

ಕೋಲಾರ:- ದೇಶವು ಸ್ವಾತಂತ್ಯ್ರ ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತ ಸೇವಾದಳವತಿಯಿಂದ ಪ್ರತಿ ತಾಲೂಕಿನಲ್ಲಿ ತಲಾ 100 ಭಾರತ ಧ್ವಜಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾರಾಟಕ್ಕೆ ವಿತರಿಸಲು ತೀರ್ಮಾನಿಸಲಾಯಿತು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಅಧ್ಯಕ್ಷತೆಯಲ್ಲಿ ನಗರದ ಭಾರತ ಸೇವಾದಳ ಕಚೇರಿಯಲ್ಲಿ ನಡೆದ ಜಿಲ್ಲಾ ಸಮಿತಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನವನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಯಿತು.
ದೇಶದ ಸ್ವಾತಂತ್ಯ್ರ ಅಮೃತ ಮಹೋತ್ಸವದಲ್ಲಿ ಭಾರತ ಸೇವಾದಳವು ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ನಡೆಸಲು ನಿರ್ಧರಿಸಲಾಯಿತು. ರಾಷ್ಟ್ರಧ್ವಜ, ರಾಷ್ಟ್ರಗೀತೆ ಮಾಹಿತಿ ಶಿಬಿರ, ದೇಶ ಭಕ್ತಿ ಗೀತೆ ಸ್ಪರ್ಧೆ, ರಾಷ್ಟ್ರಧ್ವಜ ಚಿತ್ರ ಮತ್ತು ರಾಷ್ಟ್ರಧ್ವಜ ಮಾಹಿತಿ ಪ್ರಬಂಧ ಸ್ಪರ್ಧೆ, ಪ್ರಭಾತ ಭೇರಿ, ತಿರಂಗ ಯಾತ್ರೆ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲು ಚರ್ಚಿಸಿ ಅನುಮೋದನೆ ಪಡೆಯಲಾಯಿತು.
ಕೇಂದ್ರ ಸರಕಾರವು ನೀಡಿರುವ ಸೂಚನೆಯಂತೆ ಆ.13 ರಿಂದ 15 ರವರೆವಿಗೂ ರಾಷ್ಟ್ರಧ್ವಜ ಹಾರಿಸುವ ಕಾರ್ಯಕ್ರಮವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದವತಿಯಿಂದ ಹಮ್ಮಿಕೊಂಡು, ಅಂದು ಪತ್ರಕರ್ತರಿಗೆಲ್ಲರಿಗೂ ರಾಷ್ಟ್ರಧ್ವಜ ಮಾಹಿತಿ ನೀಡುವುದರ ಜೊತೆಗೆ, ರಾಷ್ಟ್ರಧ್ವಜವನ್ನು ಸೇವಾದಳವತಿಯಿಂದ ವಿತರಿಸಲು ನಿರ್ಧರಿಸಲಾಯಿತು.
ಇನ್ನುಳಿದಂತೆ ವಾರ್ಷಿಕ ಅನುಮೋದಿತ ಕಾರ್ಯಕ್ರಮಗಳಾದ ಕ್ವಿಟ್ ಇಂಡಿಯಾ ಚಳವಳಿ, ಆರೋಗ್ಯ ತಪಾಸಣಾ ಶಿಬಿರ, ಜೈಲಿನಲ್ಲಿ ಖೈದಿಗಳಿಗೆ ಮನಪರಿವರ್ತನಾ ಶಿಬಿರ, ಪರಿಸರ ಗಿಡ ನೆಡುವ ಕಾರ್ಯಕ್ರಮ, ಸ್ವಚ್ಛತೆ ಮತ್ತು ಶ್ರಮದಾನ ಶಿಬಿರ, ನಾ.ಸು.ಹರ್ಡೀಕರ್ ಜನ್ಮದಿನಾಚರಣೆ, ವಿಶ್ವ ಸಾಕ್ಷರತಾ ದಿನಾಚರಣೆ, ವೃದ್ಧಾಶ್ರಮಗಳಿಗೆ ಭೇಟಿ, ಶಿಕ್ಷಣ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿವಿಧ ಶಾಲಾ ಕಾಲೇಜುಗಳಲ್ಲಿ ಆಯೋಜಿಸಲು ನಿರ್ಧರಿಸಲಾಯಿತು.
ಪ್ರತಿ ವರ್ಷದಂತೆ ಈ ಬಾರಿಯೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತ ಸೇವಾದಳವತಿಯಿಂದ ನೀಡುವ ಉತ್ತಮ ಶಿಕ್ಷಕ ಪ್ರಶಸ್ತಿಗೆ ಮಾಲೂರಿನ ದೈಹಿಕ ಶಿಕ್ಷಕ ಸುಧಾಕರ್‍ರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜಿಲ್ಲಾ ಮಟ್ಟದಲ್ಲಿ ಸೇವಾದಳ ಕಾರ್ಯಚಟುವಟಿಕೆಗಳನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಜಿಲ್ಲಾ ಸಮಿತಿಗೆ ಐವರು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿಯನ್ನು ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗೆ ನೀಡಲಾಯಿತು.
ಸಭೆಯಲ್ಲಿ ಕಾರ್ಯಾಧ್ಯಕ್ಷ ಕೆ.ವಿ.ಜಗನ್ನಾಥ್, ಕಾರ್ಯದರ್ಶಿ ಎಸ್.ಸುಧಾಕರ್,ಕೋಶಾಧ್ಯಕ್ಷ ಎಂ.ನಾಗರಾಜ್, ಜಿಲ್ಲಾ ಸಂಚಾಲಕ ಬಹಾದ್ದೂರ್ ಸಾಬ್, ಸಂಘಟನಾ ಕಾರ್ಯದರ್ಶಿ ಆರ್.ರವಿಕುಮಾರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಜಯದೇವ್, ಕೋಲಾರ ಅಧ್ಯಕ್ಷ ಶ್ರೀರಾಮ್, ಶ್ರೀನಿವಾಸಪುರ ಅಧ್ಯಕ್ಷ ಬಂಗವಾದಿ ನಾಗರಾಜ್, ಬಂಗಾರಪೇಟೆ ಅಧ್ಯಕ್ಷ ನಿತಿನ್ ಮತ್ತು ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ಹಾಜರಿದ್ದರು.
ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯು ರಾಷ್ಟ್ರಗೀತೆಯೊಂದಿಗೆ ಪೂರ್ಣಗೊಂಡಿತು.
