ಮತದಾರರು, ಸಂವಿಧಾನದಲ್ಲಿ ನಂಬಿಕೆಯುಳ್ಳ ಹಾಗೂ ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ಬದ್ಧವಾಗಿರುವ ಕಾಂಗ್ರೆಸನ್ನು ಅಧಿಕಾರಕ್ಕೆ ತರಬೇಕು :ಮಾಜಿ ಸಚಿವ ಸೋಮಶೇಖರ್

ಶ್ರೀನಿವಾಸಪುರ: ಮತದಾರರು, ಸಂವಿಧಾನದಲ್ಲಿ ನಂಬಿಕೆಯುಳ್ಳ ಹಾಗೂ ಪ್ರಜಾಪ್ರಭುತ್ವ ಸಿದ್ಧಾಂತಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು ಎಂದು ಮಾಜಿ ಸಚಿವ ಸೋಮಶೇಖರ್ ಹೇಳಿದರು.
ತಾಲ್ಲೂಕಿನ ಶಿವಪುರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಮಾಜದಲ್ಲಿ ಧರ್ಮಾಂಧತೆ ಹಾಗೂ ಕೋಮುವಾದ ಬೆಳೆಸುತ್ತಿದೆ. ಸಾಮಾಜಿಕ ಸಾಮರಸ್ಯ ಹಾಳು ಮಾಡುತ್ತಿದೆ ಎಂದು ಆಪಾದಿಸಿದರು.
ಬಿಜೆಪಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ ಅದನ್ನು ಒಮ್ಮೆಗೇ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ಧರಿಂದ ಸ್ವಲ್ಪ ಸ್ವಲ್ಪ ಹಾನಿಗೊಳಿಸಿ, ಪೂರ್ಣ ಪ್ರಮಾಣದಲ್ಲಿ ಉರುಳಿಸುವ ಹುನ್ನಾರ ಮಾಡುತ್ತಿದೆ. ಮತದಾರರು ಅದಕ್ಕೆ ಅವಕಾಶ ನೀಡಬಾರದು. ವಿಧಾನಸಭೆ ಹಾಗೂ ಮುಂದೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಬೇಕು ಎಂದು ಹೇಳಿದರು.
ಶಾಸಕ ಕೆ.ಆರ್.ರಮೇಶ್ ಕುಮಾರ್ ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕೆಸಿ ವ್ಯಾಲಿ ನೀರು ಹರಿಸಿ, ಹಸಿರು ಮೂಡಿಸಿದ್ದಾರೆ. ರೈತರ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಮನೆಗಳನ್ನು ತಂದು ಬಡವರಿಗೆ ನೀಡಿದ್ದಾರೆ. ಅವರ ಕೊಡುಗೆ ಗಮನಿಸಿ ಮತದಾರರು ಆಶೀರ್ವಾದ ಮಾಡಬೇಕು ಎಂದು ಹೇಳಿದರು.
ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಹಿಂದೆ ಕ್ಷೇತ್ರದಲ್ಲಿ 1800 ಅಡಿ ಕೊಳವೆ ಬಾವಿ ಕೊರೆದರೂ ನೀಡು ಸಿಗುತ್ತಿರಲಿಲ್ಲ. ಈಗ ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಿದ ಪರಿಣಾಮವಾಗಿ ಅಂತರ್ಜಲ ವೃದ್ಧಿಗೊಂಡಿದೆ. 600 ಅಡಿಯಲ್ಲೇ ನೀರು ಸಿಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ನೀಡುವ ಬಡ್ಡಿರಹಿತ ಸಾಲದ ಮೊತ್ತವನ್ನು ರೂ.50 ಸಾವಿರದಿಂದ ರೂ.1 ಲಕ್ಷಕ್ಕೆ ಹೆಚ್ಚಿಸಲಾಗುವುದು. ಅಕ್ಕಿ ನೀಡುವ ಪ್ರಮಾಣ 10 ಕೆಜಿಗೆ ಹೆಚ್ಚಿಸಲಾಗವುದು. ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಗ್ಯಾಸ್ ಸಲಿಂಡರ್ ಬೆಲೆಯನ್ನು ಅರ್ಧಕ್ಕೆ ಇಳಿಸಲಾಗುವುದು. ಮನೆ ಒಡತಿಗೆ ತಿಂಗಳಿಗೆ ರೂ.2000 ನೀಡಲಾಗುವುದು ಎಂದು ಹೇಳಿದರು.
ಮುಖಂಡರಾದ ಎಂ.ಶ್ರೀನಿವಾಸನ್, ಅಯ್ಯಪ್ಪ, ಮುನಿವೆಂಕಟಪ್ಪ, ಗೋಪಾಲರೆಡ್ಡಿ, ನಾಗರಾಜ್, ಈರಪ್ಪ, ಗುರಪ್ಪ, ಶಿವಪ್ಪ, ಎಸ್.ಜಿ.ವೆಂಕಟೇಶ್, ಎಸ್.ಜಿ.ಜಗದೀಶ್, ವಿ.ಗುರಪ್ಪ, ಸಿ.ಶಿವಕುಮಾರ್, ಮುರಳಿ, ವೆಂಕಟೇಶ್, ಪ್ರಸಾದ್ ಶ್ರೀನಿವಾಸ್, ರಾಜೇಂದ್ರ, ತಮ್ಮಯ್ಯ ಇದ್ದರು