ಶ್ರೀನಿವಾಸಪುರ: ಮತದಾರರು ಜನ ವಿರೋಧಿಯಾದ ಬಿಜೆಪಿಯನ್ನು ತಿರಸ್ಕರಿಸಿ, ಜನಪರ ಕಾಳಜಿ ಹೊಂದಿರುವ ಕಾಂಗ್ರೆಸ್ಗೆ ಮತ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಅಧ್ಯಕ್ಷ ಎನ್.ಮುನಿಸ್ವಾಮಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಾಯಿಸುವುದಾಗಿ ಬಹಿರಂಗ ಹೇಳಿಕೆ ನೀಡಿರುವ ಬಿಜೆಪಿ, ಸರ್ವ ಜನಾಂಗದ ಶಾಂತಿಯ ತೋಟದ ಬೇರು ಕೀಳಲು ಕೈಹಾಕಿದೆ ಎಂದು ಆಪಾದಿಸಿದರು.
ಬಿಜೆಪಿ ಸರ್ಕಾರದ ಆಡಳಿತದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ಅಂಬೇಡ್ಕರ್ ವಿರೋಧಿ ಅಲೆ ಸೃಷ್ಟಿಸಲು ಇನ್ನಿಲ್ಲದ ಪ್ರಯತ್ನ ನಡೆಸಲಾಗುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಬಿಜೆಪಿ ಆಡಳಿತದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿ ತಲುಪಿದೆ. ದಲಿತ ಮಕ್ಕಳ ವಿದ್ಯಾರ್ಥಿ ವೇತನ ಕಡಿತಗೊಳಿಸಲಾಗಿದೆ. ಒಳ ಮೀಸಲಾತಿ ವಿಷಯದಲ್ಲಿ ಮಹಾ ಮೋಸ ಮಾಡಲಾಗಿದೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಕಾಂಗ್ರೆಸ್ ಬೆಂಬಲಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಂದೇ ಆಗಿದ್ದು, ಮತದಾರರು ಆ ಎರಡೂ ಪಕ್ಷಗಳನ್ನು ಸಮಾನ ದೂರದಲ್ಲಿಡಬೇಕು. ಕಾಂಗ್ರೆಸ್ ಗೆಲ್ಲಿಸಬೇಕು. ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರನ್ನು ಸಮಿತಿ ಬೆಂಬಲಿಸುತ್ತದೆ ಎಂದು ಹೇಳಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಮಾತನಾಡಿ, ಕೆಸಿ ವ್ಯಾಲಿ ನೀರು ಕ್ಷೇತ್ರದ ಅಭಿವೃದ್ಧಿಗೆ ವರದಾನವಾಗಿದೆ. ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಿರುವುದರಿಂದ ಅಂತರ್ಜಲ ವೃದ್ಧಿಸಿದೆ. ಕೃಷಿ ಕೊಳವೆ ಬಾವಿಗಳು ಪುನ:ಶ್ಚೇತನಗೊಂಡಿವೆ. ಕೆಸಿ ವ್ಯಾಲಿ ನೀರು ಯೋಜನೆ ಜಾರಿಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಪಾತ್ರ ಹಿರಿದು. ಕ್ಷೇತ್ರಕ್ಕೆ ವಿಶೇಷವಾಗಿ 23 ಸಾವಿರ ಮನೆಗಳನ್ನು ತಂದಿದ್ದಾರೆ. ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ಡಿಸಿಸಿ ಬ್ಯಾಂಕ್ನಿಂದ ಬಡ್ಡಿರಹಿತ ಸಾಲ ನೀಡುವ ವ್ಯವಸ್ಥೆ ಮಾಡಿದ್ದಾರೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಮೂಲ ಸೌಕರ್ಯ ಒದಗಿಸಲಾಗಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಕೆ.ಕೆ.ಮಂಜು, ಮುಖಂಡರಾದ ಮುನಿವೆಂಕಟಪ್ಪ, ಚಲಪತಿ, ನರಸಿಂಹ, ರಾಮಕೃಷ್ಣ, ವಿ.ಮುನಿಯಪ್ಪ, ಮುಳಬಾಗಲಪ್ಪ, ರವಣಪ್ಪ, ಶ್ರೀನಿವಾಸ್, ಅಶೋಕ್ ಇದ್ದರು.