ಶ್ರೀನಿವಾಸಪುರ: ಎಲ್ಲ ವರ್ಗದ ಜನರ ಅಭ್ಯುದಯಕ್ಕಾಗಿ ಮತದಾರರು ಜೆಡಿಎಸ್ ಬೆಂಬಲಿಸಬೇಕು. ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕು ಎಂದು ಮಾಜಿ ಶಾಸಕ ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದಲ್ಲಿ ಭಾನುವಾರ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಜೆಡಿಎಸ್, ಬಿಜೆಪಿ ಬಿ ಟೀಂ ಎಂದು ಕಾಂಗ್ರೆಸ್ ಮುಖಂಡರು ಹೇಳುವುದರ ಮೂಲಕ ಅಲ್ಪ ಸಂಖ್ಯಾತರ ಮತ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದು ಸತ್ಯಕ್ಕೆ ದೂರವಾದ ಸಂಗತಿ ಎಂಬುದು ಪ್ರಜ್ಞಾವಂತ ಮತದಾರರಿಗೆ ತಿಳಿದಿದೆ ಎಂದು ಹೇಳಿದರು.
ಕಾಂಗ್ರೆಸ್ ಹಿಂದಿನಿಂದಲೂ ಅಲ್ಪ ಸಂಖ್ಯಾತರನ್ನು ಮತ ಬ್ಯಾಂಕ್ ಮಾಡಿಕೊಂಡಿತ್ತು. ಈಗ ಕಾಂಗ್ರೆಸ್ ಬಣ್ಣ ಬಯಲಾಗಿದೆ. ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದ ಜನರೂ ಕಾಂಗ್ರೆಸ್ ನಿಂದ ಅಂತ ಕಾಯ್ದುಕೊಳ್ಳುತ್ತಿದ್ದಾರೆ. ಹಾಗಾಗಿಯೇ ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ತಾಲ್ಲೂಕಿನಲ್ಲಿ ಏನಾದರೂ ಅಭಿವೃದ್ಧಿಯಾಗಿದ್ದರೆ, ಅದು ನಾನು ಶಾಸಕನಾಗಿದ್ದ 4 ಅವಧಿಯಲ್ಲಿ ಮಾತ್ರ. ಶಾಸಕ ರಮೇಶ್ ಕುಮಾರ್ ನೀಡಿದ ಯಾವುದೇ ಭರವಸೆ ಈಡೇರಿಸಿಲ್ಲ. ಜನರ ಎದುರು ಕಣ್ಣೀರು ಸುರಿಸಿ, ಮಾತಿನಿಂದ ಹೊಟ್ಟೆ ತುಂಬಿಸುತ್ತಿದ್ದಾರೆ. ಜಾಕೀರ್ ಹುಸೇನ್ ಮೊಹಲ್ಲಾ ನಿರ್ಮಿಸಿದ್ದು ನಾನು ಶಾಸಕನಾಗಿದ್ದ ಅವಧಿಯಲ್ಲಿ. ಆದರೆ ಈಗ ಅದು ಅಭಿವೃದ್ಧಿ ಕಾಣದೆ ತಿಪ್ಪೆಯಂತಾಗಿದೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಏಜಾಜ್ ಮಾತನಾಡಿ, ಬಿಜೆಪಿ ಅಲ್ಪ ಸಂಖ್ಯಾತರ ಹಿತ ಕಾಯುವಲ್ಲಿ ವಿಫಲವಾಗಿದೆ. ಕಾಂಗ್ರೆಸ್, ಬಿಜೆಪಿ ಬಿ ಟೀಂನಂತೆ ವರ್ತಿಸುತ್ತಿದೆ. ಇಂಥ ಸಂದರ್ಭದಲ್ಲಿ ಜೆಡಿಎಸ್ ಅಲ್ಪ ಸಂಖ್ಯಾತರ ಆಶಾಕಿರಣವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿನ ಅಲ್ಪಸಂಖ್ಯಾತ ಮುಖಂಡರು ಜೆಡಿಎಸ್ ಬಗ್ಗೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಅಂಥ ನಾಯಕರಿಂದ ಅಂತರ ಕಾಯ್ದುಕೊಳ್ಳಬೇಕು. ಜೆಡಿಎಸ್ ಬೆಂಬಲಿಸಬೇಕು ಎಂದು ಹೇಳಿದರು.
ಅಂಜುಮನ್ ಸಂಸ್ಥೆ ಮುಖ್ಯಸ್ಥ ಜಮೀರ್ ಅಹ್ಮದ್ ಮಾತನಾಡಿ, ಶಾಸಕ ಕೆ.ಆರ್.ರಮೇಶ್ ಕುಮಾರ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸಮಾಡಿ ಗೆಲ್ಲಿಸಿದ್ದು ಗುಟ್ಟಾಗಿ ಉಳಿದಿಲ್ಲ. ಕೆ.ಎಚ್.ಮುನಿಯಪ್ಪ ಸೋಲಿಗೆ ಕಾರಣರಾದವರಿಗೆ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಸರಿಯಾಗಿ ಬುದ್ಧಿ ಕಲಿಸಲಿದ್ದಾರೆ. ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ಕಲ್ಲುಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ. ಇದೆಲ್ಲವನ್ನೂ ಸಹಿಸದ ಅನ್ಯ ಪಕ್ಷಗಳ ಮತದಾರರು ಜೆಡಿಎಸ್ ಕಡೆ ವಾಲುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ, ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್, ಮಾಜಿ ಅಧ್ಯಕ್ಷ ಶ್ರೀನಿವಾಸಪ್ಪ, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಿ ಮುತ್ತಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಂ.ವಿ.ಶ್ರೀನಿವಾಸ್, ಮುಖಂಡರಾದ ಕುಂದಿಟಿವಾರಿಪಲ್ಲಿ ಶಿವಾರೆಡ್ಡಿ, ಬಿ.ವೆಂಕಟರೆಡ್ಡಿ, ಕೃಷ್ಣಾರೆಡ್ಡಿ, ರವಿ, ವೇಣುಗೋಪಾಲರೆಡ್ಡಿ, ಜಗನ್ನಾಥ್, ಪುರಸಭೆ ಸದಸ್ಯರಾದ ವಹೀದಾ ಬೇಗಂ, ಶಬ್ಬೀರ್ ಖಾನ್, ರಸೂಲ್ ಖಾನ್, ಜಬೀನ್ ತಾಜ್, ನಸೀರ್ ಅಹ್ಮದ್ ಖಾನ್, ಸೈಯದ್ ನಿಜಾಮುದ್ದೀನ್, ರಿಯಾನಾಖಾನಂ, ಜಯಲಕ್ಷ್ಮಿ ಇದ್ದರು.