ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಬಲಗೊಳ್ಳಲು ಡಾ.ವೈಎಎನ್‍ಗೆ ಸಚಿವ ಸ್ಥಾನ ನೀಡಲು ವಿವಿಧ ಮೋರ್ಚಾ ಪದಾಧಿಕಾರಿಗಳ ಮನವಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಬಲಗೊಳ್ಳಲು ಆಗ್ನೇಯಶಿಕ್ಷಕರ ಕ್ಷೇತ್ರದಿಂದ 3 ಬಾರಿ ವಿಧಾನಪರಿಷತ್ ಸದಸ್ಯರಾಗಿ, ಬೆಂಗಳೂರು ನಗರದ ಹೆಬ್ಬಾಳದಿಂದ ಒಮ್ಮೆ ಶಾಸಕರಾಗಿ ಆಯ್ಕೆಯಾಗಿರುವ ಡಾ.ವೈ.ಎ.ನಾರಾಯನಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಜಿಲ್ಲೆಯ ಹಲವಾರು ಬಿಜೆಪಿ ಮುಖಂಡರು ಪಕ್ಷದ ಹೈಕಮಾಂಡ್‍ಗೆ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಜಿಲ್ಲೆಯಿಂದ ಓರ್ವ ಬಿಜೆಪಿ ಶಾಸಕರೂ ಆಯ್ಕೆಯಾಗಿಲ್ಲ, ಜತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದಲ್ಲಿ ವರ್ಷಗಟ್ಟಲೇ ಉಸ್ತುವಾರಿ ಸಚಿವರೇ ಇರಲಿಲ್ಲ, ಕೋವಿಡ್ ಒತ್ತಡದ ನಂತರ ನೇಮಕಗೊಂಡ ಯೋಗಿಶ್ವರ್, ಎಂಟಿಬಿ.ನಾಗರಾಜ್ ಜಿಲ್ಲೆಗೆ ಬರಲು ಒಪ್ಪಲಿಲ್ಲ, ಕೊನೆಗೆ ಅರವಿಂದ ಲಿಂಬಾವಳಿ ಅವರನ್ನು ನೇಮಿಸಲಾಯಿತು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವಂತಾಗಲು ಪ್ರಬಲ ನಾಯಕತ್ವದ ಅಗತ್ಯವಿದೆ, ಜಿಲ್ಲೆಯ ಶ್ರೀನಿವಾಸಪುರದವರು, ಇಂನಿನಿಯರಿಂಗ್ ಸ್ನಾತಕೋತ್ತರ ಪದವೀದರರೂ ಆದ ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.
ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರಾಗಿ ಪಕ್ಷಕ್ಕೆ ಸದಾ ನಿಷ್ಟೆ ಹೊಂದಿರುವ ಡಾ.ವೈ.ಎ.ನಾರಾಯಣಸ್ವಾಮಿ ಅವರು ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಅತಿ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾಗಿದ್ದು, ವಿದ್ಯಾವಂತರ ಪ್ರೀತಿಗೆ ಪಾತ್ರರಾಗಿದ್ದಾರೆ.
ಬೆಂಗಳೂರು ವಿವಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಸಿಂಡಿಕೇಟ್ ಸದಸ್ಯರಾಗಿ, ವಿಧಾನಪರಿಷತ್‍ನಲ್ಲಿ ಪಕ್ಷದ ಉಪನಾಯಕರಾಗಿ, ಸದನದ ಅರ್ಜಿ ಸಮಿತಿ,ಪರಿಶಿಷ್ಟರ,ಹಿಂದುಳಿದ ವರ್ಗಗಳ ಸಮಿತಿಯ ಸದಸ್ಯರಾಗಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹೀಗೆ ಹಲವಾರು ಸಮಿತಿಗಳಲ್ಲಿ ಕೆಲಸ ಮಾಡಿರುವ ಅಪಾರ ಅನುಭವ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದಂತೆ ಸದನ ಸಮಿತಿ ಅಧ್ಯಕ್ಷರಾಗಿ, ಪ್ರಿವಿಲೇಜ್ ಕಮಿಟಿ ಅಧ್ಯಕ್ಷರಾಗಿ ಅನುಭವ ಹೊಂದಿರುವ ಅವರಿಗೆ ಸಚಿವ ಸ್ಥಾನ ನೀಡುವುದು ಸೂಕ್ತ ಎಂದು ತಿಳಿಸಿದ್ದಾರೆ.
ಉತ್ತಮ ವಾಗ್ಮಿಯಾಗಿದ್ದು, ಜಿಲ್ಲೆಯಲ್ಲಿ ಪಕ್ಷವನ್ನು ಬಲಗೊಳಿಸುವ ಶಕ್ತಿ,ಜಾಣ್ಮೆ ಹೊಂದಿದ್ದು, ಅವರಿಗೆ ಸಚಿವ ಸ್ಥಾನ ನೀಡಿ, ಸ್ಥಳೀಯರಾಗಿರುವುದರಿಂದ ಉಸ್ತುವಾರಿ ಸಚಿವರಾಗಲು ಅವಕಾಶ ನೀಡಿದಲ್ಲಿ, ಜಿಲ್ಲೆಯಲ್ಲಿ ಪಕ್ಷ,ಸರ್ಕಾರದ ಕಾರ್ಯಕ್ರಮಗಳನ್ನು ಜನತೆಗೆ ಮುಟ್ಟಿಸಿ ಬೇರುಮಟ್ಟದಿಂದ ಪಕ್ಷವನ್ನು ಬಲಗೊಳಿಸಲು ಸಹಕಾರಿಯಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹೆಬ್ಬಾಳದಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ ಅತ್ಯುತ್ತಮ ಜನಾನುರಾಗಿ ಶಾಸಕರೆಂಬ ಹೆಗ್ಗಳಿಕೆಯೂ ಹೊಂದಿದ್ದು, ಆಗ್ನೇಯ ಶಿಕ್ಷಕರ ಕ್ಷೇತ್ರದ ಐದು ಜಿಲ್ಲೆಗಳ ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ.
ಆಗ್ನೇಯಶಿಕ್ಷಕರ ಕ್ಷೇತ್ರಕ್ಕೆ ಟಿಕೆಟ್ ಸಿಕ್ಕ ಕೇವಲ 15 ದಿನದಲ್ಲೇ ಪ್ರಚಾರ ನೆಡೆಸಲಾಗದಿದ್ದರೂ ಶಿಕ್ಷಕರ ಪ್ರೀತಿ ಉಳಿಸಿಕೊಂಡ ಕಾರಣ ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಯಾಗಿದ್ದು ಇತಿಹಾಸ.
ಇಂತಹ ಸಂಘಟನಾ ಚತುರರಾದ ಡಾ.ವೈ.ಎ.ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಕೋಲಾರ ಜಿಲ್ಲೆಯಲ್ಲಿ ಬಿಜೆಪಿಯ ಬೇರುಗಳ ಭದ್ರಗೊಳ್ಳಲು ಅವಕಾಶ ನೀಡಿ ಎಂದು ಜಿಲ್ಲೆಯ ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಬಿಜೆಪಿ ನಗರಾಧ್ಯಕ್ಷ ತಿಮ್ಮರಾಯಪ್ಪ,ಮಾಧ್ಯಮ ಸಂಚಾಲಕ ಕೆಂಬೋಡಿ ನಾರಾಯಣಸ್ವಾಮಿ, ಗ್ರಾಮೀಣ ಅಧ್ಯಕ್ಷ ಸಿ.ಡಿ.ರಾಮಚಂದ್ರೇಗೌಡ, ಮಾಜಿ ಅಧ್ಯಕ್ಷ ಹೂವಳ್ಳಿ ಚಲಪತಿ, ಕೋರ್ ಕಮಿಟಿ ಸದಸ್ಯ ವಿಜಯಕುಮಾರ್,ಯುವಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಹಾಲು ಪ್ರಕೋಷ್ಟ ಸಂಚಾಲಕ ಮಂಜುನಾಥಗೌಡ, ಗುಟ್ಲೂರು ಮಂಜುನಾಥ್,ನಾಯಕರಹಳ್ಳಿ ವೆಂಕಟೇಗೌಡ, ಶಿವಕುಮಾರಗೌಡ, ಜಯರಾಮರೆಡ್ಡಿ ಮತ್ತಿತರರು ಬಿಜೆಪಿ ಹೈಕಮಾಂಡ್‍ಗೆ ಮನವಿ ಮಾಡಿದ್ದಾರೆ
.