ಕೋಲಾರ ಡಿಸೆಂಬರ್ 4 : ಕೆ.ಎಸ್.ನಿಸಾರ್ ಅಹಮ್ಮದ್ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಅವರು ಕನ್ನಡವನ್ನು ಬಳಸಿದಷ್ಟು ಚೆನ್ನಾಗಿ ಬೇರಾರೂ ಬಳಸಲಿಲ್ಲ ಎಂದು ಹಿರಿಯ ಕವಿ ಸ.ರಘುನಾಥ ಅಭಿಪ್ರಾಯ ಪಟ್ಟರು
ಕೋಲಾರದ ಅಲ್-ಅಮೀನ್ ಅಂಜುಮನ್ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೋಲಾರ ಜಿಲ್ಲಾ ಘಟಕವು ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಕಾವ್ಯ ಕಲರವ ಕಾರ್ಯಕ್ರಮದಲ್ಲಿ ಕೆ.ಎಸ್.ನಿಸಾರ್ ಅಹಮ್ಮದ್ ಅವರ ನಿತ್ಯೋತ್ಸವ ಕನ್ನಡ ಕವಿತೆ ಮತ್ತು ಉರ್ದು ಅನುವಾದದ ಕವಿತೆಗಳ ಪುಸ್ತಿಕೆಯನ್ನು ಮಕ್ಕಳಿಗೆ ನೀಡಿ ಆ ಕನ್ನಡ ಕವಿತೆಯನ್ನು ಆಫ್ರೀನ್ ತಾಜ್ ಹಾಗೂ ಉರ್ದು ಅನುವಾದ ಕವಿತೆಯನ್ನು ಸೈಯದ ಅಸ್ಫಿಯಾ ಅವರು ಓದುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಉರ್ದು ದಿಲ್ ಹೈ ಕನ್ನಡ ಧಡ್ಕನ್ ಹೈ. ಅಲ್-ಅಮೀನ್ ವಿದ್ಯಾಸಂಸ್ಥೆಗಳಲ್ಲಿ ಉರ್ದು ಕಲಿಯುತ್ತಿರುವ ಮುಸ್ಲಿಂ ಮಕ್ಕಳು ಕನ್ನಡದ ಕಾರ್ಯಕ್ರಮವನ್ನು ಇಷ್ಟು ಅಚ್ಚುಕಟ್ಟಾಗಿ ಮಾಡುತ್ತಿರುವುದನ್ನು ಕಂಡರೆ ನನಗೆ ನಿಜಕ್ಕೂ ಸಂತೋಷವಾಗುತ್ತಿದೆ. ಉರ್ದು ಭಾಷೆ ಪಾಕಿಸ್ತಾನ್, ಆಫ್ಗಾನಿಸ್ತಾನ್, ಅರಬ್ಬಿ ಕಂಟ್ರಿಗಳಲ್ಲಿ ಹುಟ್ಟಿದ್ದಲ್ಲ. ಅದು ನಮ್ಮ ಭಾಷೆ. ಈ ನೆಲದ ಭಾಷೆ. ಉರ್ದು ಭಾಷೆಯ ಹುಟ್ಟು ಭಾರತ. ಅದರಲ್ಲೂ ಉತ್ತರ ಭಾರತ. ಭಾರತದಲ್ಲಿ ಹುಟ್ಟಿ ಬೆಳೆದು ಜಗತ್ತಿನಾದ್ಯಂತ ತನ್ನ ಸೊಬಗನ್ನು ಪಸರಿಸಿರುವ ಭಾಷೆ. ಉರ್ದುವಿನ ಗಜಲ್ ಸಾಹಿತ್ಯ ಯಾರಿಗೆತಾನೇ ಇಷ್ಟವಾಗುವುದಿಲ್ಲ. ಉರ್ದು ಮತ್ತು ಕನ್ನಡ ಭಾಷೆಯನ್ನು ಒಟ್ಟೊಟ್ಟಿಗೆ ಕಲಿಯುತ್ತಿರುವ ಇಲ್ಲಿನ ಮಕ್ಕಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಯಲ್ಲಿ ಭಾಷಾಸಾಮರಸ್ಯವಿದೆ ಎನ್ನುವುದಕ್ಕೆ ಈ ಕನ್ನಡದ ಕಾರ್ಯಕ್ರಮವೇ ಸಾಕ್ಷಿ. ನಾನು ಕುರಾನ್, ಬೈಬಲ್ ಮತ್ತು ಭಗವದ್ಗೀತೆಯನ್ನು ಮೂರು ಮೂರು ಬಾರಿ ಓದಿದ್ದೇನೆ. ಅವುಗಳನ್ನು ಒಟ್ಟಿಗೆ ಒಂದೇ ಕಡೆ ಇಟ್ಟಿದ್ದೇನೆ ಎಂದು ಹೇಳಿದರು.
ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕಾ.ಹು.ಚಾನ್ಪಾಷ ಮಾತನಾಡಿ “ಮಕ್ಕಳಲ್ಲಿ ಶಾಲಾ ಕಲಿಕೆಯ ಜೊತೆಜೊತೆಗೆ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವುದು ಇಂದಿನ ಅಗತ್ಯತೆಯಾಗಿದೆ. ಮೊಬೈಲ್ನಲ್ಲಿ ಮುಳುಗಿರುವ ಮಕ್ಕಳನ್ನು ಸಾಹಿತ್ಯದ ಕಡೆಗೆ ತರುವ ನಿಟ್ಟಿನಲ್ಲಿ ಮಕ್ಕಳ ಪದ್ಯಗಳನ್ನು ಅವರ ಕೈಗಳಿಗೆ ಕೊಟ್ಟು ಓದಿಸುವ ಕಾರ್ಯಾಗಾರವಾಗಿ ಮಕ್ಕಳ ಸಾಹಿತ್ಯ ಪರಿಷತ್ತು ಕೆಲಸ ಮಾಡುತ್ತ ಬಂದಿದೆ. ಇಲ್ಲಿ ಉರ್ದು ಕಲಿಯುತ್ತಿರುವ ಮಕ್ಕಳಿಂದ ಕನ್ನಡ ಪದ್ಯಗಳನ್ನು ಓದಿಸುವ ಮೂಲಕ ಸಾಹಿತ್ಯದ ಕಡೆಗೆ ಹೊರಳಿಸುವ ಕಾರ್ಯಕ್ರಮವಾಗಿ ಮಕ್ಕಳ ಕಾವ್ಯ ಕಲರವವನ್ನು ಏರ್ಪಡಿಸಲಾಗಿದೆ ಎಂದರು.
ಕರ್ನಾಟಕ ಶಿಕ್ಷಕರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಬಿ.ಶಿವಕುಮಾರ್ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿಗಳ ಎಂಟು ಭಾವಚಿತ್ರಗಳ ಪೋಟೊಗಳನ್ನು ಅಲ್-ಅಮೀನ್ ಅಂಜುಮನ್ ಪ್ರೌಢಶಾಲೆಗೆ ಕೊಟ್ಟು ಮಾತನಾಡಿ ಸಾಹಿತಿಗಳ ಭಾವಚಿತ್ರಗಳ ಪೋಟೊಗಳನ್ನು ಗಡಿನಾಡಿನ ಶಾಲೆಗಳಿಗೆ, ಅಲ್ಪಸಂಖ್ಯಾತ ಶಾಲೆಗಳಿಗೆ ಅಲ್ಲದೆ ಹಲವಾರು ಶಾಲೆಗಳಿಗೆ ಕೊಡುವುದರ ಮೂಲಕ ಮಕ್ಕಳಲ್ಲಿ ಕನ್ನಡ ಭಾಷೆ ಸಾಹಿತ್ಯದ ಒಲವನ್ನು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿಯನ್ನು ಬೆಳೆಸಲು ಮಕ್ಕಳ ಸಾಹಿತ್ಯ ಕಾರ್ಯಗಾರವನ್ನು ಸಹ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಲೇಖಕ ಪುರುಷೋತ್ತಮರಾವ್ ಮಾತನಾಡಿ ಇವತ್ತಿನ ಕಾರ್ಯಕ್ರಮದಲ್ಲಿ ಮಕ್ಕಳೇ ನಿರೂಪಣೆ, ಸ್ವಾಗತ, ಹಾಡುಗಾರಿಕೆ ಎಲ್ಲವೂ ಮಕ್ಕಳೇ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ. ಮಕ್ಕಳನ್ನು ಹೀಗೆ ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಭೌದ್ಧಿಕಶಕ್ತಿ ಬೆಳೆಯುತ್ತದೆ. ಮಕ್ಕಳಲ್ಲಿ ಕನ್ನಡ ಪ್ರೇಮ, ವಿಜ್ಞಾನ ಮತ್ತು ಪರಿಸರದ ಅರಿವು ಮೂಡಿಸುವುದರಿಂದ ಅವರಲ್ಲಿ ಕ್ರಿಯಾತ್ಮಕ ಶಕ್ತಿ ಬೆಳೆಯುತ್ತದೆ. ಮರ ಗಿಡಗಳನ್ನು ಬೆಳೆಸುವ ಆಸಕ್ತಿ ಮೂಡುತ್ತದೆ. ಪರಿಸರದೊಂದಿಗೆ ಭಾವನಾತ್ಮಕ ಸಂಬಂಧ ಏರ್ಪಡುತ್ತದೆ. ಇವತ್ತು ವಿಜ್ಞಾನ ಬೆಳೆಯುತ್ತಿದೆ ವೈಜ್ಞಾನಿಕ ಮನೋಭಾವ ಬೆಳೆಯುತ್ತಿಲ್ಲ. ಇದು ದೊಡ್ಡ ದುರಂತ ಎಂದು ಹೇಳಿದರು.
ಜಾಬಿರ್ ಅಹಮ್ಮದ್ ಮಾತನಾಡಿ ಪ್ರತಿಯೊಬ್ಬ ಮಗುವಿನಲ್ಲೂ ಪ್ರತಿಭೆ ಇರುತ್ತದೆ. ಅವರನ್ನು ಗುರುತಿಸುವ ಕಾರ್ಯವಾಗಬೇಕಷ್ಟೆ. ಮಕ್ಕಳಲ್ಲಿ ಸಾಹಿತ್ಯದ ಒಲವನ್ನು ಮೂಡಿಸಿದರೆ ನಾಳೆ ಅವರು ಉತ್ತಮ ಪ್ರಜೆಗಳಾಗುತ್ತಾರೆ. ನಮ್ಮ ಶಾಲೆಯ ಕನ್ನಡ ಶಿಕ್ಷಕರು, ಕವಿಗಳೂ ಆಗಿರುವ ಕಾ.ಹು.ಚಾನ್ಪಾಷ ನಮ್ಮ ವಿದ್ಯಾ ಸಂಸ್ಥೆಗಳಲ್ಲಿ ಉರ್ದು ಓದುತ್ತಿರುವ ಮಕ್ಕಳಲ್ಲಿನ ಕನ್ನಡ ಆಸಕ್ತಿಯನ್ನು ಗುರುತಿಸಿ ಅವರಲ್ಲಿ ಕನ್ನಡ ಕವನಗಳನ್ನು ಓದಿಸುವ, ಕನ್ನಡ ಹಾಡುಗಳನ್ನು ಹಾಡಿಸುವ ಹಾಗೂ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಇಡೀ ಕ್ಯಾಂಪಸನ್ನು ಕನ್ನಡಮಯವನ್ನಾಗಿಸಿದ್ದಾರೆ ಎಂದು ಹೇಳಿದರು.
ಪ್ರಾಂಶುಪಾಲರಾದ ಶಮೀಮ್ ಸಲ್ಮಾ, ಶಾಹೀನ್ ತಾಜ್ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು. ಮೊಹಸೀನ ಬೇಗಂ, ಮುಸ್ರತ್ ಕೌಸರ್, ಸೆಹರ್ ಅಂಜುಂ, ರಹಮತುನ್ನಿಸಾ, ರಫಿಯುಲ್ಲಾ ಖಾನ್, ಸೈಯದ್ ಜಾಕೀರ್ ಮೊದಲಾದವರು ಉಪಸ್ಥಿತಿಯಿದ್ದರು.
ಇದೇ ಸಂದರ್ಭದಲ್ಲಿ ಕನ್ನಡ ಭಾಷೆ, ಸಾಹಿತ್ಯದ ಬಗೆಗಿನ ಆಸಕ್ತಿ, ಕನ್ನಡ ಭಾವಗೀತೆ, ಜನಪದ ಗೀತೆಗಳ ಹಾಡುಗಾರಿಕೆ, ಕನ್ನಡದಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸುತ್ತಿರುವ ಪ್ರತಿಭಾವಂತ ಮಕ್ಕಳಾದ ಅಲ್-ಅಮೀನ್ ಉರ್ದು ಪ್ರೌಢಶಾಲೆಯ ಆಫ್ರೀನ್ ತಾಜ್, ಹಿರಿಯ ಪ್ರಾಥಮಿಕ ಶಾಲೆಯ ಆಮಿನಾ ಖಾನಂ, ಪಿ.ಯು. ಕಾಲೇಜಿನ ಅಲ್ಫಿಯಾ, ಪದವಿ ಕಾಲೇಜಿನ ಸಾಹೇಬ ಬೇಗಂ ಅವರನ್ನು ಸನ್ಮಾನಿಸಲಾಯಿತು.
ಅಲ್-ಅಮೀನ್ ವಿದ್ಯಾ ಸಂಸ್ಥೆಯ ಉರ್ದು ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಆಂಗ್ಲ ಪ್ರೌಢಶಾಲೆ, ಪಿಯು ಕಾಲೇಜು, ಪದವಿ ಕಾಲೇಜು, ಡಿ.ಎಡ್ ಕಾಲೇಜಿನ ಸುಮಾರು 30 ವಿದ್ಯಾರ್ಥಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡಿದರು. ವಿದ್ಯಾರ್ಥಿಗಳಾದ ಆಫ್ರೀನ್ ತಾಜ್ ನಿರೂಪಣೆ, ಶಾಫಿಯಾ ತಾಜ್ ಸ್ವಾಗತ, ಆಲಿಯಾ ಕೌಸರ್ ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿಗಳಾದ ತಸ್ಮಿಯಾ, ಗೌಸಿಯಾ ಐಮನ್, ಮೆಹರ್, ಅಲ್ಪಿಯಾ ಮೊದಲಾದವರು ಕನ್ನಡ ಭಾವಗೀತೆ, ಜನಪದ ಗೀತೆಗಳ ಹಾಡಿದರು.