ಪತ್ರಕರ್ತರ ಪುರುಷ ಸಂಘಕ್ಕೆ ಭದ್ರತೆರಹಿತ ಸಾಲ-ರಾಜ್ಯದಲ್ಲೇ ಮೊದಲು : ಸ್ವಾಭಿಮಾನಿ ಬದುಕಿಗೆ ಡಿಸಿಸಿ ಬ್ಯಾಂಕ್ ನೆರವು-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಪತ್ರಕರ್ತರು ಸ್ವಾಭಿಮಾನದಿಂದ ಬದುಕು ನಡೆಸಲು ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ಮೊದಲ ಬಾರಿಗೆ ಭದ್ರತೆ ರಹಿತ ಸಾಲ ಸೌಲಭ್ಯ ಒದಗಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಕರ್ತರು ರಚಿಸಿಕೊಂಡಿರುವ ಡಿವಿಜಿ ಪುರುಷರ ಸ್ವಸಹಾಯ ಸಂಘಕ್ಕೆ 5 ಲಕ್ಷ ರೂ ಸಾಲ ಸೌಲಭ್ಯ ಹಾಗೂ ಸಂಘದ ಎಲ್ಲಾ ಸದಸ್ಯರಿಗೂ ಎಟಿಎಂ ಕಾರ್ಡ್ ವಿತರಿಸಿ ಅವರು ಮಾತನಾಡುತ್ತಿದ್ದರು.
ಪತ್ರಕರ್ತರು ಯಾರ ಮುಂದೆಯೂ ಕೈಚಾಚಬೇಕಾಗಿಲ್ಲ, ಸ್ವಾಭಿಮಾನದ ಬದುಕು ನಡೆಸಲು ಡಿಸಿಸಿ ಬ್ಯಾಂಕ್ ಸಾಲ ಸೌಲಭ್ಯ ನೀಡಲು ಸಿದ್ದವಿದೆ ಎಂದ ಅವರು, ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಮೂಲಕ ನಂಬಿಕೆ ಗಟ್ಟಿಗೊಳಿಸಿಕೊಳ್ಳಿ, ಮತ್ತಷ್ಟು ಸಾಲ ಒದಗಿಸಲು ಬ್ಯಾಂಕ್ ಸಿದ್ದವಿದೆ ಎಂದು ಭರವಸೆ ನೀಡಿದರು.
ಪತ್ರಕರ್ತರಿಗೆ ಭದ್ರತೆ ರಹಿತ ಸಾಲವನ್ನು ಡಿಸಿಸಿ ಬ್ಯಾಂಕೊಂದು ವಿತರಿಸಿರುವುದು ರಾಜ್ಯದಲ್ಲೇ ಮೊದಲಾಗಿದೆ, ಸದಾ ಸಾರ್ವಜನಿಕರಿಗಾಗಿ ದುಡಿಯುವ ಪತ್ರಕರ್ತರಿಗೂ ಕುಟುಂಬಗಳಿದ್ದು, ಅವರ ಬದುಕಿಗೂ ನೆರವಾಗುವ ದೃಢ ನಿರ್ಧಾರವನ್ನು ಬ್ಯಾಂಕ್ ಕೈಗೊಂಡು ಈ ಸಾಲ ನೀಡಲು ನಿರ್ಧರಿಸಿದೆ ಎಂದರು.
ಕೋಲಾರದ ಪತ್ರಕರ್ತರು ಮಾತ್ರವಲ್ಲ, ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ಸಾಲ ಸೌಲಭ್ಯ ವಿಸ್ತರಿಸುವ ಮೂಲಕ ಸ್ವಾವಲಂಬಿ ಬದುಕಿಗೆ ನೆರವಾಗುವುದಾಗಿ ಘೋಷಿಸಿದ ಅವರು, ಪುರುಷ ಸಂಘ ಕಟ್ಟಿಕೊಂಡು ಉಳಿತಾಯ ಮಾಡಿ ಸಾಲ ಸೌಲಭ್ಯಕ್ಕೆ ನಿಯಮಾನುಸಾರ ಅರ್ಜಿ ಹಾಕಿ ಸೌಲಭ್ಯ ಪಡೆಯಲು ಸಲಹೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಪತ್ರಕರ್ತರಿಗೆ ನೆರವಾಗುವ ಡಿಸಿಸಿ ಬ್ಯಾಂಕಿನ ನಿರ್ಧಾರವನ್ನು ಸ್ವಾಗತಿಸಿ, ಹಿಂದೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸ್ತ್ರಿಶಕ್ತಿ ಸ್ವಸಹಾಯ ಸಂಘಗಳಿಗೆ ಸಾಲ ಒದಗಿಸಿ ಅವರ ಸ್ವಾಭಿಮಾನಿ ಬದುಕಿಗೆ ನೆರವಾಗಿದ್ದರು. ಅಂದು ಕೃಷ್ಣಾ ಅವರೇ ಪುರುಷ ಸಂಘಗಳಿಗೂ ಸಾಲ ಒದಗಿಸುವ ಪ್ರಯತ್ನ ನಡೆಸಿದ್ದರು ಆದರೆ ಸಾಧ್ಯವಾಗಿರಲಿಲ್ಲ.
ಆದರೆ ಇದೀಗ ಡಿಸಿಸಿ ಬ್ಯಾಂಕ್ ಇಂತಹ ಉತ್ತಮ ಕೆಲಸ ಮಾಡಿದೆ ಎಂದು ತಿಳಿಸಿ, ಈ ಸೌಲಭ್ಯ ಅವಿಭಜಿತ ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ, ಸ್ವಾವಲಂಬಿ ಬದುಕು ಬಯಸುವ ಪುರುಷರಿಗೂ ವಿಸ್ತರಿಸುವಂತಾಗಲಿ ಎಂದರು.
ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಡಿವಿಜಿ ಹೆಸರಿನಲ್ಲಿ ಪತ್ರಕರ್ತರು ಪುರುಷ ಸಂಘ ಸ್ಥಾಪಿಸಿ ಸಾಲ ಪಡೆದಿದ್ದೀರಿ, ಸಾಲ ಸಕಾಲಕ್ಕೆ ಮರುಪಾವತಿಸಿ, ಡಿವಿಜಿ ಹೆಸರಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳಿ, ಮತ್ತಷ್ಟು ಪತ್ರಕರ್ತರಿಗೆ ನೆರವು ಸಿಗುವಂತಾಗಲಿ ಎಂದರು.
ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಕರ್ ಮಾತನಾಡಿ, ಪತ್ರಕರ್ತರ ಮೂಲಕವೇ ಪುರುಷ ಸಂಘಗಳಿಗೆ ಸಾಲ ನೀಡುವ ಕಾರ್ಯವನ್ನು ಡಿಸಿಸಿ ಬ್ಯಾಂಕ್ ಆರಂಭಿಸಿರುವುದು ಶ್ಲಾಘನೀಯವಾಗಿದೆ, ಎರಡೂ ಜಿಲ್ಲೆಗಳ ಎಲ್ಲಾ ಪತ್ರಕರ್ತರಿಗೂ ಈ ಸೌಲಭ್ಯ ಸಿಗುವಂತಾಗಲಿ ಎಂದ ಅವರು, ಸಾಲ ಪಡೆದ ಪತ್ರಕರ್ತರು ಸಕಾಲದಲ್ಲಿ ಕಂತು ಪಾವತಿಸಿ, ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಳ್ಳಿ ಎಂದು ಕೋರಿದರು.
ಪ್ರಥಮ ಪುರುಷ ಸಂಘದ ಪ್ರತಿನಿಧಿಗಳಾದ ರಾಘವೇಂದ್ರ, ಮಾಮಿಪ್ರಕಾಶ್ ಸಾಲದ ಚೆಕ್ ಪಡೆದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಸುನೀಲ್, ಸುಧಾಕರ್, ವೆಂಕಟೇಶ್, ಅಮರ್, ಬೆಟ್ಟಪ್ಪ, ಗಂಗಾಧರ್, ನವೀನ್,ನಾಗೇಶ್ ಮತ್ತಿತರರಿದ್ದರು.