ಕೋಲಾರ : ಸಮಾಜದ ಸ್ವಸ್ಥ್ಯ ಹಾಗೂ ಶಾಂತಿ ಕದಡುವ ವಾತಾವರಣ ನಿರ್ಮಾಣ ಮಾಡುತ್ತಿರುವ ಜಾನ್ಸನ್ ಕುಂದರ್ ಹಾಗೂ ಆತನ ಸಹಚರರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕ್ರೈಸ್ತ ಪಾದರಿಗಳು ಹಾಗೂ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಸಲ್ಲಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಮೆಥೋಡಿಸ್ಟ್ ದೇವಾಲಯಗಳ ಮೇಲ್ವಿಚಾರಕ ರೆ.ಶಾಂತಕುಮಾರ್, ಕ್ರೈಸ್ತ ಸಮುದಾಯ ಸಮಾಜದಲ್ಲಿ ಅಹಿಂಸೆ, ಶಾಂತಿ, ನೆಮ್ಮದಿಯನ್ನು ಬಯಸುವ ಸಮುದಾಯವಾಗಿ ಯಾವುದೇ ಗಲಭೆಗಳಿಗೆ ಕಾರಣವಾಗದೆ ಉತ್ತಮ ಸಮಾಜ ನಿರ್ಮಾಣಕ್ಕೆ ಸತತವಾಗಿ ಶ್ರಮಿಸುತ್ತಿದೆ. ಆದರೆ ಕೋಲಾರದ ಇಟಿಸಿಎಂ ಆಸ್ಪತ್ರೆಯಲ್ಲಿ ಈ ಮೊದಲು ಆಡಳಿತಾಧಿಕಾರಿ ಆಗಿದ್ದ ಜಾನ್ಸನ್ ಕುಂದರ್ ಸಮುದಾಯದಲ್ಲಿ ವಿಷ ಬೀಜ ಬಿತ್ತಿ ಅಶಾಂತಿಗೆ ಕಾರಣವಾಗುತ್ತಿದ್ದಾರೆ ಎಂದು ಆರೋಪಿಸಿದರು.
ಇಟಿಸಿಎಂ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಅಕ್ರಮ ಹಾಗೂ ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಈ ಬಗ್ಗೆ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಘಟನೆ ಸಂಬಂಧ ಬಾಲಕಿಯರ ಪರ ನಿಂತ ತಮ್ಮ ವಿರುದ್ಧ ದುರುದ್ದೇಶ ಪೂರಕವಾಗಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ, ಆತನ ಸಹಚರ ರೌಡಿಶೀಟರ್ ಜಯದೇವಪ್ರಸನ್ನ ನೇತೃತ್ವದಲ್ಲಿ ಭಾನುವಾರ ಕೋಲಾರ ನಗರದ ಮೆಥೋಡಿಸ್ಟ್ ಚರ್ಚ್‍ನಲ್ಲಿ ಪ್ರತಿಭಟನೆ ನಡೆಸಿ ಚರ್ಚ್‍ಗೆ ಬರುವವರಿಗೆ ಅಡ್ಡಿ ಪಡಿಸಿದ್ದಾರೆ.
ಅಲ್ಲದೆ ಸಮುದಾಯದ ಕೆಲವರ ದಿಕ್ಕನ್ನು ಬದಲಿಸಿ ತಪ್ಪು ಅಭಿಪ್ರಾಯ ಉಂಟು ಮಾಡುವ ರೀತಿಯಲ್ಲಿ ಒಳಜಗಳಗಳಿಗೆ ಕಾರಣವಾಗಿ ಸಮಾಜದ ಸ್ವಸ್ಥ್ಯ ಆಳು ಮಾಡುತ್ತಿದ್ದು, ಇದಕ್ಕೆ ರೌಡಿಶೀಟರ್ ಜಯದೇವಪ್ರಸನ್ನ ನೇತೃತ್ವವಹಿಸಿಕೊಂಡು ಸಮುದಾಯದಲ್ಲಿ ಬಿರುಕು ಉಂಟು ಮಾಡುತ್ತಿರುವ ಜಾನ್ಸನ್ ಕುಂದರ್ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಸಮುದಾಯದ ಮುಖಂಡರಾದ ಸದಾನಂದ್ ಹಾಗೂ ಗುರುಪ್ರಸಾದ್ ಮಾತನಾಡಿ, ಕಳೆದ 17 ವರ್ಷಗಳಿಂದ ಇಟಿಸಿಎಂ ಆಸ್ಪತ್ರೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಸಿಕೊಂಡು ಬರುತ್ತಿರುವ ಜಾನ್ಸನ್ ಕುಂದರ್ ವಿರುದ್ದ 8 ವರ್ಷಗಳ ಹಿಂದೆಯೇ ನಾವು ಮೇಲಿನ ಅಧಿಕಾರಿಗಳಿಗೆ ದೂರು ನೀಡಿದ್ದೇವು. ಮೆಥೋಡಿಸ್ಟ್ ದೇವಾಲಯದ ಕೇಂದ್ರ ಆಡಳಿತದಲ್ಲಿ ಆದ ಬದಲಾವಣೆಗಳಿಂದ ಇತ್ತೀಚೆಗೆ ಇದು ಸಾಭೀತಾಗಿದ್ದು, ಆಡಳಿತ ಮಂಡಳಿ ಈತನ ಬಗ್ಗೆ ದೂರು ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡಲು ಬರುವ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವುದು ನಮ್ಮ ಉದ್ದೇಶ ಅದಕ್ಕಾಗಿ ವಿದ್ಯಾರ್ಥಿಗಳು ಮಾಡಿದ ಆರೋಪಕ್ಕೆ ಸ್ಪಂಧಿಸಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದವರ ವಿರುದ್ಧ ದೂರು ದಾಖಲಿಸಿ ನಂತರ ಅವರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಸಮುದಾಯದಲ್ಲಿ ಅಶಾಂತಿಗೆ ಕಾರಣವಾಗುತ್ತಿದ್ದು ಕೂಡಲೇ ಈತನ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಕಳುಹಿಸಿ ಕಾನೂನಾತ್ಮಕ ಕ್ರಮದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಯಂತ್, ಮೇಷಕ್, ಜೇಮ್ಸ್, ನಂದಕುಮಾರ್, ಜಯವಂತ್, ವಿಜಯ್ ಕುಮಾರ್, ಸಮುದಾಯ ಮುಖಂಡರಾದ ರೂಪ್ ಕುಮಾರ್, ಗುಣ್‍ಭೂಷಣ್, ಪ್ರಾಂಕ್ಲೀನ್ ಡಿಸೋಜಾ, ಪ್ರಭಾಕರ್, ಜಯಪ್ರಭು, ಡೇವಿಡ್, ರೂಪ್ ಕುಮಾರ್ ಸೇರಿದಂತೆ ಹಲವರು ಇದ್ದರು.