ಶ್ರೀನಿವಾಸಪುರ: ರಾಜ್ಯದ ಅಭಿವೃದ್ಧಿಗಾಗಿ ಮತದಾರರು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಬೇಕು ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಾಲ್ಲೂಕಿನ ರೋಜೇನಹಳ್ಳಿ ಕ್ರಾಸ್ ಸಮೀಪ ಜೆಡಿಎಸ್ ಪಂಚರತ್ನ ರಥಯಾತ್ರೆ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಎತ್ತಿನ ಹೊಳೆ ನೀರಿಗೆ ಬದಲಾಗಿ, ಕೆಸಿ ವ್ಯಾಲಿ ಕೊಳಚೆ ನೀರು ಹರಿಸಲಾಗುತ್ತಿದೆ. ಅಂಥ ನೀರು ಬಳಸಿಕೊಂಡು ಬೆಳೆದ ಟೊಮೆಟೊ ತರಕಾರಿಗೆ ಬೆಲೆ ಸಿಗುತ್ತಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಮಕ್ಕಳು ಸ್ವಾಭಿಮಾನದಿಂದ ಬದುಕಲು ಪೂರಕವಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು. ರೈತರ ಮಕ್ಕಳಿಗೆ ಹೆಣ್ಣು ಸಿಗದ ಪರಿಸ್ಥಿತಿ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುದು. ಪಂಚರತ್ನ ಯೋಜನೆ ಜಾರಿ ಮೂಲಕ ಸಮಾಜದ ಎಲ್ಲ ವರ್ಗದ ಜನರಿಗೆ ಉತ್ತಮ ಬದುಕು ನೀಡಲಾಗುವುದು ಎಂದು ಹೇಳಿದರು.
ಸುಗಟೂರು ಗ್ರಾಮದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಕೆ.ಆರ್.ರಮೇಶ್ ಕುಮಾರ್ ಕಾರಣ. ರಮೇಶ್ ಕುಮಾರ್ ಹೇಳಿರುವಂತೆ ಕಾಂಗ್ರೆಸ್ ಮುಖಂಡರು ಮೂರು ತಲೆಮಾರಿಗೆ ಸಾಕಾಗುವಷ್ಟು ಆಸ್ತಿ ಮಾಡಿದ್ದಾರೆ. ಅವರು ಜನರ ಕಷ್ಟಕ್ಕೆ ಎಲ್ಲಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಸ್ತ್ರೀ ಶಕ್ತಿ ಸಂಘದ ಸದಸ್ಯರು ಪಡೆದಿರುವ ಡಿಸಿಸಿ ಬ್ಯಾಂಕ್ ಸಾಲ ರಮೇಶ್ ಕುಮಾರ್ ತೀರಿಸುವುದಿಲ್ಲ. ಅಧಿಕಾರಕ್ಕೆ ಬಂದರೆ ನಾನು ತೀರಿಸುತ್ತೇನೆ. ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಅವರನ್ನು ಗೆಲ್ಲಿಸಿಕೊಡಿ, ನಾನು ಮಂತ್ರಿ ಮಾಡುತ್ತೇನೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಮಾಜಿ ಸದಸ್ಯ ತೂಪಲ್ಲಿ ಆರ್.ಚೌಡರೆಡ್ಡಿ, ಶ್ರೀನಿವಾಸಪುರ ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ, ಮಾಲೂರು ಅಭ್ಯರ್ಥಿ ಜೆಇ ರಾಮೇಗೌಡ. ಕೋಲಾರ ಅಭ್ಯರ್ಥಿ ಸಿಎಂಆರ್ ಶ್ರೀನಾಥ್, ಮುಖಂಡರಾದ ಬಿ.ವಿ.ಶಿವಾರೆಡ್ಡಿ, ನಿಖಿಲ್ ಕುಮಾರಸ್ವಾಮಿ, ಮಂಗಮ್ಮ ಮುನಿಶಾಮಿ, ಜಂಜಪ್ಪ, ಗೋಪಾಲ್, ಗಾಯಿತ್ರಿ ಮುತ್ತಪ್ಪ, ಎಚ್.ನಾರಾಯಣಸ್ವಾಮಿ, ಪೂಲ ಶಿವಾರೆಡ್ಡಿ, ಮಂಜುನಾಥರೆಡ್ಡಿ, ಕೆ.ಪಿ.ನಾಗೇಶ್, ರಾಮಚಂದ್ರೇಗೌಡ, ಸಂತೋಷ್, ಮನು, ನಾರಾಯಣಗೌಡ, ನಂಜೇಗೌಡ, ವೆಂಕಟಲಕ್ಷ್ಮಮ್ಮ ದ್ಯಾವಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಎಂ.ವಿ.ಶ್ರೀನಿವಾಸ್, ಗಣೇಶ್, ನಂಜುಂಡಪ್ಪ ಮತ್ತಿತರರು ಇದ್ದರು.
ರಾತ್ರಿ ಲಕ್ಷ್ಮೀಪುರ, ರಾಯಲ್ಪಾಡ್, ಗೌನಿಪಲ್ಲಿಯಲ್ಲಿ ರೋಡ್ ಷೋ ಮೂಲಕ ಜೆಡಿಎಸ್ಗೆ ಬೆಂಬಲ ಕೋರಿದರು. ತಡರಾತ್ರಿ ನಕ್ಕಲಗಡ್ಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಯಿತು.