ಬಿಜೆಪಿ ವಿಜಯಸಂಕಲ್ಪ ಯಾತ್ರೆಯ ವಾಹನಗಳಿಗೆ ವರ್ತೂರು ಪ್ರಕಾಶ್ ಚಾಲನೆ- ಭ್ರಷ್ಟ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರಿವಿಟ್ಟು ಬಿಜೆಪಿ ಬೆಂಬಲಿಸಲು ಕರೆ

ಕೋಲಾರ:- ದೇಶದಲ್ಲಿ ಭ್ರಷ್ಟಾಚಾರದ ಶಿಶುಗಳನ್ನು ಸೃಷ್ಟಿಸಿ ಪೋಷಿಸಿದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಉಳಿಸಿ ರಾಜ್ಯವನ್ನು ಸಂರಕ್ಷಿಸಲು ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಮತ ನೀಡಲು ಕೇಂದ್ರ,ರಾಜ್ಯ ಸರ್ಕಾರಗಳ ಜನಪರ ಯೋಜನೆಗಳ ಕುರಿತು ಜನತೆಗೆ ತಿಳಿಸಿ ಎಂದು ಕಾರ್ಯಕರ್ತರಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಕರೆ ನೀಡಿದರು.
ನಗರದ ಬಂಗಾರಪೇಟೆ ವೃತ್ತದಲ್ಲಿನ ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನವ ಕರ್ನಾಟಕ ನಿರ್ಮಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜನಪರ,ಪ್ರಗತಿಪರ ಯೋಜನೆಗಳ ಕುರಿತು ಜನತೆಗೆ ಅರಿವು ಮೂಡಿಸಲು ಕೈಗೊಂಡಿರುವ ವಿಜಯ ಸಂಕಲ್ಪ ಯಾತ್ರೆಯ ಮೂರು ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಭಾರತೀಯ ಜನತಾ ಪಕ್ಷವು ಜನರಿಂದ,ಜನರಿಗಾಗಿ,ಜನರಿಗೋಸ್ಕರ ಕೆಲಸ ಮಾಡುತ್ತಿದೆ, ಮೋದಿ ಪ್ರಧಾನಿಯಾದ ನಂತರ ದೇಶದ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದೆ, ಇತರೆ ರಾಷ್ಟ್ರಗಳ ಬಳಿ ಕೈಯೊಡ್ಡುತ್ತಿದ್ದ ಅಪವಾದ ಹೊಂದಿದ್ದ ಭಾರತ ಇಂದು ಇಡೀ ವಿಶ್ವಕ್ಕೆ ಕೊಡುಗೈ ದಾನಿಯಾಗಿ, ಕೋವಿಡ್ ಲಸಿಕೆ ಉಚಿತವಾಗಿ ನೀಡಿದೆ, ಇತರೆ ರಾಷ್ಟ್ರಗಳಲ್ಲಿ ಯುದ್ದ,ಪ್ರಕೃತಿ ವಿಕೋಪಗಳಿಗೆ ನೆರವಿನ ಹಸ್ತ ಚಾಚುವ ಮೂಲಕ ವಿಶ್ವಮಾನ್ಯವಾಗಿದೆ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ,ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನವ ಕರ್ನಾಟಕ ನಿರ್ಮಾಣಕ್ಕಾಗಿ ಹಲವಾರು ಜನ ಪರ ಹಾಗೂ ಪ್ರಗತಿ ಪರ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ಸಾರ್ವಜನಿಕರಿಗೆ ತಿಳಿಸುವ ಅಗತ್ಯವಿದೆ ಎಂದರು.
135 ವಾಹನಗಳಲ್ಲಿ
ಸಂಕಲ್ಪ ಯಾತ್ರೆ
ಕೇಂದ್ರ,ರಾಜ್ಯಸರ್ಕಾರಗಳ ಕಾರ್ಯಕ್ರಮಗಳ ಕುರಿತು ಅರಿವುಂಟು ಮಾಡುವ ದೆಸೆಯಲ್ಲಿ ಬೆಂಗಳೂರಿನಲ್ಲಿ 135 ವಾಹನಗಳಿಗೆ ಚಾಲನೆ ನೀಡಲಾಗಿದೆ, ಹಾಗೆಯೇ ಕೋಲಾರ ಜಿಲ್ಲೆಯಲ್ಲಿ 6 ತಾಲ್ಲೂಕುಗಳಲ್ಲಿನ ಪ್ರಚಾರಕ್ಕೆ 3 ವಾಹನಗಳನ್ನು ವಿಜಯ ಸಂಕಲ್ಪ ಯಾತ್ರೆಗೆ ಕಳಹಿಸಿದ್ದು ಅವುಗಳಿಗೆ ಇಂದು ಚಾಲನೆ ನೀಡುತ್ತಿರುವುದಾಗಿ ತಿಳಿಸಿದರು.
ಬಿಜೆಪಿ ಜಾರಿಗೆ ತಂದಿರುವ ಯೋಜನೆಗಳನ್ನು ಬಹುಶಃ ಈ ಹಿಂದೆ ಯಾವುದೇ ಸರ್ಕಾರ ಜಾರಿಗೆ ತಂದಿಲ್ಲ, ಜನಪರ ಯೋಜನೆಗಳನ್ನು ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ಆಡಳಿತದಲ್ಲಿ ನೀಡಲಾಗಿದೆ ಎಂದು ಹೇಳಿದರು,
2023ನೇ ಸಾಲಿನಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತದಿಂದ ಮತ್ತೊಮ್ಮೆ ಅಧಿಕಾರಕ್ಕೆ ಬರಲು ರೂಪಿಸಿರುವಂತ ಜನಪರ ಯೋಜನೆಗಳನ್ನು ರಾಜ್ಯದಲ್ಲಿ ಸಾರ್ವಜನಿಕರ ಗಮನಕ್ಕೆ ತರಲು ಪ್ರಗತಿಪರ ರಥಗಳಿಗೆ ಚಾಲನೆ ನೀಡಲಾಗಿದ್ದು ಕಾರ್ಯಕರ್ತರು ಇದಕ್ಕೆ ಸಾಥ್ ನೀಡುವ ಮೂಲಕ ಬಿಜೆಪಿ ಸಾಧನೆಗಳನ್ನು ಜನರಿಗೆ ತಿಳಿಸುವಂತಾಗ ಬೇಕೆಂದು ಕರೆ ನೀಡಿದರು,
ರಾಜ್ಯ, ಕೇಂದ್ರ ಸರ್ಕಾರಗಳ, ರೈತ ವಿದ್ಯಾನಿಧಿ ಯೋಜನೆ, ನೀರಾವರಿ ಯೋಜನೆಗಳು, ಕೃಷಿ ಪರ ಯೋಜನೆಗಳು, ಮುಖ್ಯ ಮಂತ್ರಿ ವಿದ್ಯಾಶಕ್ತಿ ಯೋಜನೆ ಗೃಹಣಿ ಶಕ್ತಿ ಯೋಜನೆ, ರೈಲ್ವೆ ಯೋಜನೆಗಳ ಸುಧಾರಣೆ, ಸಾಲ ಬಡ್ಡಿ ಮನ್ನ ಯೋಜನೆಗಳು ಆಸ್ಪತ್ರೆಗಳು ಮೇಲ್ದರ್ಜೆಗೆ, ಉಚಿತ ಬಸ್ ಯೋಜನೆ, ವಿವಿಧ ಅಭಿವೃದ್ದಿ ನಿಗಮಗಳ ಸ್ಥಾಪನೆ ಹಾಗೂ ಅನುದಾನಗಳ ಬಿಡುಗಡೆ ಕುರಿತು ಜನತೆಗೆ ಮಾಹಿತಿ ನೀಡಿ ಎಂದರು.
ಯುವಕರಿಗೆ ವಿವಿಧ ಕೌಶಲ್ಯ ತರಭೇತಿ ಕೇಂದ್ರಗಳ ಸ್ಥಾಪನೆ, ಶಿಡ್ಲಘಟ್ಟದಲ್ಲಿ ರೇಷ್ಮೆ ಹೈಟೆಕ್ ಮಾರುಕಟ್ಟೆ, ಜೀವನ್ ಜ್ಯೋತಿ ಭೀಮ ಯೋಜನೆ, ಎಕ್ಸಪ್ರೆಸ್ ಕಾರಿಡಾರ್ ಯೋಜನೆ, ವಿಮಾನ ನಿಲ್ದಾಣದ ವಿವಿಧ ಅಭಿವೃದ್ದಿ ಯೋಜನೆಗಳು ಟೌನ್ ಶಿಫ್ ಯೋಜನೆಗಳ ಕುರಿತು ಜನತೆಗೆ ತಿಳಿಸುವ ಅಗತ್ಯವಿದೆ ಎಂದರು.
ಬಿಜೆಪಿ ಭರವಸೆಯ ಪ್ರಗತಿ ರಥಗಳಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಬಿಜೆಪಿ ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು
ಕಾರ್ಯಕ್ರಮದಲ್ಲಿ ಮುಖಂಡ ಬೆಗ್ಲಿ ಪ್ರಕಾಶ್, ಕೆಯುಡಿಎ ಅಧ್ಯಕ್ಷ ವಿಜಯಕುಮಾರ್, ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ದಿಶಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಯುವಮೋರ್ಚಾ ಅಧ್ಯಕ್ಷ ಬಾಲಾಜಿ, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಮುಖಂಡರಾದ ರಾಜೇಶ್ ಸಿಂಗ್, ನಾಮಾಲು ಮಂಜು, ಮೆಸ್ ಚಲಪತಿ, ಜಮೀರ್ ಆಹಮದ್, ರಾಘವೇಂದ್ರ,ಮಂಜುನಾಥ್, ಶ್ರೀನಾಥ್ ಮುಂತಾದವರು ಭಾಗವಹಿಸಿದ್ದರು.