ಮತದಾರರು ರಾಜ್ಯದ ಹಿತಕ್ಕಾಗಿ ಜೆಡಿಎಸ್ ಬೆಂಬಲಿಸಬೇಕು : ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಮತದಾರರು ರಾಜ್ಯದ ಹಿತಕ್ಕಾಗಿ ಜೆಡಿಎಸ್ ಬೆಂಬಲಿಸಬೇಕು ಎಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಜೆವಿ ಕಾಲೋನಿಯಲ್ಲಿ ಬುಧವಾರ ಏರ್ಪಡಿಸಿದ್ದ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವೆ ನಡೆಯುತ್ತಿರುವ ವಾಕ್ಸಮರ ಹಾಗೂ ಕಿತ್ತಾಟದಲ್ಲಿ ನಾಗರಿಕರು ಬಡವಾಗಿದ್ದಾರೆ. ಅಭಿವೃದ್ಧಿ ಶೂನ್ಯವಾಗುತ್ತಿದೆ ಎಂದು ಹೇಳಿದರು.
ಈ ಬಾರಿ ಎಚ್.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗುವುದು ಶತಸಿದ್ಧ. ಅವರು ಮುಖ್ಯ ಮಂತ್ರಿಯಾದ 24 ಗಂಟೆಗಳಲ್ಲಿ ಸ್ತ್ರೀ ಶಕ್ತಿ ಸಂಘಗಳು ಪಡೆದುಕೊಂಡಿರುವ ಡಿಸಿಸಿ ಬ್ಯಾಂಕ್ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಅವರು ನುಡಿದಂತೆ ನಡೆಯುತ್ತಾರೆ. ಅವರ ಕೈ ಬಲಪಡಿಸುವ ಹೊಣೆ ಮತದಾರರ ಮೇಲಿದೆ ಎಂದು ಹೇಳಿದರು.
‘ನಾನು ನಾಲ್ಕು ಬಾರಿ ಶಾಸಕನಾಗಿದ್ದರೂ ನನ್ನ ಆಸ್ತಿ ಪ್ರಮಾಣ ಹೆಚ್ಚಿಲ್ಲ. ಬೆಂಗಳೂರಿನಲ್ಲಿ ಇರುವ ಒಂದು ನಿವೇಶನದಲ್ಲಿ ಮನೆ ಕಟ್ಟಲು ಸಾಧ್ಯವಾಗಿಲ್ಲ. ತಂದೆಯಿಂದ ಬಂದ ಆಸ್ತಿಯಲ್ಲಿ ನೀವನ ನಿರ್ವಹಿಸುತ್ತಿದ್ದೇನೆ. ಜನರಿಗೆ ಇದರ ಅರಿವಿದೆ. ಬೇರೆಯವರ ವಿಚಾರವೂ ಗೊತ್ತಿದೆ. ಮತದಾರರು ಚುನಾವಣೆಯಲ್ಲಿ ಆಶೀರ್ವಾದ ಮಾಡಿದಲ್ಲಿ, ಅವರ ಕ್ಷೇಮಾಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ, ಎಂದು ಹೇಳಿದರು.
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ ಮಾತನಾಡಿ, ಡಿಸಿಸಿ ಬ್ಯಾಂಕ್ ಸಾಲವಾಗಿ ನೀಡುತ್ತಿರುವುದು ನಬಾರ್ಡ್ ಬ್ಯಾಂಕ್ ಹಣ. ಕೇಂದ್ರ ಸರ್ಕಾರದ ಕೊಡುಗೆ. ಆದರೆ ಕೆಲವರು ತಮ್ಮ ಜೇಬಿನಿಂದ ನೀಡಿದಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಮತದಾರರು ಎಚ್ಚರವಹಿಸಬೇಕು. ಜೆಡಿಎಸ್ ಗೆಲುವಿಗೆ ಮನಸ್ಸು ಮಾಡಬೇಕು ಎಂದು ಹೇಳಿದರು.
ಕೆಜಿಎಸ್ ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಂ.ಎನ್.ಶ್ರೀನಿವಾಸ್, ಗಣೇಶ್, ಪುರಸಭಾ ಸದಸ್ಯ ಬಿ.ವೆಂಕಟರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಣ್ಣ, ಮುಖಂಡರಾದ ನಾರಾಯಣಸ್ವಾಮಿ, ಟಿ.ವೆಂಕಟೇಶ್, ಪ್ರಸನ್ನ, ರಾಮಚಂದ್ರಗೌಡ, ರವಿ, ಗಣೇಶ್ ಇದ್ದರು.