ಶ್ರೀನಿವಾಸಪುರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ಹೊಂದಿರುವ ಮತದಾರರು ಬುಧವಾರ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆಗೆ ಮಂಗಳವಾರ ಅಧಿಕ ಸಂಖ್ಯೆಯ ಇಡಿಸಿ ಪಡೆದಿರುವ ಮತದಾರರು ಮತದಾನ ಮಾಡಲು ಬಂದ ಪರಿಣಾಮವಾಗಿ ಬಹಳಷ್ಟು ಮತದಾರರು ಮತದಾನ ಮಾಡಲು ಸಾಧ್ಯವಾಗದೆ ಹಿಂದಿರುಗಬೇಕಾಯಿತು.
ಪಟ್ಟಣದಲ್ಲಿ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ಹೊಂದಿರುವ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ತಾಲ್ಲೂಕು ಕಚೇರಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಲಾ ಒಂದು ಮತಗಟ್ಟೆ ಸ್ಥಾಪಿಸಲಾಗಿತ್ತು. ಆದರೆ ಮತದಾರರಿಗೆ ಮಾಹಿತಿ ಕೊರತೆಯಿಂದ ಎಲ್ಲರೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಯಲ್ಲಿ ಮತದಾನ ಮಾಡಲು ಹೋದ ಪರಿಣಾಮವಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಉಪ ಚುನಾವಣಾಧಿಕಾರಿ ಶಿರಿನ್ ತಾಜ್ ಪ್ರಜಾವಾಣಿಗೆ ತಿಳಿಸಿದರು.
ಆದರೆ ಬುಧವಾರ ಎರಡು ಮತಗಟ್ಟೆಗಳ ಮಾಹಿತಿ ಪಡೆದ ಇಡಿಸಿ ಮತದಾರರು ಎರಡೂ ಮತಗಟ್ಟೆಗಳಲ್ಲಿ ಮತದಾನ ಮಾಡಿದ ಪರಿಣಾಮವಾಗಿ, ಮತದಾನ ಸುಗಮವಾಗಿ ನಡೆಯಿತು. ಕ್ಷೇತ್ರದಲ್ಲಿ ಒಟ್ಟು 2606 ಇಡಿಸಿ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.