ಹಿರಿಯ ನಾಗರಿಕರಿಗೆ ವ್ಯಾಕ್ಸಿನೇಷನ್‌ ನಿಲ್ಲಿಸಿದ್ದು ಅವೈಜ್ಞಾನಿಕ ಕ್ರಮ: ವಿನೋದ್ ಕ್ರಾಸ್ಟೋ

JANANUDI.COM NETWORK

ದೇಶದಾದ್ಯಂತ ಕೊರೊನಾ ಎರಡನೆಯ ಅಲೆಯಿಂದ ಪ್ರತಿದಿನ ಜನರು ಸಾವಿರಾರು ಸಂಖ್ಯೆಯಲ್ಲಿ ಮರಣವನ್ನಪ್ಪುತ್ತಿದ್ದಾರೆ. ಆದರೆ ಆಳುವ ಬಿಜೆಪಿ ಸರ್ಕಾರ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಯಕಶ್ಚಿತ್ ಲಸಿಕೆಯನ್ನು ಕೊಡುವಲ್ಲಿಯೂ ಕೂಡ ವಿಫಲವಾಗಿದೆ. ಹಲವಾರು ಹಿರಿಯ ನಾಗರಿಕರು ಮೊದಲ ಡೋಸ್ ಪಡೆದು ಈಗಾಗಲೇ 50-60 ದಿನಗಳು ಕಳೆದಿವೆ. ಆರೋಗ್ಯ ಇಲಾಖೆ ಮೊದಲಿಗೆ, ಮೊದಲ ಡೋಸ್‌ನಿಂದ ಎರಡನೆಯ ಡೋಸ್‌ನ ಮದ್ಯದಲ್ಲಿ ಕೇವಲ 4ವಾರಗಳ ಅಂತರವನ್ನು ಮಾತ್ರವೇ ಘೋಷಿಸಿತ್ತು ಮತ್ತು ಮೊದಲ ಡೋಸ್ ಪಡೆದವರಿಗೆ ಮೊಬೈಲ್ ಮೂಲಕ ಇದೇ ರೀತಿಯಾಗಿ ನಾಲ್ಕು ವಾರಗಳ ತರುವಾಯ ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಮೆಸೇಜ್ ಕೂಡಾ ಕಳುಹಿಸಿತ್ತು. ಆದರೀಗ ಹಿರಿಯ ನಾಗರಿಕರಿಗೆ ಎರಡನೆಯ ಡೋಸ್ ವ್ಯಾಕ್ಸಿನೇಷನ್‌ ನಿಲ್ಲಿಸಲಾಗಿದೆ ಇದು ಅವೈಜ್ಞಾನಿಕ ಕ್ರಮವಾಗಿದೆ ಮತ್ತು ಆರೋಗ್ಯ ಇಲಾಖೆಯ ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇಷ್ಟಾಗಿಯೂ ಸರ್ಕಾರದ ಕಡೆಯಿಂದ ಎರಡನೆಯ ಡೋಸ್ ಲಸಿಕೆಯ ಕುರಿತು ಯಾವುದೇ ಮಾಹಿತಿ ಇಲ್ಲವಾಗಿದೆ. ಹಿರಿಯ ನಾಗರಿಕರು ದೂರದೂರದ ಪ್ರದೇಶದ ಕರ್ಪ್ಯೂ ನಡುವೆಯೂ ಪ್ರತಿ ದಿನವೂ ಲಸಿಕಾ ಕೇಂದ್ರದ ಬಳಿ ಹೋಗಿ ನಿರಾಶೆಯಿಂದ ವಾಪಾಸಾಗುತ್ತಿದ್ದಾರೆ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಹೇಳಿದ್ದಾರೆ.
ಹಿರಿಯ ನಾಗರಿಕರಿಗೆ ಯಾವುದೇ ಪೂರ್ವ ಸೂಚನೆ ಇಲ್ಲದೇ ಎರಡನೆಯ ಡೋಸ್ ಕೊಡುವುದನ್ನು ನಿಲ್ಲಿಸಿದ ಸರ್ಕಾರ ಇದೀಗ 18ರಿಂದ 44ವರ್ಷವರೆಗಿನವರಿಗೆ ಮಾತ್ರವೇ ಡೋಸ್ ಕೊಡಲು ಆರಂಭಿಸಿದೆ. ಅದು ಕೂಡ 100-150 ಸೀಮಿತ ಸಂಖ್ಯೆಯ ಜನರಿಗೆ ಮಾತ್ರವೇ ಕೊಡುತ್ತಿದ್ದು ಬಹುಶಃ ಇದೇ ರೀತಿ ಮುಂದುವರೆದರೆ ದೇಶದ ಅಷ್ಟೂ ಜನರಿಗೆ ಎರಡು ಸುತ್ತು ಲಸಿಕಾ ಕಾರ್ಯಕ್ರಮವನ್ನು ಪೂರೈಸಲು ಹಲವು ವರ್ಷಗಳೇ ಬೇಕಾಗಬಹುದು ಎಂಬ ಅಭಿಪ್ರಾಯವಿದೆ. ಆದರೆ ಈ ಕುರಿತು ಶಾಸಕರುಗಳು, ಸಂಸದರುಗಳು, ಉಸ್ತುವಾರಿ ಸಚಿವರುಗಳು ಮೌನ‌ ವಹಿಸಿದ್ದಾರೆ. ಜನರು ಈ ಕುರಿತು ಆತಂಕಿತರಾಗಿದ್ದಾರೆ. ಕನಿಷ್ಠ ಪಕ್ಷ ಈ ಕುರಿತು ಸ್ಪಷ್ಟ ಮಾಹಿತಿಯನ್ನು ಕೂಡ ಜನರಿಗೆ ನೀಡದಿರುವುದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಹಿರಿ ಯ ನಾಗರಿಕರಿಗೆ ಎರಡನೆಯ ಡೋಸ್ ಕೊಡದೇ ಇರುವುದರಿಂದ ಅಥವಾ ತಡವಾಗಿ ಕೊಡುವುದರಿಂದ ಆಗಬಹುದಾದ ಅಡ್ಡ ಪರಿಣಾಮದ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳು ಜನರಿಗೆ ಸ್ಪಷ್ಟವಾದ ಮಾಹಿತಿ ನೀಡಬೇಕು ಮತ್ತು ಈ ಹಿಂದೆ ಕಾಂಗ್ರೆಸ್ ಸರ್ಕಾರದ ಆಳ್ವಿಕೆಯ ಅವಧಿಯಲ್ಲಿ ಪೋಲಿಯೋ ಡ್ರಾಪ್ ನೀಡುತ್ತಿದ್ದ ಮಾದರಿಯಲ್ಲಿ ಮನೆಮನೆಗೆ ತೆರಳಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಸರ್ಕಾರ ಕೈಗೊಳ್ಳಬೇಕು ಆ ಮೂಲಕ ದೇಶದ ಜನರಿಗೆ ಕೊರೊನಾ ದಿಂದ ರಕ್ಷಣೆ ನೀಡಬೇಕು ಎಂದವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.