ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ :- ಕೋವಿಡ್ 3 ನೇ ಅಲೆ ಬರುವುದಕ್ಕೆ ಮುಂಚಿತವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ , ಸೋಂಕು ಹೆಚ್ಚು ಹರಡುವುದನ್ನು ತಡೆಯಬೇಕು ಹಾಗೂ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಬೆಡ್ , ಆಕ್ಸಿಜನ್ , ಐ.ಸಿ.ಯು ಹಾಗೂ ವೈದ್ಯಕೀಯ ಸಿಬ್ಬಂದಿಯ ಕೊರತೆಯಾಗದಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಉಮಾ ಮಹಾದೇವನ್ ಅವರು ಹೇಳಿದರು . ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ , ಮುಂದೆ ಸಂಭವಿಸಬಹುದಾದ ಕೋವಿಡ್ 3 ನೇ ಅಲೆಯನ್ನು ತಡೆಯಲು ಇಂದಿನಿಂದ ಸಿದ್ಧರಾಗಿ ಆರೋಗ್ಯ ಸಿಬ್ಬಂದಿ , ಫ್ರಂಟ್ ಲೈನ್ ವರ್ಕಸ್್ರ ಹಾಗೂ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಕರೋನ ಲಸಿಕೆಯನ್ನು ನೀಡಬೇಕು . ಹೋಮ್ ಐಸೋಲೇಶನ್ನಲ್ಲಿದ್ದಂತಹ ಸೋಂಕಿತರು ಹಾಗೂ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕೋವಿಡ್ ಪರೀಕ್ಷೆ ಮಾಡಿ , ಪ್ರತಿ ಮನೆಗೂ ಭೇಟಿ ನೀಡಿ ಡಯಾಬಿಟಿಸ್ ಕಾಯಿಲೆಯ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು . ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಜಗದೀಶ್ ಅವರು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್ ಪ್ರಕರಣಗಳ ಪಾಸಿಟಿವಿಟಿ ರೇಟ್ 0.5 ಗಿಂತ ಕಡಿಮೆ ಬರುತ್ತಿದೆ . ಪ್ರತಿದಿನ 3000 ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ . 24 ಗಂಟೆಯಲ್ಲಿ ಕೋವಿಡ್ ಫಲಿತಾಂಶ ನೀಡಲಾಗುತ್ತಿದೆ . ಶೇ .100 ರಷ್ಟು ಹೋಮ್ ಐಸೋಲೇಶನ್ನಲ್ಲಿ ಇದ್ದಂತ ಸೋಂಕಿತರನ್ನು ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಯವರು ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು . ಮುಂದಿನ ದಿನಗಳಲ್ಲಿ ಬರಬಹುದಾದ ಕೋವಿಡ್ 3 ನೇ ಅಲೆಯನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಆಸ್ಪತ್ರೆಗಳಲ್ಲಿ ಬೆಡ್ , ಆಕ್ಸಿಜನ್ , ಐಸಿಯು ಹಾಗೂ ತಾಯಿ ಮಕ್ಕಳ ಆರೈಕೆ ಘಟಕಗಳ ವ್ಯವಸ್ಥೆ ಮಾಡಲಾಗಿದೆ . ಮಕ್ಕಳ ಆರೈಕೆಗಾಗಿ ಮಕ್ಕಳ ವೈದ್ಯರಿಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ . ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡುವುದರಿಂದ ಮಕ್ಕಳಲ್ಲಿ ಕೋವಿಡ್ ಸೋಂಕು ಕಂಡು ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ತಿಳಿಸಿದರು . ಪ್ರತಿಯೊಂದು ತಾಲ್ಲೂಕಿನಲ್ಲಿ ಕೋವಿಡ್ ಕೇರ್ ಸೆಂಟರ್ ಹಾಗೂ ಮಕ್ಕಳ ಆರೈಕೆ ಕೇಂದ್ರಗಳನ್ನು ಸಿದ್ಧ ಮಾಡಿಕೊಳ್ಳಿ , ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ಗಳ ಸಂಖ್ಯೆ ಹೆಚ್ಚಿಸಿ ಎಂದು ಅಧಿಕಾರಿಗಳಿಗೆ ಪ್ರಧಾನ ಕಾರ್ಯದರ್ಶಿಗಳು ಸೂಚಿಸಿದರು . ಶಾಲೆ – ಕಾಲೇಜುಗಳು ಹಾಗೂ ಅಂಗನವಾಡಿ ಕೇಂದ್ರಗಳು ಪ್ರಾರಂಭವಾಗುವುದರಿಂದ ಪ್ರತಿಯೊಬ್ಬರೂ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು . ಒಂದೂವರೆ ವರ್ಷದಿಂದ ಮಕ್ಕಳು ಶಾಲೆಗೆ ಬರದೇ ಹೊರಗೇ ಉಳಿದಿದ್ದಾರೆ . ಮಕ್ಕಳು ಖುಷಿಯಿಂದ ಶಾಲೆಗೆ ಬರುವುದಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಮತ್ತು ಶಾಲೆಗಳಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು . ಪ್ರತಿಯೊಂದು ಮಗುವಿಗೂ ಶೇ .100 ರಷ್ಟು ಶಿಕ್ಷಣ ನೀಡುವುದರ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು . ಅಪೌಷ್ಠಿಕ ಮಕ್ಕಳಿಗೆ ಹೆಚ್ಚಿನ ಪೌಷ್ಠಿಕ ಆಹಾರವನ್ನು ಒದಗಿಸಿ ಮಕ್ಕಳ ಆರೈಕೆಯ ಬಗ್ಗೆ ತಾಯಂದಿರಲ್ಲಿ ಅರಿವು ಮೂಡಿಸಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು .
ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯಲ್ಲಿ ಪ್ರತಿಯೊಬ್ಬ ನಾಗರಿಕರನ್ನು 7 ವಾರಗಳಲ್ಲಿ ನೊಂದಾಯಿಸಿ ಅವರಿಗೆ ಚೀಟಿಗಳನ್ನು ನೀಡಿ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು . ತೋಟಗಾರಿಕೆ ಹಾಗೂ ಕೃಷಿ ಉತ್ಪನ್ನ ಮಳಿಗೆಗಳನ್ನು ತಾಲ್ಲೂಕಿಗೆ 2 ರಂತೆ ಪ್ರವಾಸಿತಾಣಗಳಲ್ಲಿ ಸ್ಥಾಪಿಸಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿ , ಅವರ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು . ಜಿಲ್ಲೆಯಲ್ಲಿ ಪ್ರಾಣಿಗಳಿಗೆ ಬರುವ ಕಾಯಿಲೆ ತಡೆಯಲು ಶೀಘ್ರವಾಗಿ ಲಸಿಕೆಯನ್ನು ನೀಡಬೇಕು . ನರೇಗಾ ಯೋಜನೆಯಡಿ ಕೋಳಿ ಫಾರ್ಮ್ ಮತ್ತು ಕೋಳಿ ಸಾಕಾಣಿಕೆ ಮಾಡಲು ಮಹಿಳಾ ಸಂಘಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಅಧಿಕಾರಿಗಳಿಗೆ ಸೂಚಿಸಿದರು . ಎಲ್ಲಾ ಜಿಲ್ಲೆಯಲ್ಲಿ ಮಳೆಯು ಚೆನ್ನಾಗಿ ಆಗುತ್ತಿರುವುದರಿಂದ ನರೇಗಾ ಯೋಜನೆಯಡಿ ತಾಲ್ಲೂಕುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯ ಕೃಷಿ ಹೊಂಡಗಳನ್ನು ನಿರ್ಮಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು . ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ || ಆರ್.ಸೆಲ್ವಮಣಿ , ಜಿಲ್ಲಾ ಪಂಚಾಯತ್ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕಾ ಕಿಶೋರ್ ಬಾಬು , ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು .