ವಸಂತ ಅಸ್ನೋಟಿಕರ್ ಕೊಲೆ ಪ್ರಕರಣ: ಗುಂಡಿಕ್ಕಿದವನಿಗೆ ಜೀವಾವಧಿ ಶಿಕ್ಷೆ ಮತ್ತು ಹಾಗೂ 68,000/- ರೂ. ದಂಡ

JANANUDI.COM NETWORK

ಶಿರಸಿ, ಎ. 20; ಕಾರವಾರದ ಶಾಸಕರಾಗಿದ್ದ ವಸಂತ ಆಸ್ನೋಟಿಕರ್ ಅವರನ್ನು ಕೊಲೆಗೈದಿದ್ದ ಸಂಜಯ್ ಮೋಹಿತೆಗೆ ಜೀವಾವಧಿ ಶಿಕ್ಷೆ ಹಾಗೂ 68,000/- ರೂ. ದಂಡ ವಿಧಿಸಿ ಶಿರಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಕಾರವಾರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ತಮ್ಮ ಮಗಳ ಮದುವೆ ಆರತಕ್ಷತೆಯ ತಯಾರಿಯನ್ನು ನೋಡಿಕೊಂಡು ಮನೆಗೆ ಹೊರಡುವ ಸಲುವಾಗಿ ಕಲ್ಯಾಣ ಮಂಟಪದ ಎದುರಿನ ರಸ್ತೆಯ ಪಕ್ಕದಲ್ಲಿ ಇತರರೊಂದಿಗೆ ನಿಂತುಕೊಂಡಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ವಸಂತ ಅನ್ನೋಟಿಕರ್ ಅವರ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿದ್ದರು.
ಈ ವೇಳೆ ಹಿಂಬದಿಯ ಸವಾರನಾಗಿದ್ದ ರಾಜನ್ ಅಲಿಯಾಸ್ ಸಂಜಯ್ ಮೋಹಿತ್ ಹಾರಿಸಿದ್ದ ನಾಲ್ಕು ಗುಂಡು ವಸಂತ ಅಸ್ನೋಟಿಕರ್ ಅವರ ದೇಹಕ್ಕೆ ಹೊಕ್ಕು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಮಣಿಪಾಲ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಅವರು ಮೃತಪಟ್ಟಿದ್ದರು.
ಆರೋಪಿ ಸಂಜಯ್ ಮೋಹಿತನೊಂದಿಗೆ ಭಾಗಿಯಾಗಿದ್ದ ಓಂ ಪ್ರಕಾಶ್ ಅಲಿಯಾಸ್ ಪಕ್ಕಾ ಹಾಗೂ ಅಂತೋನಿಯು ದೋಷಾರೋಪಣೆ ಪಟ್ಟಿ ಸಲ್ಲಿಸುವ ಪೂರ್ವದಲ್ಲಿ ಮುಂಬೈ ಪೊಲೀಸರಿಂದ ಎನ್ ಕೌಂಟರ್ ನಲ್ಲಿ ಮೃತಪಟ್ಟಿದ್ದರು. ವಸಂತ ಅಸ್ನೋಟಿಕರ್ ಕೊಲೆಗೆ ಸಂಜಯ್ ಮೊಹಿತೆಗೆ ಸುಪಾರಿ ನೀಡಿದ್ದ ಈ ಪ್ರಕರಣದ ಮುಖ್ಯ ಆರೋಪಿ ದಿಲೀಪ್ ನಾಯ್ಕನು ಪ್ರಕರಣದ ವಿಚಾರಣೆಯ ಹಂತದಲ್ಲಿ ಮೃತ ಪಟ್ಟಿದ್ದಾನೆ. ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದ 2 ಮತ್ತು ಮೂರನೇ ಆರೋಪಿಯನ್ನು ನ್ಯಾಯಾಲಯ ಬಿಡುಗಡೆಗೊಳಿಸಿದೆ.
ವಸಂತ ಅಸ್ನೋಟಿಕರ್ ಈ ಕೊಲೆ ಪ್ರಕರಣ ಕಾರವಾರ ನಗರ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣ ಕಾರವಾರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಿಂದ ಶಿರಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಈ ಪ್ರಕರದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಾಂತವೀರ ಶಿವಪ್ಪ ಈ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳ ವಾದಿಸಿದ್ದರು. ಬೆಂಗಳೂರು ಸಿಒಡಿ ಡಿಎಸ್ ಪಿ ಬಿ.ಎಸ್.ಎಸ್ ರಾವ್ ಅವರು ಪ್ರಾಥಮಿಕ ಹಂತದಲ್ಲಿ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದು, ಇನ್ನೋರ್ವ ಡಿ.ಎಸ್.ಪಿಗಳಾದ ರಫೀಕ ಮುಲ್ಲಾ ಹಾಗೂ ಲವಕುಮಾರ ರವರು ಹೆಚ್ಚುವರಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು
.