ಮಾಜಿ ಸಚಿವ ಹಾಗೂ ಪತ್ರಕರ್ತ ಕೆ.ಎಂ.ಮುನಿಯಪ್ಪ ಭಾವಚಿತ್ರ ಅನಾವರಣ: ವೃತ್ತಿ ಬದ್ದತೆ ಇದ್ದರೆ ಸುಂದರ ಸಮಾಜ ಸಾಧ್ಯ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಪತ್ರಕರ್ತರಲ್ಲಿ ವೃತ್ತಿ ಮೌಲ್ಯ ಮತ್ತು ಹೋರಾಟಗಾರರಲ್ಲಿ ಪ್ರಾಮಾಣಿಕತೆ, ಬದ್ದರೆ ಇದ್ದರೆ ಸುಂದರ ಹಾಗೂ ಸಂಮೃದ್ದಿಯ ಸಮಾಜ ನಿರ್ಮಾಣ ಸಾಧ್ಯ, ಈ ನಿಟ್ಟಿನಲ್ಲಿ ದಿ.ಕೆ.ಎಂ.ಮುನಿಯಪ್ಪ ಆದರ್ಶವಾಗಿದ್ದಾರೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮನ್ವಂತರ ಜನಸೇವಾ ಟ್ರಸ್ಟ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಮನ್ವಂತರ ಜನಸೇವಾ ಟ್ರಸ್ಟ್ ಹಾಗೂ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಾಜಿ ಸಚಿವ,ಪತ್ರಕರ್ತರ ಸಂಘದ ಅಧ್ಯಕ್ಷರೂ ಆಗಿದ್ದ ಕೆ.ಎಂ.ಮುನಿಯಪ್ಪ ಅವರ ಭಾವಚಿತ್ರ ಅನಾವರಣಗೊಳಿಸಿ ಅವರು ಮಾತನಾಡುತ್ತಿದ್ದರು.
ಇಂದು ಹೋರಾಟಗಳು ಫ್ಯಾಷನ್ ಆಗಿದೆ, ಆದರೆ ಕೆ.ಎಂ.ಮುನಿಯಪ್ಪ ಅವರ ಹಾದಿ ಯುವಕರಿಗೆ ಆದರ್ಶವಾಗಿದೆ,ಸೋತರು ಸರಿಯೇ ಅವರಿಗೆ ಚಿಕ್ಕಬಳ್ಳಾಪುರ ವಿಧಾನಸಭೆಗೆ ಟಿಕೆಟ್ ನೀಡುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಘೋಷಿಸಿದ ಸಂದರ್ಭ ಸ್ಮರಿಸಿದ ಅವರು, ಮುನಿಯಪ್ಪ ಅವರ ಪ್ರಾಮಾಣಿಕತೆ ಇದಕ್ಕೆ ಸಾಕ್ಷಿ ಎಂದರು.
ಕೋಲಾರ ಜಿಲ್ಲೆಯ ಪತ್ರಕರ್ತರ ಸಂಘದ ಇತಿಹಾಸದಲ್ಲಿ ಅನೇಕರು ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ, ಸಂಘವನ್ನು ಬಲಿಷ್ಟಗೊಳಿಸಿ ಸುಂದರ ಭವನ ನಿರ್ಮಿಸಿದ್ದಾರೆ, ಅವರೆಲ್ಲರ ನೆನಪು ಶಾಶ್ವತವಾಗಿರಲು ಸಂಘದಿಂದ ಪುಸ್ತಕ ಹೊರತರುವಂತೆ ಅವರು ಸಲಹೆ ನೀಡಿದರು.
ಕಾರ್ಯಾಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ಮುನಿರಾಜು ಮಾತನಾಡಿ, ಕೆ.ಎಂ. ಮುನಿಯಪ್ಪ ಶಾಸಕರಾಗಿ, ಸಫಾಯಿ ಕರ್ಮಚಾರಿಯ ಅಧ್ಯಕ್ಷರಾಗಿದ್ದರೂ ಸರಳ ಜೀವನ ನಡೆಸಿದ್ದರು ಎಂದರು.
ಸಂಘದ ಉಳಿವಿಗೆ ಕಾರಣರಾದ ನಾರಾಯಣಸ್ವಾಮಿ,ಕೃಷ್ಣಸ್ವಾಮಿ, ಆರ್ಮುಗಂ, ಕೆ.ಎಂ.ಮುನಿಯಪ್ಪ ಅವರನ್ನು ಸ್ಮರಿಸಬೇಕು, ಸಂಘಕ್ಕೆ ನಿವೇಶನ ಸಿಗುವಲ್ಲಿ ಅವರ ಕೊಡುಗೆಯೂ ದೊಡ್ಡದಿದೆ. ಸಂಘದ ಅಧ್ಯಕ್ಷರುಗಳ ಭಾವಚಿತ್ರದ ಪೈಕಿ ಕೊರತೆ ಇದ್ದ ಭಾವಚಿತ್ರವನ್ನು ಮನ್ವಂತರ ಜನಸೇವಾ ಟ್ರಸ್ಟ್‍ನ ಅನಂತರಾಮ್ ದೊರಕಿಸಿಕೊಟ್ಟಿದ್ದಕ್ಕೆ ಚಿರಋಣಿ. ಸಂಘದ ಅಧ್ಯಕ್ಷರಾದ ಪ್ರತಿಯೊಬ್ಬರೂ ಒಂದೊಂದು ಕೊಡುಗೆ ನೀಡಿದ್ದಾರೆ. ತಮ್ಮ ಅವಧಿಯಲ್ಲಿ ಭವನ ಆಧುನೀಕರಣಗೊಳಿಸಿ ರಾಜ್ಯದಲ್ಲೇ ಹೈಕೆಟ್ ಆಗಿದೆ ಎಂದರು.
ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ಗೋಪಿನಾಥ್ ಮಾತನಾಡಿ, ಕೆ.ಎಂ.ಮುನಿಯಪ್ಪ ಅವರ ಫೆÇೀಟೋ ಕೊರತೆ ಇತ್ತು. ಇಂದು ಪರಿಪೂರ್ಣವಾಗಿದೆ. ಪತ್ರಕರ್ತರಿಗೆ ಕೆಎಂ ಮುನಿಯಪ್ಪ ಆದರ್ಶ, ಅವರ ಬ್ಯಾಗ್‍ನಲ್ಲಿ ಒಂದು ಟವಲ್, ಪೇಪರ್ ಮಾತ್ರ ಇರುತ್ತಿತ್ತು, ಹೃದಯ ಆತ್ಮ ಮನಸ್ಸು ಬ್ಯಾಗ್‍ನಲ್ಲಿತ್ತು ಎಂದು ಬಣ್ಣಿಸಿದರು.
ಕೆ.ಎಂ.ಮುನಿಯಪ್ಪ ಅವರಿಗೆ ಮೀಸಲು ಕ್ಷೇತ್ರದಲ್ಲಿ ಶಾಸಕ ಸ್ಥಾನ ಅನಾಯಾಸವಾಗಿ ಒಲಿದು ಬಂತು. ರೇಷ್ಮೆ ಸಚಿವರಾದರು. ಆದರೂ ವರದಿಗಾರಿಕೆ ಬಿಡಲಿಲ್ಲ. ಆದರೆ ಪತ್ರಕರ್ತರು ಈ ವೃತ್ತಿ ಭಾದ್ಯತೆ ಇಟ್ಟುಕೊಂಡಿದ್ದೇವೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಹಿರಿಯರಿಂದ ಕಲಿಯುವುದು ಸಾಕಷ್ಟಿದೆ. ಧ್ಯೇಯ, ನಿಷ್ಠೆ, ಪತ್ರಿಕಾ ಧರ್ಮವನ್ನು ಇವರಿಂದ ಕಲಿಯಬೇಕು, ಪತ್ರಕರ್ತರ ಭವನ ಥಳಕು ಬಳಕು, ಹೈಟೆಕ್ ಆದರೆ ಸಾಲದು, ಪತ್ರಕರ್ತರು ವೃತ್ತಿಯಲ್ಲಿ ಹೈಟೆಕ್ ಆಗಬೇಕು. ಆದರೆ ಇಂದು ರಾಜಕಾರಣಿ, ಪತ್ರಕರ್ತನಿಗೆ ವ್ಯತ್ಯಾಸವಿಲ್ಲದಂತಾಗಿದೆ ಎಂದರು.
ಕೆ.ಎಂ, ಮುನಿಯಪ್ಪ ಅವರಿಗೆ ರಾಷ್ಟ್ರೀಯ ಸಫಾಯ ಕರ್ಮಚಾರಿ ಆಯೋಗದ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಲಾಯಲ್ಟಿಗೆ ಸಿಕ್ಕ ಗೌರವ. ರಾಜಕೀಯವಾಗಿ ಎಚ್.ಡಿ. ದೇವೇಗೌಡರಿಗೆ ನಿಷ್ಠೆ ತೋರಿಸಿದ್ದರು. ದೇವೇಗೌಡರು ಪ್ರಧಾನಿ ಆದ 3 ದಿನಕ್ಕೇ ಮುನಿಯಪ್ಪ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದರು. ಪತ್ರಕರ್ತರಾದವರು ವೃತ್ತಿಗೆ, ಸಂಘಕ್ಕೆ ಲಾಯಲ್ಟಿ ತೋರಿಸೋಣ. ಹಿರಿಯರು ಹಾಕಿದ ದಾರಿಯಲ್ಲಿ ಶೇ. 10 ರಷ್ಟಾದರೂ ಪಾಲಿಸಬೇಕು ಎಂದು ನುಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಕೆ.ಎಂ. ಮುನಿಯಪ್ಪ ಅವರು ಹೊನ್ನುಡಿ ಪತ್ರಿಕೆಯ ವರದಿಗಾರರಾಗಿ ಕಷ್ಟದ ದಿನಗಳನ್ನು ಕಳೆದಿದ್ದರು. ಚಿಕ್ಕಬಳ್ಳಾಪುರದಲ್ಲಿ ವಿಶೇಷ ಸುದ್ದಿ ಇದ್ದರೆ ವರದಿ ಸಮೇತ ಕೋಲಾರದ ಪತ್ರಿಕೆ ಕಚೇರಿಗೆ ತಂದು ರಾತ್ರಿ ಅಲ್ಲೇ ಮಲಗಿ ಬೆಳಗ್ಗೆ ಪತ್ರಿಕೆ ತೆಗೆದುಕೊಂಡು ಹೋಗುತ್ತಿದ್ದರು. ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿದ್ದಾಗ ಕೆಜಿಎಫ್‍ಗೆ ಬಂದು ಸ್ವತಃ ಗಣಿ ಕಾರ್ಮಿಕರ ಮನೆಗೆ ಹೋಗಿ ಸಂಕಷ್ಟಗಳನ್ನು ಆಲಿಸಿದ್ದರು ಎಂದು ತಿಳಿಸಿದರು.
ಸಂಘದ ಮಾಜಿ ಅಧ್ಯಕ್ಷ ಎಂ.ಜಿ ಪ್ರಭಾಕರ್ ಮಾತನಾಡಿ, 1979-81ರಲ್ಲಿ ಕೆ.ಎಂ. ಮುನಿಯಪ್ಪ ಅವರ ಪರಿಚಯ ಆಯಿತು. ಹೊನ್ನುಡಿ ದಿನಪತ್ರಿಕೆಯ ವರದಿಗಾರರಾಗಿದ್ದ ಅವರು ಸುದ್ದಿಗಳನ್ನು ಬರೆದು ಪೋಸ್ಟ್ ಮಾಡುತ್ತಿದ್ದರು. ಕೋಲಾರದಲ್ಲಿ ಪತ್ರಕರ್ತರ ಸಂಘಕ್ಕೆ ನಿವೇಶನಕ್ಕಾಗಿ ಚಿತ್ರದುರ್ಗದ ಕುಮಾರೇಶ್ವರ ನಾಟಕ ಸಂಘದ ಕಲಾವಿದರನ್ನು ಕರೆಯಿಸಿ ನಾಟಕದ ಮೂಲಕ ಹಣ ಸಂಗ್ರಹಿಸಿದ್ದನ್ನು ಸ್ಮರಿಸಿದರು.
ಮನ್ವಂತರ ಜನಸೇವಾ ಟ್ರಸ್ಟ್ ಕಾರ್ಯದರ್ಶಿ ಪಾ.ಶ್ರೀ. ಅನಂತರಾಮ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಸುರೇಶ್‍ಕುಮಾರ್, ಮನ್ವಂತರ ಆಧ್ಯಾತ್ಮಿಕ ವಿಭಾಗದ ಸಂಚಾಲಕ ಎಸ್.ಮಂಜುನಾಥ್, ಟ್ರಸ್ಟ್‍ನ ಖಜಾಂಚಿ ಪ್ರಕಾಶ್, ಬಳಗದ ಕೆಎನ್ ಪರಮೇಶ್ವರನ್, ಪುರುಷೋತ್ತಮ ರಾವ್, ಸಹಕಾರಿ ಯೂನಿಯನ್ ನಿರ್ದೇಶಕಿ ಅರುಣಮ್ಮ, ನಗರಸಭೆ ಮಾಜಿ ಸದಸ್ಯ ಕೆ.ಎನ್. ತ್ಯಾಗರಾಜ್, ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ಮನ್ವಂತರ ರೈತ ಪಡೆ ಸಂಚಾಲಕ ನಾಗರಾಜ್, ಕನ್ನಡಪರ ಹೋರಾಟಗಾರರ ಒಕ್ಕೂಟದ ಅಧ್ಯಕ್ಷ ಅ.ಕೃ. ಸೋಮಶೇಖರ್, ಪ್ರಗತಿಪರ ರೈತ ನೆನುಮನಹಳ್ಳಿ ಚಂದ್ರಶೇಖರ್ ಇತರರರು ಹಾಜರಿದ್ದರು.