಸದಸ್ಯರೂ ಸಹಕಾರ ನೀಡಬೇಕುಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್ ಮಾತನಾಡಿ, ಪುರಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಸದಸ್ಯರು, ತಮ್ಮ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಪುರಸಭೆ ಕಾಯ್ದೆಗಳ ಜ್ಞಾನ ಪಡೆದುಕೊಳ್ಳಬೇಕು. ತಮ್ಮ ವಾರ್ಡ್‍ಗಳಲ್ಲಿನ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಪ್ರಜಾ ಪ್ರತಿನಿಧಿ ಕಾಯ್ದೆಯಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಸದಸ್ಯ ಬಿ.ವೆಂಕಟರೆಡ್ಡಿ ಮಾತನಾಡಿ, ರಾಜಕೀಯ ಚುನಾವಣೆಗೆ ಸೀಮತವಾಗಬೇಕು. ಪಟ್ಟಣದ ಅಭಿವೃದ್ಧಿಗೆ ಎಲ್ಲ ಸದಸ್ಯರೂ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಕುಡಿಯುವ ನೀರು ಸೇರಿದಂತೆ, ಮೂಲ ಸೌಲಭ್ಯ ಒದಗಿಸುವಲ್ಲಿ ರಾಜಕೀಯ ಮಾಡಬಾರದು ಎಂದು ಕಿವಿ ಮಾತು ಹೇಳಿದರು.
ಪಟ್ಟಣದಲ್ಲಿ ನೀರಿನ ಸೋರಿಕೆ ಹೆಚ್ಚಿದೆ. ಅಮೂಲ್ಯವಾದ ನೀರು ಪೋಲಾಗುತ್ತಿದ್ದೆ. ಸೋರಿಕೆ ತಡೆಯಲು ನೇಮಿಸಲಾಗಿರುವ ಇಬ್ಬರಿಂದ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರು ದೂರಿದರು. ಪೈಪ್‍ಗಳಲ್ಲಿ ನೀರು ಸೋರಿಕೆ ಮೂಲಕ ವ್ಯಥವಾಗಿ ಹರಿದು ಹೋಗುವುದನ್ನು ತಪ್ಪಿಸಲು ಕನಿಷ್ಠ 6 ಮಂದಿಯನ್ನು ನೇಮಿಸಿಕೊಳ್ಳುವಂತೆ ಸಲಹೆ ಮಾಡಲಾಯಿತು.
ಸದಸ್ಯ ಭಾಸ್ಕರ್ ಮಾತನಾಡಿ, ಪಟ್ಟಣದಲ್ಲಿ ವಿದ್ಯುತ್ ಕಂಬಗಳ ಕೊರತೆಯಿಂದಾಗಿ ಬಹಳಷ್ಟು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಾಗರಿಕರಿಗೆ ಹೆಚ್ಚಿನ ತೊಂದರೆಯಾಗಿದೆ ಎಂದು ಹೇಳಿದರು. ಸಮಸ್ಯೆ ಬಗೆಹರಿಸಲಾಗುವುದು ಎಂದು ಎಂಜಿನಿಯರ್ ಸುದರ್ಶನ್ ಭರವಸೆ ನೀಡಿದರು.
ಜಲಗಾರರು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ನೀರಿನ ವಿತರಣೆ ಸರಿಯಾಗಿ ಆಗವುದಿಲ್ಲ ಎಂದು ಭಾಸ್ಕರ್ ಅಭಿಪ್ರಾಯಪಟ್ಟರು. ಸದಸ್ಯ ಸಂಜಯ್‍ಸಿಂಗ್ ಚರ್ಚೆಯಲ್ಲಿ ಭಾಗವಹಿಸಿದ್ದರು.
ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಪರಿಸರ ಅಭಿಯಂತರ ಡಿ.ಶೇಖರ್ ರೆಡ್ಡಿ, ಕಂದಾಯ ನಿರೀಕ್ಷ ಶಂಖರ್, ಸಿಇಒ ರಾಜೇಶ್ವರಿ, ನಾಗೇಶ್ ಇದ್ದರು.