ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ: ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೆ ಅನಧಿಕೃತವಾಗಿ ದಾಖಲೆಗಳನ್ನು ಮಾಡಿಕೊಂಡಿರುವ ಕಾಲೇಜುಗಳ ವಿರುದ್ಧ ಕ್ರಮಕೈಗೊಂಡು ತರಗತಿ ಆರಂಭಕ್ಕೆ ಅನುಮತಿ ನೀಡಬಾರದು ಮತ್ತು ಸರ್ಕಾರಿ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಸಾಮೂಹಿಕ ರೈತಸಂಘದಿಂದ ಡಿಡಿಪಿಯು ರಾಮಚಂದ್ರಪ್ಪರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಸರ್ಕಾರಿ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಪೋಷಕರಲ್ಲಿ ಕಾಲೇಜುಗಳ ಬಗ್ಗೆ ಜಾಗೃತಿ ಮೂಡಿಸಿ ದಾಖಲಾತಿ ಹೆಚ್ಚಳ ಮಾಡಲು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಜೊತೆಗೆ ಪರವಾನಗಿ ಪಡೆಯದೆ ಅನಧಿಕೃತ ದಾಖಲಾತಿಗಳನ್ನು ಪ್ರಾರಂಭಿಸಿ ಕೋಟಿಕೋಟಿ ಡೊನೇಷನ್ ಲೂಟಿ ಮಾಡುತ್ತಿರುವ ನಾರಾಯಣ ಕಾಲೇಜಿನ ವಿರುದ್ಧ ಕ್ರಮಕೈಗೊಂಡು ಸ್ಥಳೀಯ ಕಾಲೇಜು ನಡೆಸುತ್ತಿರುವ ಮಾಲೀಕರಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಸಲಹೆ ನೀಡಿದರು.
ಅನಧಿಕೃತ ಕಾಲೇಜುಗಳಿಗೆ ತರಗತಿ ಆರಂಭಿಸಲು ಅವಕಾಶ ನೀಡಿದರೆ ಇಲಾಖೆ ಮುಂದೆ ಕುರಿಗಳ ಸಮೇತ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಾಹೇಬರ ಕಟ್ಟ ಕಡೆಯ ಪ್ರಜೆಗೂ ಶಿಕ್ಷಣ ದೊರೆಯಬೇಕೆಂಬ ಕನಸು ಕನಸಾಗಿಯೇ ಉಳಿಯುತ್ತಿದೆ. ಪೂರ್ವಜರ ಕಾಲದಲ್ಲಿ ಗುರುಕುಲದಿಂದ ಶಿಕ್ಷಣ ಪಡೆದ ಎಷ್ಟೋ ವ್ಯಕ್ತಿಗಳು ದೇಶದ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ.
ಆದರೆ, ಕಾಲ ಬದಲಾದಂತೆ ಶಿಕ್ಷಣದ ವ್ಯವಸ್ಥೆಯೂ ಬದಲಾಗುತ್ತಾ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಎಂಬುದು ವ್ಯಾಪಾರದ ವಸ್ತುವಾಗಿ ಮಾಲೀಕರಿಗೆ ಚಿನ್ನದ ಮೊಟ್ಟೆಯಿಡುವ ಇಲಾಖೆಯಾಗಿ ಮಾರ್ಪಡುವ ಜೊತೆಗೆ ಶಿಕ್ಷಣ ಸಚಿವರು, ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಅವರು ಹೇಳಿದ ಹಾಗೆ ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ನೆಪವನ್ನೇ ಬಂಡವಾಳವಾಗಿಸಿಕೊಂಡು ಖಾಸಗಿ ಕಾಲೇಜು ಮಾಲೀಕರು ಗಲ್ಲಿಗೆ ಒಂದಂತೆ ಅನಧಿಕೃತವಾಗಿ ಅನುಮತಿಯಿಲ್ಲದೆ ನಿರ್ಮಾಣ ಮಾಡಿ ಪೋಷಕರನ್ನು ಹಾಗೂ ಮಕ್ಕಳನ್ನು ತಲೆ ಕೆಡಿಸಿ ಲಕ್ಷಲಕ್ಷ ಡೊನೇಷನ್ ವಸೂಲಿ ಮಾಡುವ ದಂಧೆಯಲ್ಲಿ ತೊಡಗಿದ್ದರೂ ಇವರ ವಿರುದ್ಧ ಕ್ರಮಕೈಗೊಳ್ಳಬೇಕಾದ ಸಚಿವರು ಮೌನವಾಗಿರುವುದಕ್ಕೆ ಕಾರಣವಾದರೂ ಏನು ಎನ್ನುವುದು ಅರ್ಥವಾಗುತ್ತಿಲ್ಲವೆಂದು ಅಸಮಧಾನ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಜಿಲ್ಲಾದ್ಯಂತ ನಾಯಿಕೊಡೆಗಳಂತೆ ಜಾಹಿರಾತುಗಳನ್ನು ನೀಡುವ ಮುಖಾಂತರ ಪರವಾನಗಿ ಪಡೆಯದೆ ಸಿಬಿಎಸ್‍ಇ ಜೊತೆಗೆ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ನಮ್ಮ ಕಾಲೇಜಿಗೆ ಸೇರಿಸಿ ನಿಮ್ಮ ಮಕ್ಕಳನ್ನು ದೇಶದ ಉತ್ತಮ ಪ್ರಜೆಯಾಗಿ ಮಾಡುತ್ತೇವೆಂದು ಸೇರಿಸಿಕೊಂಡು ಡೊನೇಷನ್ ಪಡೆದ ನಂತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯದ ಜೊತೆಗೆ ಯಾವುದೇ ಪರವಾನಗಿ ಪಡೆಯದೆ ಮಕ್ಕಳನ್ನು ಪರೀಕ್ಷಾ ಸಮಯದಲ್ಲಿ ಬೀದಿಗೆ ನಿಲ್ಲಿಸುವಂತಹ ಮಟ್ಟಕ್ಕೆ ಕಾಲೇಜುಗಳು ಬೆಳೆದು ನಿಂತಿವೆ.
ಆನಂತರ ಮೋಸ ಹೋದ ಪೋಷಕರು ಮಕ್ಕಳ ಭವಿಷ್ಯ ಹಾಳಾಗುವ ಭಯದಲ್ಲಿ ತಮ್ಮ ಆರೋಗ್ಯಗಳನ್ನು ಕೆಡಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಪದವಿ ಶಿಕ್ಷಣ ಸಂಸ್ಥೆಯಿಂದ ಪರವಾನಗಿ ಪಡೆಯುವುದು ಒಂದಾದರೆ ತರಗತಿ ನಡೆಸುವುದು ಮತ್ತೊಂದು. ಯಾವುದೇ ಕಾಲೇಜಿಗೆ ವ್ಯವಸ್ಥಿತ ಕೊಠಡಿಗಳು, ಪ್ರಯೋಗಾಲಯಗಳು, ಆಟದ ಮೈದಾನ ಇರುವುದಿಲ್ಲ.
ಬಾಡಿಗೆ ಪಡೆದು ಒಂದೇ ರೂಮಿನಲ್ಲಿ 50 ರಿಂದ 100 ವಿದ್ಯಾರ್ಥಿಗಳವರೆಗೆ ಕುರಿಗಳಂತೆ ತುಂಬಿದ್ದರೂ ಇವರ ವಿರುದ್ಧ ಕ್ರಮಕೈಗೊಳ್ಳಲು ಮೀನಾಮೇಷ ಯಾಕೆ. ಕಾಲೇಜುಗಳಲ್ಲಿ ಲಕ್ಷಲಕ್ಷ ಡೊನೇಷನ್ ಪಡೆಯುತ್ತಿದ್ದರೂ ಇವರ ವಿರುದ್ಧ ಕ್ರಮಕೈಗೊಳ್ಳಲು ಭಯವೇ ಎಂದು ಪ್ರಶ್ನಿಸಿದರು.
ಒಟ್ಟಾರೆಯಾಗಿ ಜಿಲ್ಲಾದ್ಯಂತ ನಾಯಿಕೊಡೆಗಳಂತೆ ಅನಧಿಕೃತವಾಗಿ ಪರವಾನಗಿ ಪಡೆಯದೆ ದಾಖಲಾತಿ ಪ್ರಾರಂಭಿಸಿ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಕಾಲೇಜು ಮಾಲೀಕರ ವಿರುದ್ಧ ಕಾನೂನು ಕ್ರಮಕೈಗೊಂಡು ಕರಪತ್ರದ ಮುಖಾಂತರ ಅನಧಿಕೃತ ಕಾಲೇಜುಗಳ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕೆಂದು ಒತ್ತಾಯಿಸಿ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಡಿಡಿಪಿಯು ರಾಮಚಂದ್ರಪ್ಪ, ಜಿಲ್ಲಾದ್ಯಂತ ಅನಧಿಕೃತ ಕಾಲೇಜುಗಳು ಪರವಾನಗಿ ಪಡೆಯದೆ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುವ ದೂರುಗಳು ಹೆಚ್ಚಾಗಿವೆ. ಅದರಂತೆ ನಾರಾಯಣ ಎಂಬ ಕಾಲೇಜು, ರಾಕ್‍ವ್ಯಾಲಿ ಡೆಕ್ಕನ್ ಸ್ಕೂಲ್‍ನಲ್ಲಿ ಅನಧಿಕೃತವಾಗಿ ದಾಖಲಾತಿ ಮಾಡಿಕೊಳ್ಳುತ್ತಿರುವ ವಿರುದ್ಧ ಕೇಸು ದಾಖಲಿಸಿ ಶಾಲೆ ಆರಂಭಿಸದಂತೆ ನೋಟೀಸ್ ಕೊಡುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ, ಮಂಗಸಂದ್ರ ತಿಮ್ಮಣ್ಣ, ಪುತ್ತೇರಿ ರಾಜು, ಮೂರಂಡಹಳ್ಳಿ ಶಿವಾರೆಡ್ಡಿ ಮತ್ತಿತರರಿದ್ದರು.