ತಹಶೀಲ್ದಾರ್ ಶಿರಿನ್ ತಾಜ್ ಅವರ ನೇತೃತ್ವದಲ್ಲಿ ಕಂದಾಯ, ತೊಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಸಂಭವಿಸಿರುವ ಪ್ರದೇಶಗಳ ಪರಿಶೀಲನೆ

ಶ್ರೀನಿವಾಸಪುರ: ತಹಶೀಲ್ದಾರ್ ಶಿರಿನ್ ತಾಜ್ ಅವರ ನೇತೃತ್ವದಲ್ಲಿ ಸೋಮವಾರ ಕಂದಾಯ, ತೊಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಸಿದರು.
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ತೋಟಗಾರಿಕಾ ಅಧಿಕಾರಿಗಳಾದ ಹರೀಶ್, ಎನ್.ಮಂಜುನಾಥ್, ಎಂ.ಎಸ್.ರಾಜೀವ್ ಇದ್ದರು.
ತಾಲ್ಲೂಕಿನಲ್ಲಿ ಈ ಮುಂಗಾರಿನಲ್ಲಿ 2939 ಹೆಕ್ಟೇರ್‍ನಲ್ಲಿ ಬೆಳೆಯಲಾಗಿದ್ದ ತೋಟದ ಬೆಳೆಗೆ ಹಾನಿ ಉಂಟಾಗಿದೆ. ಆಪೈಕಿ 2500 ಹೆಕ್ಟೇರ್‍ನಲ್ಲಿ ಬೆಳೆಯಲಾಗಿದ್ದ ಮಾವಿನ ಫಸಲಿಗೆ ಹಾನಿ ಉಂಟಾಗಿದೆ. ಬೆಳೆ ನಷ್ಟ ಅನುಭವಿಸಿರುವ 1546 ರೈತರಲ್ಲಿ 515 ಸಣ್ಣ ರೈತರು ಹಾಗೂ 1031 ಇತರ ರೈತರು ಸೇರಿದ್ದಾರೆ ಎಂದು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್ ತಿಳಿಸಿದರು.
ಸಭೆ: ಬೆಳೆ ಹಾನಿ ಪರಿಶೀಲನೆ ಬಳಿಕ, ತಹಶೀಲ್ದಾರ್ ಶಿರಿನ್ ತಾಜ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಯಿತು.
ತಹಶೀಲ್ದಾರ್ ಶರಿನ್ ತಾಜ್ ಮಾತನಾಡಿ, ಬೆಳೆ ಹಾನಿ ಪ್ರಕರಣಗಳಲ್ಲಿ ಅತ್ಯಂತ ಪಾರದರ್ಶಕ ಹಾಗೂ ವೈಜ್ಞಾನಿಕವಾಗಿ ಬೆಳೆ ನಷ್ಟ ಅಂದಾಜು ಮಾಡಲಾಗಿದೆ. ಜಿಪಿಎಫ್ ಬಳಸಿ ರೈತರ ಸಮ್ಮುಖದಲ್ಲಿ ಪಹಣಿ ಪರಿಶೀಲನೆ ನಡೆಸಲಾಗಿದೆ. ಬೆಳೆ ನಷ್ಟ ಪರಿಹಾರ ಅರ್ಹ ಫಲಾನುಭವಿಗೆ ದೊರೆಯುವಂತೆ ಎಚ್ಚರ ವಹಿಸಲಾಗಿದೆ. ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಮಾವು, ಪ್ರಮುಖ ತೋಟದ ಬೆಳೆಗಳಾದ ಟೊಮೆಟೊ, ಕ್ಯಾಪ್ಸಿ ಕಂ, ಬೀನ್ಸ್ ಮತ್ತಿತರ ಬೆಳೆಗಳಿಗೆ ಹೆಚ್ಚಿನ ಹಾನಿ ಸಂಭವಿಸಿದೆ. ಹಿರಿಯ ಅಧಿಕಾರಿಗಳಿಗೆ ಬೆಳೆ ಹಾನಿ ಪರಿಶೀಲನಾ ವರದಿ ಕಳಿಸಿಕೊಡಲಾಗುವುದು ಎಂದು ಹೇಳಿದು.