ವೇಮಗಲ್ ಆಸ್ಪತ್ರೆಯಲ್ಲಿ ಲಸಿಕೆ ಪಡೆದ ಮಾಜಿ ಸಭಾಪತಿ ವ್ಯಾಕ್ಸಿನ್ ಹಾಕಿಸಿಕೊಂಡರೂ ಮಾಸ್ಕ್ ಬಳಸಿ-ಸುದರ್ಶನ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಕೋವಿಡ್ ಲಸಿಕೆ ಪಡೆದರೂ ಮಾಸ್ಕ್,ಸಾಮಾಜಿಕ ಅಂತರ ಕಾಪಾಡುವುದು ಅತ್ಯಗತ್ಯವಾಗಿದೆ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕಿವಿಮಾತು ಹೇಳಿದರು.
ತಾಲ್ಲೂಕಿನ ವೇಮಗಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಕೋವಿಡ್ ಲಸಿಕೆ ಪಡೆದ ನಂತರ ಸುದ್ದಿಗಾರರೊಂದಿಗೆಅವರು ಮಾತನಾಡುತ್ತಿದ್ದರು.
ಕೋವಿಡ್ ಮಹಾಮಾರಿಯಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ, ಈ ನಡುವೆ ಸೋಂಕು ಕಡಿಮೆಯಾಗಿದೆ ಎಂದು ನಿಟ್ಟುಸಿರು ಬಿಡುವ ಸಂದರ್ಭದಲ್ಲೇ ಪಕ್ಕದ ಕೇರಳ,ಮಹಾರಾಷ್ಟ್ರಗಳಲ್ಲಿ ಸೋಂಕು ಉಲ್ಬಣಗೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ ಎಂದರು.
ರಾಜ್ಯದಲ್ಲೂ ಸೋಂಕಿನ ಪ್ರಮಾಣ ನಿನ್ನೆಯ ಅಂಕಿ ಅಂಶಗಳ ಪ್ರಕಾರ ಏರಿಕೆಯಾಗಿದೆ, ಇದು ಆತಂಕಕಾರಿಯಾಗಿದ್ದು, ಸಾರ್ವಜನಿಕರು ಕೋವಿಡ್ ಮಾರ್ಗಸೂಚಿ ಪಾಲಿಸುವುದನ್ನು ಮರೆಯಬಾರದು ಎಂದರು.
ಲಸಿಕೆ ಪಡೆದಿದ್ದೇವೆ ಇನ್ನು ನಮಗೆ ಕೋವಿಡ್ ಬರುವುದಿಲ್ಲ ಎಂಬ ಉದಾಸೀನತೆ ಬೇಡ, ಈ ಮಾರಿ ಸಂಪೂರ್ಣ ನಾಶವಾಗುವವರೆಗೂ ಮಾಸ್ಕ್ ಬಳಸೋಣ, ಅತಿ ಹೆಚ್ಚು ಜನ ಒಂದೆಡೆ ಸೇರದಂತೆ ಎಚ್ಚರವಹಿಸೋಣ ಎಂದರು.
ಸರ್ಕಾರ ಉಚಿತ ಲಸಿಕೆ ನೀಡುತ್ತಿರುವುದು ಸ್ವಾಗತಾರ್ಹ ಎಂದ ಅವರು, ಲಸಿಕೆಯನ್ನು ಪ್ರತಿಯೊಬ್ಬರಿಗೂ ನೀಡುವ ಕೆಲಸವಾಗಬೇಕು, ಈ ಮಾರಿಯಿಂದ ರಕ್ಷಣೆಗೆ ಇದೊಂದೆ ಈಗ ಇರುವ ಮಾರ್ಗವಾಗಿದೆ ಎಂದು ಅಭಿಪ್ರಾಯಪಟ್ಟರು.
ಡಾ.ರವಿಕಿರಣ್, ವೆಂಕಟಾಚಲಪತಿ,ಸಿಬ್ಬಂದಿ ಸುಮಲತಾ, ಅಮೃತಾ, ಆಶಾ, ಪ್ರಿಯಾಂಕ ಮತ್ತಿತರರಿದ್ದರು.