

ಬೆಂಗಳೂರು: ಬೆಂಗಳೂರು,ಏ.೧೭-ಹೃದಯಾಘಾತದಿಂದ ನಿನ್ನೆ ನಿಧನರಾದ ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ನಟ,ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಇಂದು ಬ್ರಾಹ್ಮಣ ವಿಧಿ ವಿಧಾನದ ಮೂಲಕ ನೆರವೇರಿದ್ದು ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಚಾಮರಾಜಪೇಟೆಯ ಟಿಆರ್ ಮಿಲ್ ಬಳಿಯ ಹಿಂದೂ ರುದ್ರಭೂಮಿಯಲ್ಲಿ ಮಧ್ಯಾಹ್ನ ೧೨ ಗಂಟೆಯ ಸುಮಾರಿಗೆ ಚಿತ್ರರಂಗದ ಗಣ್ಯರು ಕುಟುಂಬದ ಸದಸ್ಯರು ಸೇರಿದಂತೆ ಅಪ್ತರು ದ್ವಾರಕೀಶ್ ಪಾರ್ಥೀವ ಶರೀರಕ್ಕೆ ಸಕಲ ಸರ್ಕಾರಿ ಗೌರವ ಮತ್ತು ಬ್ರಾಹ್ಮಣ ಸಂಪ್ರದಾಯದ ವಿಧಿ ವಿಧಾನದೊಂದಿಗೆ ಪುತ್ರ ಯೋಗೇಶ್ ಸೇರಿದಂತೆ ಪುತ್ರರು ಅಂತ್ಯಕ್ರಿಯೆ ನೆರವೇರಿಸಿದರು. ಈ ಮೂಲಕ ಕನ್ನಡದ ಕುಳ್ಳ ಇನ್ನು ಬರೀ ನೆನಪು ಮಾತ್ರ.ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮುನ್ನ ದ್ವಾರಕೀಶ್ ಮಕ್ಕಳು ಅಪ್ಪನ ಹಣೆಗೆ ಕಡೆಯ ಬಾರಿ ಮುತ್ತಿಕ್ಕುವ ಮುನ್ನ ಬೀಳ್ಕೊಟ್ಟರು. ಈ ಕ್ಷಣ ಹೃದಯ ಸ್ಪರ್ಶಿಯಾಗಿತ್ತು. ನೆರದಿದ್ದ ಮಂದಿಯ ಕಣ್ಣೀರ ಧಾರೆ ಹರಿಯಿತು.ಇದಕ್ಕೂ ಮುನ್ನ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ರಾಜಕೀಯ ನಾಯಕರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿ ಗುಣಗಾನ ಮಾಡಿದರು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಟ, ನಿರ್ಮಾಪಕ ನಿರ್ದೇಶಕರಾಗಿ ದ್ವಾರಕೀಶ್ ಸೇವೆ ಸಲ್ಲಿಸಿದವರು, ಅವರ ಸೇವೆ ಮರೆಯಲು ಸಾಧ್ಯವಿಲ್ಲ. ರಾಜ್ ಕುಮಾರ್ ಮತ್ತು ದ್ವಾರಕೀಶ್ ಜೋಡಿ ಯಶಸ್ವಿಯಾಗಿತ್ತು ಜೊತೆಗೆ ಅಂಬರೀಷ್, ವಿಷ್ಣುವರ್ಧನ್ ಜೋಡಿ ಕೂಡ. ಚಿತ್ರಜೀವನದಲ್ಲಿ ಏಳು ಬೀಳು ಕಂಡವರು, ಆದರೂ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದವರು ಎಂದು ಗುಣಗಾನ ಮಾಡಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು- ಹರಿದು ಬಂತು ಜನಸಾಗರ

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಜನಸಾಗರ ಹರಿದು ಬಂದಿದ್ದು ಹಿರಿಯ ನಟನ ಕೊಡುಗೆ ಸ್ಮರಿಸಿ ಕಂಬನಿ ಮಿಡಿದರು.
ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಟ,ನಟಿಯರು ನಿರ್ಮಾಪಕರು, ನಿರ್ದೇಶಕರೂ ಸೇರಿದಂತೆ ವಿವಿಧ ವಿಭಾಗದ ತಂತ್ರಜ್ಞರು ಅಂತಿಮ ದರ್ಶನ ಪಡೆದರು.
ದ್ವಾರಕೀಶ್ ಆಪ್ತರು, ಅಭಿಮಾನಿಗಳು ಮತ್ತು ಚಿತ್ರರಂಗದ ಪ್ರಮುಖರ ಒತ್ತಾಸೆಯಂತೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು ಗಣ್ಯರು ಮತ್ತು ಅತಿ ಗಣ್ಯರಿಗಾಗಿ ಟೌನ್ ಹಾಲ್ ಕಡೆಯಿಂದ ಪ್ರವೇಶ ಮತ್ತು ಅಭಿಮಾನಿಗಳು ಮತ್ತು ಜನಸಾಮಾನ್ಯರಿಗಾಗಿ ರವೀಂದ್ರ ಕಲಾಕ್ಷೇತ್ರದ ಕಡೆಯಿಂದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಚಿತ್ರರಂಗದ ಪ್ರಮುಖ ನಟ, ನಟಿಯರು ಕಲಾವಿದರಾದ ಸುಮಲತಾ ಅಂಬರೀಷ್, ಶಿವರಾಜ್ ಕುಮಾರ್ ಜಗ್ಗೇಶ್, ರಾಘವೇಂದ್ರ ರಾಜ್ಕುಮಾರ್, ಸುದೀಪ್, ಯಶ್, ಧೃವ ಸರ್ಜಾ, ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್, ಎಂ ಸುರೇಶ್ , ಮಾಜಿ ಅಧ್ಯಕ್ಷ ಭಾಮ ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಶೃತಿ, ಸುದಾರಾಣಿ, ದೇವರಾಜ್, ರಬಲನಾಣಿ, ವಿ.ಮನೋಹರ್, ಎಂ.ಎಸ್ ಉಮೇಶ್, ಕುಮಾರ್ ಬಂಗಾರಪ್ಪ, ಡಾ, ನಾಗೇಂದ್ರ ಪ್ರಸಾದ್, ನಿರ್ಮಾಪಕ ಮುನಿರತ್ನ, ಕೆ. ಮಂಜು, ನಟ ಶ್ರೀಮುರಳಿ , ಅನಿರುದ್, ಚರಣ್ ರಾಜ್, ರಾಕ್ ಲೈನ್ ವೆಂಕಟೇಶ್,ಗಾಯಕಿ ಮಂಜುಳಾ ಗುರುರಾಜ್ ಅನೇಕ ಮಂದಿ ದ್ವಾರಕೀಶ್ ಅವರಿಗೆ ನಮನ ಸಲ್ಲಿಸಿ ಕುಟುಂಬದ ಸದ್ಯರಿಗೆ ಸಾಂತ್ವಾನ ಹೇಳಿದರು.




