ಗಡಿಜಿಲ್ಲೆಯಲ್ಲಿ ಕನ್ನಡದ ಕಂಪು ಹೆಚ್ಚಲು ಕಸಾಪ ಅಭ್ಯರ್ಥಿ ಗೋಪಾಲಗೌಡರಿಗೆ ಮತ ನೀಡಿ ಸಹಕರಿಸಿ-ಶ್ರೀನಿವಾಸಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಗಡಿ ಜಿಲ್ಲೆಯಲ್ಲಿ ಕನ್ನಡದ ಕಂಪು ಹೆಚ್ಚಿಸಿ ಕಸಾಪಗೆ ಭವ್ಯ ಭವನ ನಿರ್ಮಿಸುವ ಗುರಿಯೊಂದಿಗೆ ಚುನಾವಣೆಗೆ ಸ್ವರ್ಧಿಸಿರುವ ಗೋಪಾಲಗೌಡರನ್ನು ಬೆಂಬಲಿಸುವಂತೆ ರಾಜ್ಯ ದೈಹಿಕ ಶಿಕ್ಷಕರ ಸಂಘದ ನಿಟಕಪೂರ್ವ ಅಧ್ಯಕ್ಷ ಇ.ಶ್ರೀನಿವಾಸಗೌಡ ಮನವಿ ಮಾಡಿದರು.
ಸೋಮವಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಶಿಕ್ಷಕರ ಬಳಿ ಮತಯಾಚಿಸಿದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಎನ್.ಬಿ.ಗೋಪಾಲಗೌಡರಿಗೆ ಮತ ನೀಡಿ ಗಡಿಯಲ್ಲಿ ಕನ್ನಡಪರ ಕಾರ್ಯಕ್ರಮಗಳು ಹೆಚ್ಚು ನಡೆಯಲು ಅವಕಾಶ ಕಲ್ಪಿಸಲು ಮನವಿ ಮಾಡಿದರು.
ಕೋಲಾರದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಆಶಯವನ್ನು ಈಡೇರಿಸುವ ಸಂಕಲ್ಪ ಗೋಪಾಲಗೌಡರದ್ದಾಗಿದೆ, ಗಡಿ ಜಿಲ್ಲೆಯಲ್ಲಿ ಕನ್ನಡ ಭಾಷೆ, ನೆಲ,ಜಲದ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಧ್ಯೇಯದೊಂದಿಗೆ ಕಣಕ್ಕಿಳಿದಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಅಭಿರುಚಿಯಿರುವ ಯುವಕರನ್ನು ಪ್ರೋತ್ಸಾಹಿಸಲು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಆಶಯವಿದೆ, ಜಿಲ್ಲೆಯ ಸಾಹಿತ್ಯ ಚರಿತ್ರೆಯ ಸಂಪುಟ ಬಿಡುಗಡೆ ಮಾಡುವ ಉದ್ದೇಶವಿದ್ದು, ಜಿಲ್ಲೆಯ
ಸಾಹಿತ್ಯ ಪ್ರೇಮಿಗಳು ಒಂದು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವ ಶುಲ್ಕ ಕಡಿಮೆ ಮಾಡಿಸುವ ಮೂಲಕ ಜಿಲ್ಲೆಯ ಪ್ರತಿ ಸುಶೀಕ್ಷಿತರು ಸದಸ್ಯರಾಗಿಸುವ ಆಶಯವಿದೆ, ಕನ್ನಡ ನಾಡು,ನುಡಿಗಾಗಿ ನಡೆಯುವ ಎಲ್ಲಾ ಹೋರಾಟಗಳಲ್ಲೂ ಕಸಾಪವನ್ನು ಮುಂಚೂಣಿಗೆ ತರುವ ನನ್ನ ಧ್ಯೇಯಕ್ಕೆ ಬೆಂಬಲ ನೀಡುವಂತೆ ಗೋಪಾಲಗೌಡರ ಪರವಾಗಿ ಶ್ರೀನಿವಾಸಗೌಡ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಭಾರಿ ಮುಖ್ಯಶಿಕ್ಷಕ ವೆಂಕಟರೆಡ್ಡಿ, ಶಿಕ್ಷಕರಾದ ಎಸ್.ಅನಂತಪದ್ಮನಾಭ್, ಭವಾನಿ, ಶ್ವೇತಾ, ಫರೀದಾ, ಶ್ರೀನಿವಾಸಲು, ಡಿ.ಚಂದ್ರಶೇಖರ್ ಮತ್ತಿತರರಿದ್ದರು.