ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣವಾಗಿದ್ದು ಶನಿವಾರ ಮುಂಜಾನೆ ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾದಲ್ಲಿ ಮೈತೆಯ್ ಸಮುದಾಯದ ಮೂವರು ಕೊಲ್ಲಲ್ಪಟ್ಟಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ಘಟನೆಯು ಮೈತೆಯ್ ಪ್ರಾಬಲ್ಯದ ಬಿಷ್ಣುಪುರ್ ಜಿಲ್ಲೆ ಮತ್ತು ಕುಕಿ-ಜೋಮಿ ಪ್ರಾಬಲ್ಯವಿರುವ ಚುರಾಚಂದ್‌ಪುರ ಜಿಲ್ಲೆಯ ಗಡಿಯಲ್ಲಿರುವ ಕ್ವಾಕ್ಟಾ ಪ್ರದೇಶದಲ್ಲಿ ನಡೆದಿದೆ. ಅಲ್ಲಿ ಪ್ರಸ್ತುತ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಗುಂಡಿನ ಚಕಮಕಿ ನಡೆಯುತ್ತಿದೆ ಎನ್ನಲಾಗಿದೆ.
ಹಿಂದೆ ನೆಡದ ಹಿಂಸಾಚಾರದಲ್ಲಿ ಸಾವನಪ್ಪಿದ 35 ಕುಕಿ-ಜೋಮಿ ಜನರ ಸಾಮುಹಿಕ ಅಂತ್ಯಕ್ರಿಯೆ ನೇರವೇರಿಸಿದ ನಂತರ ಮತ್ತೆ ಹಿಂಸಾಚಾರ ಉಲ್ಭಣಗೊಂಡಿದ್ದು, ಪರಿಣಾಮ ಮೂವರು ಸಾವನಪ್ಪಿದ್ದಾರೆ. ಟೊರ್ಬಂಗ್ ಪ್ರದೇಶದಲ್ಲಿ ಅಂತ್ಯ ಕ್ರಿಯೆ ನಡೆಸಲಾಯಿತು. ಇದು ಸಹ ಬಿಷ್ಣುಪುರ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳ ಗಡಿ ಪ್ರದೇಶವಾಗಿದ್ದು, ಮೇ 03 ರಂದು ಇಲ್ಲಿಯೇ ಹಿಂಸಾಚಾರ ಆರಂಭವಾಗಿತ್ತು. ಅದೇ ಸ್ಥಳದಲ್ಲಿ ಮೃತ ಕುಕಿ ಜನರ ಅಂತ್ಯ ಕ್ರಿಯೆ ನಡೆದುದ್ದರಿಂದ ಅಲ್ಲಿನ ಜನರು ಕೋಪೋದ್ರಿಕ್ತರಾಗಿ ಹಿಂಸಾಚಾರಕ್ಕೆ ಇಳಿದಿದ್ದಾರೆ. ಈ ಬಗ್ಗೆ ಸರ್ಕಾರ ತೀವ್ರ ಎಚ್ಚರಿಕೆ ವಹಿಸಬೇಕಿತ್ತು ಎಂದು ಅಭಿಪ್ರಾಯ ಪಡಲಾಗಿದೆ.