JANANUDI.COM NETWORK

ಬೆಂಗಳೂರು: ಮೇ.16ರಿಂದ ಶಾಲಾ-ಕಾಲೇಜುಗಳು ರಾಜ್ಯಾಧ್ಯಂತ ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ, ಪಿಯು ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಬೇಕೆಂದು ಪಿಯು ಬೋರ್ಡ್ ಆದೇಶಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಆಯಾ ಕಾಲೇಜು ಅಭಿವೃದ್ಧಿ ಸಮಿತಿಯು ನಿರ್ಧರಿಸಿರುವಂತ ಸಮವಸ್ತ್ರಗಳನ್ನು ಧರಿಸತಕ್ಕದ್ದು. ಆಡಳಿತ ಮಂಡಳಿಗಳು, ಸಿಡಿಸಿ ಸಮವಸ್ತ್ರವನ್ನು ನಿಗದಿಪಡಿಸದೇ ಇದ್ದಲ್ಲಿ, ಸಮಾನತೆ ಮತ್ತು ಐಕ್ಯತೆಯನ್ನು ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದಂತೆ ಇರುವ ಉಡುಪುಗಳನ್ನು ಧರಿಸುವಂತೆ ತಿಳಿಸಿದೆ.
ಇದಷ್ಟೇ ಅಲ್ಲದೇ ಪದವಿ ಪೂರ್ವ ಶಿಕ್ಷಣ ಮಂಡಳಿಯು, ಪಿಯು ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಿಇಟಿ, ಎಐಇಇಇ, ಐಐಟಿ, ಜೆಇಇ, ನೀಟ್, ಇಂಟರ್ಗ್ರೇಟೆಡ್ ಕೋರ್ಸ್, ಬ್ರಿಡ್ಜ್ ಕೋರ್ಸ್ ಇತ್ಯಾದಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ಪಡೆದು, ಇತರೆ ಸಂಘ ಸಂಸ್ಥೆಗಳ, ಇತರೆ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸೇರಿ ಎಲೆಕ್ಟ್ರಾನಿಕ್ ಮಾಧ್ಯಮದ ಸಹಾಯದಿಂದ ಬೋಧನೆ ಮಾಡುವುದು ಕಂಡುಬಂದಲ್ಲಿ ಅಂತಹ ಕಾಲೇಜುಗಳ ಮಾನ್ಯತೆಯನ್ನು ರದ್ದು ಪಡಿಸಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಸುಮಾರು 128 ಪುಟಗಳ ಮಾರ್ಗಸೂಚಿಯನ್ನು ಹೊರಡಿಸಿದೆ
ಪಿ.ಯು. ಪಠ್ಯಕ್ರಮದ ಬೋಧನೆಯನ್ನು ಹೊರತುಪಡಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇರುವ ಪಠ್ಯಕ್ರಮದ ಬಗ್ಗೆ ಬೋಧನೆ ಮಾಡುವುದು ಕಂಡು ಬಂದಲ್ಲಿ, ಸದರಿ ಸಂಸ್ಥೆಗಳ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದೆ.