ಬೆಳ್ಮಣ್ಣು ಹೊಸಮಾರು ಹಳೆವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಹೊಸಮಾರಿನಲ್ಲಿ ನೂತನವಾಗಿ ನಿರ್ಮಿಸಿರುವ ಬೆಳ್ಮಣ್ಣು ದಿ. ವೇದಮೂರ್ತಿ ಮಧ್ವರಾಯ ಭಟ್ ವೃತ್ತ ಉದ್ಘಾಟನಾ ಸಮಾರಂಭವು ಗುರುವಾರ ಜರಗಿತು.ಬೆಳ್ಮಣ್ಣು ದಿ. ವೇದಮೂರ್ತಿ ಮಧ್ವರಾಯ ಭಟ್ ಅವರು ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ, ಪ್ರಧಾನ ಅರ್ಚಕರಾಗಿ, ಖ್ಯಾತ ಜ್ಯೋತಿಷಿಗಳಾಗಿ ರಾಷ್ಟ್ರಮಟ್ಟದ ರಾಜಕಾರಣಿಗಳನ್ನು, ಸಿನಿಮಾ ನಟರನ್ನು, ಉದ್ಯಮಿಗಳನ್ನು, ಅನೇಕ ಗಣ್ಯರನ್ನು ಬೆಳ್ಮಣ್ಣಿಗೆ ಸೆಳೆದ ಅವರು ತನಗೆ ಹರಿದು ಬಂದ ಜನಪ್ರಿಯತೆಯನ್ನು ದೇವಸ್ಥಾನದ ಅಭಿವೃದ್ಧಿಗೆ ವಿನಿಯೋಗಿಸಿದ ಧರ್ಮಾತ್ಮರು.
ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಿ.ಕೆ. ವಿಘ್ನೇಶ್ ಭಟ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೃತ್ತ (ಸರ್ಕಲ್) ಉದ್ಘಾಟನೆಯನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು. ಬೆಳ್ಮಣ್ಣು ದಿ. ವೇದಮೂರ್ತಿ ಮಧ್ವರಾಯ ಭಟ್ ಮೂರ್ತಿ (ಪುತ್ಥಳಿ) ಅನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ರಘುಪತಿ ಭಟ್ ಅವರು ಉದ್ಘಾಟಿಸಿದರು. ಹಳೆವಿದ್ಯಾರ್ಥಿ ಸಂಘದ ಶಾಶ್ವತ ನಾಮಫಲಕವನ್ನು ಬೆಳ್ಮಣ್ಣು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರಕಾಶ್ ದೇವಾಡಿಗ ಅವರು ಅನಾವರಣಗೊಳಿಸಿದರು. ವೃತ್ತದ ನಾಮಫಲಕವನ್ನು ಅರುಣ್ ಕುಮಾರ್ ನಿಟ್ಟೆ ಅವರು ಅನಾವರಣಗೊಳಿಸಿದರು.
ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಜನಾರ್ದನ ಭಟ್ ಮತ್ತು ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕರಾದ ಜಯಂತಿ ಆರ್. ಶೆಟ್ಟಿ ಅವರು ದಿ. ಮಧ್ವರಾಯ ಭಟ್ ಅವರ ಸಾಧನೆಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆರ್ಚಕರಾದ ಶ್ರೀಧರ್ ಭಟ್, ಬೆಳ್ಮಣ್ಣು ಶ್ರೀ ಕ್ಷೇತ್ರದ ತಂತ್ರಿಗಳಾದ ಸತೀಶ್ ತಂತ್ರಿ, ರಘುಪತಿ ತಂತ್ರಿ, ಬ್ರಹ್ಮಶ್ಯಗುತ್ತು ಸದಾನಂದ ಶೆಟ್ಟಿ, ಬೆಳ್ಮಣ್ಣು ವ್ಯವಸಾಯ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ನಿತ್ಯಾನಂದ ಶೆಟ್ಟಿ, ಬೆಳ್ಮಣ್ಣು ಹೊಸಮಾರು ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಸುರೇಶ್ ಶೆಟ್ಟಿ ಅವರು ವೇದಿಕೆಯಲ್ಲಿದ್ದರು.
ದಿ. ಮಧ್ವರಾಯ ಭಟ್ ಅವರ ಮೂರ್ತಿ ರಚಿಸಿದ ಶಿಲ್ಪಿ ಸತೀಶ್ ಮುದರಂಗಡಿ ಅವರನ್ನು ಸನ್ಮಾನಿಸಲಾಯಿತು. ವೃತ್ತ ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಅವರು ಕಾರ್ಯಕ್ರಮ ನಿರೂಪಿಸಿದರು. ಬೆಳ್ಮಣ್ಣು ಹೊಸಮಾರು ಹಳೆವಿದ್ಯಾರ್ಥಿ ಸಂಘದ ನಿಕಟ ಪೂರ್ವ ಕಾರ್ಯದರ್ಶಿ ಸಂದೇಶ್ ಅಂಚನ್ ಸ್ವಾಗತಿಸಿದರು, ಕಾರ್ಯದರ್ಶಿ ಪ್ರಶ್ವಿತ್ ಕುಲಾಲ್ ವಂದಿಸಿದರು.